ರೈತರ ಬೀಳು ಭೂಮಿ ಕಿತ್ತುಕೊಳ್ಳಲು ಅವಕಾಶ ನೀಡುವುದಿಲ್ಲ: ರೈತ ಸಂಘ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್

Update: 2018-11-12 18:02 GMT

ಗುಬ್ಬಿ/ತುಮಕೂರು.ನ.12: ರೈತರು ಉಳುಮೆ ಮಾಡದೆ ಬೀಳು ಬಿಟ್ಟ ಜಮೀನನ್ನು ಸರಕಾರ ಕಿತ್ತುಕೊಳ್ಳಲು ಮುಂದಾಗಿದೆ. ಮುಂಬರುವ ಬೆಳಗಾಂ ಅಧಿವೇಶನದಲ್ಲಿ ಈ ಸಂಬಂಧ ಕಾಯ್ದೆ ಜಾರಿಗೆ ಚಿಂತನೆ ನಡೆದಿದೆ. ಇದಕ್ಕೆ ರೈತ ಸಂಘದ ತೀವ್ರ ವಿರೋಧವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ತಿಳಿಸಿದ್ದಾರೆ.

ಗುಬ್ಬಿ ತಾಲೂಕು ಬೆಲವತ್ತ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕುಮಾರಸ್ವಾಮಿ ಸರಕಾರ ರೈತರ ಬೀಳು ಭೂಮಿ ಮೇಲೆ ಕಣ್ಣು ಹಾಕಿದರೆ ಸುಮ್ಮನಿರಲ್ಲ. ಇಂತಹ ತಪ್ಪು ಕೆಲಸಕ್ಕೆ ಕೈಹಾಕಿದರೆ ಪರಿಣಾಮ ನೆಟ್ಟಗಿರಲ್ಲ. ನನ್ನ ಕಟ್ಟ ಕಡೆಯ ಉಸಿರು ಇರೋವರೆಗೂ ರೈತರ ಬೀಳು ಭೂಮಿ ಕಿತ್ತುಕೊಳ್ಳಲು ಸರಕಾರಕ್ಕೆ ಆಸ್ಪದ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.

ಮಳೆ ಬರಲಿಲ್ಲ ಎಂದರೆ ರೈತರು ಬೆಳೆ ಬೆಳೆಯಲು ಸಾಧ್ಯವಿಲ್ಲ. ರೈತರು ಮಳೆ ಬೆಳೆ ಇಲ್ಲದೆ, ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ರೈತರನ್ನು ಕಾಪಾಡುವ, ಉತ್ತಮ ಬೆಲೆ ನೀಡುವ, ನೀರಾವರಿ ಯೋಜನೆ ಮಾಡುವ ಬಗ್ಗೆ ಸಿಎಂ ಕುಮಾರಸ್ವಾಮಿ ಚಿಂತಿಸಬೇಕಿತ್ತು. ಅದು ಬಿಟ್ಟು ಬೀಳು ಭೂಮಿ ಮೇಲೆ ಕಣ್ಣು ಹಾಕಿ ಅದನ್ನು ಕಿತ್ತುಕೊಂಡು ಬಂಡವಾಳ ಶಾಹಿಗಳಿಗೆ ನೀಡಿ, ಹಣ ಮಾಡಲು ಮುಂದಾದಂತಿದೆ. ಹಳ್ಳಿಗಳಲ್ಲಿ ಬಡತನವಿದೆ. ರಾಜಕೀಯ ನಾಯಕರು ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಇದರ ಪರಿಣಾಮ ಹಳ್ಳಿಗಳಲ್ಲಿ ಉದ್ಯೋಗ ಇಲ್ಲದಂತಾಗಿದೆ. ಇರುವ ಉದ್ಯೋಗ ಕೃಷಿಯನ್ನು ಮರೆಯುವಂತೆ ಮಾಡುತ್ತಿದ್ದಾರೆ. ಲಾಭದಾಯಕವಾದ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿಲ್ಲ. ರಾಜಕೀಯ ಪಕ್ಷಗಳು ಹಳ್ಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡರಾದಿಯಾಗಿ ಎಲ್ಲರೂ ನಾವು ರೈತರ ಮಕ್ಕಳು, ಮಣ್ಣಿನ ಮಕ್ಕಳು ಎಂದು ಹೇಳುತ್ತಾರೆ. ಆದರೆ ರೈತಪರ ಯೋಜನೆಯನ್ನೇ ಜಾರಿ ಮಾಡಲ್ಲ. ರೈತರ ಕಷ್ಟ ಆಲಿಸಲ್ಲ, ಬೇಡಿಕೆ ಈಡೇರಿಸಿ ಎಂದರೆ ಮೌನವಾಗುತ್ತಾರೆ. ಹಾಗಾದರೆ ಇವರು ಹೇಗೆ ರೈತರ ಮಕ್ಕಳಾಗಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಸಾಲ ಮನ್ನಾ ವಿಚಾರವೇ ಇಂದು ಪಕ್ಷಗಳಿಗೆ ರಾಜಕೀಯ ವಿಷಯವಾಗಿದೆ. ಇದುವರೆಗೂ ಸಾಲ ಮನ್ನಾದ ಬಗ್ಗೆ ಸ್ಪಷ್ಟತೆ ಕಂಡು ಬಂದಿಲ್ಲ. 2019 ಲೋಕಸಭೆ ಚುನಾವಣೆ ವರೆಗೂ ಸಾಲ ಮನ್ನಾ ವಿಚಾರ ಚರ್ಚೆಗೆ ಬರುತ್ತಲೇ ಇರುತ್ತದೆ. ಸರಕಾರ ರೈತರ ಬದುಕು ಹಸನಾಗಲಿ ಎಂಬ ದೃಷ್ಟಿಯಿಂದ ಸಾಲ ಮನ್ನಾ ಮಾಡಿಲ್ಲ. ಬದಲಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ಓಟ್ ಪಡೆಯುವುದಕ್ಕಾಗಿ ಸಾಲ ಮನ್ನಾ ನಾಟಕವಾಡುತ್ತಿದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಕೆ.ಟಿ.ಗಂಗಾಧರ್ ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಕೃಷಿಕರ ಬದುಕು ಇಂದಿಗೂ ಅತಂತ್ರ ಸ್ಥಿತಿಯಲ್ಲಿದೆ. ಸಾಲಭಾದೆ ತಾಳಲಾರದೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ದೇಶಕ್ಕೆ ಅನ್ನ ನೀಡುವ ರೈತ ಕಷ್ಟದಲ್ಲೇ ಬದುಕುತ್ತಿದ್ದಾನೆ. ಭರವಸೆ ನೀಡುವ ಸರಕಾರಗಳಿಂದ ರೈತರಿಗೆ ಯಾವುದೇ ಅನುಕೂಲವಾಗಿಲ್ಲ. ರೈತರ ಬೆವರಿಗೆ ಪ್ರತಿಫಲ ಸಿಕ್ಕಿಲ್ಲ. ಕಳೆದ 10 ವರ್ಷದಲ್ಲಿ 19 ಸಾವಿರ ರೈತರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಇದೆಲ್ಲಾ ನಮ್ಮ ಸರಕಾರಗಳಿಗೆ ಅರ್ಥವಾಗುತ್ತಿಲ್ಲ. ರೈತ ಸಂಘದ ಪದಾಧಿಕಾರಿಗಳು ಎಚ್ಚೆತ್ತು ಸರಕಾರದ ವಿರುದ್ಧ ಹೋರಾಟ ಮಾಡಿಯೇ ಸೌಲಭ್ಯ ಪಡೆಯಬೇಕಿದೆ. ರೈತರು ಕೂಡ ಮೋಸ ಮಾಡುವ ರಾಜಕೀಯ ಪಕ್ಷಗಳ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ಹೇಳಿದರು.

ಇದೇ ವೇಳೆ ಬೆಲವತ್ತ ಗ್ರಾಮ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಿಸಿ ಹಸಿರು ಧೀಕ್ಷೆ ನೀಡಲಾಯಿತು. ರೈತ ಮುಖಂಡರಾದ ಲಕ್ಕೇಗೌಡ, ವೆಂಕಟೇಶ್‍ಗೌಡ, ತಮ್ಮಣ್ಣ, ಕಾಳೇಗೌಡ, ಹುಚ್ಚೇಗೌಡ, ಮೂಡ್ಲಪ್ಪ, ಜಗದೀಶ್, ಶಿವಕುಮಾರ್, ಪ್ರಭಾಕರ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News