ಶಿವಮೊಗ್ಗದ ನೂತನ ಸಂಸದರ ಮುಂದಿದೆ ನೂರೆಂಟು ಸವಾಲುಗಳು

Update: 2018-11-12 18:13 GMT

ಶಿವಮೊಗ್ಗ, ನ. 12: ಇತ್ತೀಚೆಗೆ ಪೂರ್ಣಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯ ಸಾಧಿಸಿ ಎರಡನೇ ಬಾರಿ ಲೋಕಸಭೆ ಪ್ರವೇಶಿಸಿರುವ ಬಿ.ವೈ.ರಾಘವೇಂದ್ರರ ಮುಂದೆ ನೂರೆಂಟು ಸವಾಲುಗಳಿವೆ. ಉಳಿದಿರುವ ಐದಾರು ತಿಂಗಳ ಅಧಿಕಾರಾವಧಿಯಲ್ಲಿ, ಕೇಂದ್ರ ಸರ್ಕಾರದ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಏನೆಲ್ಲ ಕೆಲಸ ಮಾಡಲಿದ್ದಾರೆಂಬ ಕುತೂಹಲ ನಾಗರಿಕ ವಲಯದಲ್ಲಿದೆ. 

2019 ರ ಏಪ್ರಿಲ್ - ಮೇ ತಿಂಗಳಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ. ಮುಂದಿನ ಚುನಾವಣೆಯಲ್ಲಿಯೂ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಈ ಕಾರಣದಿಂದ ಸೀಮಿತಾವದಿಯಲ್ಲಿಯೇ ಕ್ಷೇತ್ರದ ಮತದಾರರ ಗಮನ ಸೆಳೆಯಲೇ ಬೇಕಾದ ಅನಿವಾರ್ಯತೆಯಲ್ಲಿ ಬಿ.ವೈ.ರಾಘವೇಂದ್ರ ಸಿಲುಕಿದ್ದಾರೆ. 

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ಆಡಳಿತದಲ್ಲಿರುವುದರಿಂದ, ಕ್ಷೇತ್ರದ ವಿವಿಧ ವಲಯಗಳ ಅಭಿವೃದ್ದಿ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ತರುವುದು ಬಿ.ವೈ.ರಾಘವೇಂದ್ರಗೆ ಕಷ್ಟವಾಗಲಾರದು. ಆದರೆ ಇದಕ್ಕೆ ಇಚ್ಛಾಶಕ್ತಿಯ ಜೊತೆಗೆ, ಸಮರೋಪಾದಿ ಕಾರ್ಯನಿರ್ವಹಣೆ ಅವಶ್ಯಕವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ವಾಯುಯಾನ, ದೂರ ಸಂಪರ್ಕ, ಆರೋಗ್ಯ, ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ವಲಯಗಳಲ್ಲಿ ಹಲವು ಕೆಲಸಕಾರ್ಯಗಳು ಕೇಂದ್ರ ಸರ್ಕಾರದಿಂದ ನಡೆಯಬೇಕಾಗಿವೆ. ಕೆಲ ಯೋಜನೆಗಳು ಜಾರಿಗೊಂಡು ಅನುದಾನದ ಕೊರತೆಯಿಂದ ಕುಂಟುತ್ತಾ, ತೆವಳುತ್ತಾ ಸಾಗಿವೆ. ಇನ್ನೂ ಕೆಲವು ಘೋಷಣೆಯಾಗಿ ಉಳಿದುಕೊಂಡಿವೆ. ಮತ್ತೆ ಕೆಲವು ಘೋಷಣೆಯಾಗಬೇಕಾಗಿದೆ. ಕೇಂದ್ರದ ನೆರವಿನ ನಿರೀಕ್ಷೆಯಲ್ಲಿರುವ ಯೋಜನೆಗಳ ಸಂಕ್ಷಿಪ್ತ ವಿವರ ಈ ಮುಂದಿನಂತಿದೆ. 

ಎನ್‍ಹೆಚ್‍ಎಐನಿಂದ ಶಿವಮೊಗ್ಗದ ಹೊರವರ್ತುಲ ರಸ್ತೆ ಅಭಿವೃದ್ದಿಯಾಗಬೇಕು
ಶಿವಮೊಗ್ಗ ನಗರದಲ್ಲಿ 200 ಅಡಿ ಅಗಲದ ಸುಮಾರು 35 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ 1000 ಕೋಟಿ ರೂ.ಗೂ ಅಧಿಕ ಮೊತ್ತದ ಅವಶ್ಯಕತೆಯಿದೆ. ಇದರಿಂದ ರಾಜ್ಯ ಸರ್ಕಾರ ಈ ಯೋಜನೆಯ ಕಾರ್ಯಗತಕ್ಕೆ ಗಮನಹರಿಸುತ್ತಿಲ್ಲ. ಈ ಹಿಂದಿನ ಸಂಸದ ಬಿ.ಎಸ್.ಯಡಿಯೂರಪ್ಪ ಕಾರಣದಿಂದ, ಪ್ರಸ್ತುತ ವರ್ತುಲ ರಸ್ತೆಯ 15 ಕಿ.ಮೀ. ಕಾಮಗಾರಿಯನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ (ಎನ್.ಹೆಚ್.ಎ.ಐ.) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ಎನ್.ಹೆಚ್.ಎ.ಐ. ಭೂ ಸ್ವಾದೀನ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆದರೆ ಈ ಪ್ರಕ್ರಿಯೆ ವಿಳಂಬಗತಿಯಲ್ಲಿ ಸಾಗುತ್ತಿದೆ. ಕೇಂದ್ರದಿಂದ ಸೂಕ್ತ ಅನುದಾನ ಲಭ್ಯವಾಗುತ್ತಿಲ್ಲ. 

ಮತ್ತೊಂದೆಡೆ ಹೊರವರ್ತುಲ ರಸ್ತೆಯ 35 ಕಿ.ಮೀ. ಕಾಮಗಾರಿಯನ್ನೂ ಎನ್.ಹೆಚ್.ಎ.ಐ. ಮೂಲಕವೇ ಅನುಷ್ಠಾನಗೊಳಿಸಬೇಕೆಂಬ ಒತ್ತಾಯ ನಾಗರಿಕರದ್ದಾಗಿದೆ. ಈ ಕುರಿತಂತೆ ಸಂಸದರು, ಕೇಂದ್ರ ಭೂ ಸಾರಿಗೆ ಸಚಿವರ ಜೊತೆ ಸಮಾಲೋಚಿಸಿಬೇಕು. ಹೊರವರ್ತುಲ ರಸ್ತೆ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಗಮನಹರಿಸಬೇಕಾಗಿದೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಮೂಲಕ ಹಾದು ಹೋಗುವ ಎನ್.ಹೆಚ್.206 ಹಾಗೂ ಎನ್.ಹೆಚ್. 13 ರ ಆಯ್ದ ವಲಯಗಳಲ್ಲಿ ಚತುಷ್ಪಥ ಮಾರ್ಗವಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸಾರಿಗೆ ಇಲಾಖೆ ನಿರ್ಧರಿಸಿದೆ. ಅನುದಾನದ ಕೊರತೆ ಮತ್ತಿತರ ಕಾರಣಗಳಿಂದ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ಸಾಗುತ್ತಿಲ್ಲವಾಗಿದೆ. 

ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ತಾಣ ಸಿಗಂದೂರು ಸಮೀಪದ ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಅನುದಾನ ಬಿಡುಗಡೆ ಭರವಸೆ ನೀಡಿದೆ. ಆದರೆ ಇಲ್ಲಿಯವರೆಗೂ ಸೇತುವೆ ಕಾಮಗಾರಿ ಆರಂಭವಾಗಿಲ್ಲ. ಕಾಲಮಿತಿಯಲ್ಲಿ ಕಾಮಗಾರಿ ಚಾಲನೆಗೆ ಕ್ರಮಕೈಗೊಳ್ಳಬೇಕಾಗಿದೆ. ಹಾಗೆಯೇ ಜಿಲ್ಲೆಯ ಕೆಲ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವ ಪ್ರಸ್ತಾಪವಿದ್ದು, ಈ ಬಗ್ಗೆಯೂ ಸಂಸದರು ಚಿತ್ತ ಹರಿಸಬೇಕಾಗಿದೆ. 

ಸಂಪೂರ್ಣ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳು
ಶಿವಮೊಗ್ಗ ಕ್ಷೇತ್ರಕ್ಕೆ ಸಂಬಂಧಿಸಿದ ಹತ್ತು ಹಲವು ರೈಲ್ವೆ ಯೋಜನೆಗಳು ಕಳೆದ ಹಲವು ವರ್ಷಗಳಿಂದ ಸಂಪೂರ್ಣ ನೆನೆಗುದಿಗೆ ಬಿದ್ದಿವೆ. ಕೇಂದ್ರ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿವೆ. ಇದರಲ್ಲಿ ಶಿವಮೊಗ್ಗ - ಹರಿಹರ ನಡುವೆ ನೂತನ ಮಾರ್ಗ ನಿರ್ಮಾಣ ಕೂಡ ಒಂದಾಗಿದೆ. ಈ ಯೋಜನೆಗೆ ಅನುಮತಿ ಸಿಕ್ಕು ಈಗಾಗಲೇ ಎಂಟು ವರ್ಷಗಳೇ ಆಗುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ಮಾರ್ಗ ನಿರ್ಮಾಣ ಮಾತ್ರ ಆರಂಭಗೊಂಡಿಲ್ಲ. ಸಹಭಾಗಿತ್ವದಡಿ ಕೈಗೆತ್ತಿಕೊಳ್ಳಲಾಗಿರುವ ಈ ಯೋಜನೆಗೆ, ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡಲು ನಿರಾಕರಿಸಿದೆ. ಈ ಕಾರಣದಿಂದ ಕೇಂದ್ರದ ಮೂಲಕವೇ ಕಾಮಗಾರಿ ನಿರ್ವಹಣೆಗೆ ಸಂಸದರು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. 

ಉಳಿದಂತೆ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, ತಾಳಗುಪ್ಪ - ಸಿದ್ದಾಪುರ ಮಾರ್ಗ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿಸಬೇಕಾಗಿದೆ. ಶಿವಮೊಗ್ಗ - ಬೀರೂರು ನಡುವಿನ ರೈಲ್ವೆ ಮಾರ್ಗ ಡಬ್ಲಿಂಗ್ ಕಾರ್ಯ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕಾಗಿದೆ. ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಲ್ಲಿರುವ ಕೇಂದ್ರ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಬೇಕಾಗಿದೆ. ಶಿವಮೊಗ್ಗ ನಗರದ ಕೇಂದ್ರ ರೈಲ್ವೆ ನಿಲ್ದಾಣ ಆವರಣದಲ್ಲಿರುವ ಗೂಡ್ಸ್ ಶೆಡ್‍ನ್ನು ನಗರದ ಹೊರವಲಯ ಕೋಟೆಗಂಗೂರು ಗ್ರಾಮಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಬೇಕಾಗಿದೆ. ನಗರದ ವಿನೋಬನಗರ ಬಡಾವಣೆಯಲ್ಲಿ ರೈಲ್ವೆ ನಿಲ್ದಾಣ ಪ್ರಾರಂಭ, ಶಿವಮೊಗ್ಗ ನಗರ ಸೇರಿದಂತೆ ವಿವಿಧೆಡೆ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಇಲಾಖೆಯಿಂದ ಅಗತ್ಯ ಅನುದಾನವನ್ನು ಸಂಸದರು ದೊರಕಿಸಿಕೊಡಬೇಕಾಗಿದೆ. 

ವಿಮಾನ ನಿಲ್ದಾಣ ಕಾಮಗಾರಿಯನ್ನು ಕೇಂದ್ರ ಸರ್ಕಾರವೇ ನಿರ್ವಹಿಸಲಿ
ಶಿವಮೊಗ್ಗ ನಗರದ ಹೊರವಲಯ ಸೋಗಾನೆ ಗ್ರಾಮದ ಬಳಿ ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ಈಗಾಗಲೇ ಐದಾರು ವರ್ಷಗಳೇ ಕಳೆದಿವೆ. ಇಲ್ಲಿಯವರೆಗೂ ಕಾಮಗಾರಿ ಟೇಕಾಫ್ ಆಗಿಲ್ಲ. ಈ ಹಿಂದೆ ಕೇಂದ್ರ ಸರ್ಕಾರದ ವಿಮಾನಯಾನ ಸಚಿವರು, ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಕ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಕೇಂದ್ರದ ಅಧಿಕಾರಿಗಳ ತಂಡ ಕೂಡ ವಿಮಾನ ನಿಲ್ದಾಣ ಪ್ರದೇಶಕ್ಕೆ ಭೇಟಿಯಿತ್ತು ಪರಿಶೀಲಿಸಿತ್ತು. ರಾಜ್ಯ ಸರ್ಕಾರವು ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಾಮಗಾರಿ ವಹಿಸಲು ಸಿದ್ದವೆಂದು ಘೋಷಿಸಿತ್ತು. ಕಾಲಾಂತರದಲ್ಲಿ ಈ ಪ್ರಸ್ತಾಪ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಈ ಕುರಿತಂತೆ ಸಂಸದರು ವಿಮಾನಯಾನ ಸಚಿವರು ಹಾಗೂ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಬೇಕು. ಕೇಂದ್ರದ ಮೂಲಕವೇ ವಿಮಾನ ನಿಲ್ದಾಣ ಕಾಮಗಾರಿ ಅನುಷ್ಠಾನಗೊಳಿಸುವ ಸಂಬಂಧ ಆದ್ಯ ಗಮನಹರಿಸಬೇಕಾಗಿದೆ. 

ದೂರಸಂಪರ್ಕ, ಪ್ರವಾಸೋದ್ಯಮ, ಕೈಗಾರಿಕೆ, ಆಸ್ಪತ್ರೆ ಅಭಿವೃದ್ದಿ
ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ಸೇವೆಯು ಶಿವಮೊಗ್ಗ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿಲ್ಲ. ಹಲವು ನ್ಯೂನ್ಯತೆಗಳಿಂದ ಕೂಡಿದೆ. ಇದರಿಂದ ಮೊಬೈಲ್, ಅಂತರ್ಜಾಲ ಸೇವೆ ಪಡೆಯಲು ನಾಗriಕರು ನಾನಾ ತೊಂದರೆ ಎದುರಿಸುವಂತಾಗಿದೆ. ಈ ಕಾರಣದಿಂದ ಬಿಎಸ್ಎನ್ಎಲ್ ದೂರ ಸಂಪರ್ಕ ಸೇವೆಯನ್ನು ಕ್ಷೇತ್ರದಲ್ಲಿ ಮತ್ತಷ್ಟು ಸದೃಢಗೊಳಿಸುವ ಕಾರ್ಯಕ್ಕೆ ಸಂಸದರು ಮುಂದಾಗಬೇಕು. ಮಲೆನಾಡು ಭಾಗಗಳಲ್ಲಿ ಹೊಸ ಟವರ್‍ಗಳ ಅಳವಡಿಕೆ, ಅಗತ್ಯವಿರುವೆಡೆ ಬಿಎಸ್ಎನ್ಎಲ್ ಶಾಖಾ ಕಚೇರಿ ಸ್ಥಾಪನೆಯತ್ತ ಸಂಸದರು ಗಮನಹರಿಸಬೇಕು. 

ಹಾಗೆಯೇ ಕ್ಷೇತ್ರದ ವಿವಿಧೆಡೆಯಿರುವ ಪ್ರವಾಸಿ ತಾಣಗಳ ಅಭಿವೃದ್ದಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡಿಸಬೇಕು. ಪ್ರಮುಖ ಪ್ರವಾಸಿ ತಾಣಗಳ ಬಳಿ ಹೆಲಿಪ್ಯಾಡ್, ಏರ್‍ಸ್ಟ್ರಿಪ್ ನಿರ್ಮಿಸಬೇಕು. ಜಿಲ್ಲೆಯ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಗಮನಹರಿಸಬೇಕು. ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆ ನವೀಕರಣಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು. ಈ ಹಿಂದೆ ಕೇಂದ್ರ ಉಕ್ಕು ಸಚಿವರು ನೀಡಿದ್ದ ಭರವಸೆಯಂತೆ ಕಾರ್ಖಾನೆಯ ನವೀಕರಣ ಕಾರ್ಯಕ್ಕೆ ಚಾಲನೆ ಕೊಡಿಸಬೇಕು. ಶಿವಮೊಗ್ಗ ನಗರಕ್ಕೆ ಮಂಜೂರಾಗಿರುವ ಇಎಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಜಾಗದ ಸಮಸ್ಯೆ ಪರಿಹರಿಸಬೇಕು. 

ಪ್ರಮುಖ ಹೈಲೈಟ್ಸ್ ಗಳು
-ನಷ್ಟದಲ್ಲಿರುವ ಭದ್ರಾವತಿ ವಿಐಎಸ್‍ಎಲ್ ಕಾರ್ಖಾನೆಗೆ ಅನುದಾನ 
-ಕೇಂದ್ರದ ಎನ್.ಹೆಚ್.ಎ.ಐ.ನಿಂದ ಶಿವಮೊಗ್ಗ ನಗರದ ನೂತನ ಹೊರವರ್ತುಲ ರಸ್ತೆ ನಿರ್ಮಾಣ
-ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುದಾನ
-ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, ಶಿವಮೊಗ್ಗ-ಸಿದ್ದಾಪುರ ಮಾರ್ಗ ನಿರ್ಮಾಣಕ್ಕೆ ಕ್ರಮ
-ಶಿವಮೊಗ್ಗ ಹೊರವಲಯ ಕೋಟೆಗಂಗೂರಿಗೆ ರೈಲ್ವೆ ಗೂಡ್ಸ್‍ಶೆಡ್ ಸ್ಥಳಾಂತರಕ್ಕೆ ಕ್ರಮ
-ರೈಲ್ವೆ ಮೇಲ್ಸೇತುವೆಗಳು ಹಾಗೂ ವಿನೋಬನಗರದ ಬಳಿ ಹೊಸ ರೈಲ್ವೆ ನಿಲ್ದಾಣ ಸ್ಥಾಪನೆ
-ಶಿವಮೊಗ್ಗ, ಭದ್ರಾವತಿ ಮುಖ್ಯ ರೈಲ್ವೆ ನಿಲ್ದಾಣಗಳ ಸರ್ವಾಂಗೀಣ ಅಭಿವೃದ್ದಿಗೆ ಕ್ರಮ
-ಕೇಂದ್ರ ಸರ್ಕಾರಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಹಸ್ತಾಂತರ
-ಇಎಸ್‍ಐ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಕ್ರಮ
-ಶರಾವತಿ ಹಿನ್ನೀರಿನ ತುಮರಿ ಬಳಿ ಸೇತುವೆ ನಿರ್ಮಾಣ 
-ದೂರ ಸಂಪರ್ಕ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಕ್ರಮ
-ಕ್ಷೇತ್ರದ ವಿವಿಧೆಡೆ ಗಾರ್ಮೆಂಟ್ಸ್ ಫ್ಯಾಕ್ಟರಿಗಳ ಸ್ಥಾಪನೆ

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News