ದಾವಣಗೆರೆ: ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಪ್ರತಿಭಟನೆ
ದಾವಣಗೆರೆ,ನ.12: ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ, ಜಿಲ್ಲಾ ಸಮಿತಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಿಂದ ರೈತರು ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುತ್ತಿಗೆ ಹಾಕುವ ಮೂಲಕ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಕೇಂದ್ರ ಸರ್ಕಾರವು ಮೆಕ್ಕೆಜೋಳ, ಭತ್ತಕ್ಕೆ ಬೆಂಬಲ ಬೆಲೆ ನೀಡಿದ್ದು, ಅದಕ್ಕೆ ರಾಜ್ಯ ಸರ್ಕಾರವು ಬತ್ತಕ್ಕೆ 2000 ರೂ., ಮೆಕ್ಕೆಜೋಳಕ್ಕೆ 1500 ರೂ. ಬೋನಸ್ ನೀಡಬೇಕು. ಖರೀದಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಮೆಕ್ಕೆಜೋಳ, ಭತ್ತ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ಶೇಂಗಾ, ಬತ್ತ, ಮೆಕ್ಕೆಜೋಳ, ಸೂರ್ಯಕಾಂತಿಗೆ ಬೆಂಬಲ ಬೆಲೆಯ ಜೊತೆಗೆ ಬೋನಸ್ ನೀಡಿ, ಖರೀದಿ ಕೇಂದ್ರದ ಮೂಲಕ ಖರೀದಿ ಪ್ರಕ್ರಿಯೆ ಆರಂಭಿಸ ಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಘೋಷಿಸಿರುವ ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ಖರೀದಿಸುವ ಖರೀದಿದಾರರ ಲೈಸೆನ್ಸ್ ರದ್ಧುಪಡಿಸುವ ಜೊತೆಗೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಈ ನಿಟ್ಟಿನಲ್ಲಿ ಎಪಿಎಂಸಿ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ದಾವಣಗೆರೆ ಜಿಲ್ಲೆಯ ಬೆಳೆ ನಷ್ಟ ವಿವರವನ್ನು ಸಮರ್ಪಕವಾಗಿ ಕೃಷಿ ಇಲಾಖೆ ನೀಡಿಲ್ಲ. ಶೇ.50ರಷ್ಟು ಮಾತ್ರ ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದೆ. ಇದು ತಪ್ಪು ಗ್ರಹಿಕೆಯಿಂದ ಕೂಡಿರುವ ಬೆಳೆ ಹಾನಿ ವರದಿಯಾಗಿದೆ. ಜಿಲ್ಲೆಯಲ್ಲಿ ಶೇ.80ರಷ್ಟು ಬೆಳೆ ನಾಶವಾಗಿದ್ದು, ಜಿಲ್ಲಾಡಳಿತವು ತಕ್ಷಣವೇ ಬೆಳೆ ಹಾನಿ ಬಗ್ಗೆ ಮರು ಪರಿಶೀಲನೆ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಬೆಳೆ ಹಾನಿಯಿಂದ ಆಗಿರುವ ನಷ್ಟ, ಹಾನಿ ಬಗ್ಗೆ ವಾಸ್ತವ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಅರಸನಾಳು ಸಿದ್ದಪ್ಪ, ಚಿಕ್ಕಮಲ್ಲನಹಳ್ಳಿ ಚಿರಂಜೀವಿ, ಗುಮ್ಮನೂರು ಬಸವರಾಜ, ಯಲೋದಹಳ್ಳಿ ರವಿಕುಮಾರ, ದ್ಯಾಮಜ್ಜಿ ಹನುಮಂತಪ್ಪ, ಆಲೂರು ಪರಶುರಾಮ, ಗಡಿಮಾಕುಂಟೆ ಬಸವರಾಜಪ್ಪ, ಇಂಗಳಗುಂದಿ ದುರುಗಪ್ಪ, ಅರಕೇರಿ ನಾಗರಾಜ, ಲಕ್ಷ್ಮಣ ನಾಯ್ಕ, ಪುಟ್ಟನಾಯ್ಕ, ಹುಚ್ಚವ್ವನಹಳ್ಳಿ ಪ್ರಕಾಶ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.