ಮಲೆನಾಡಿನಲ್ಲಿ ಮನುಷ್ಯರ ಅಸ್ತಿತ್ವ ನಾಶ ಮಾಡಲಿರುವ ಕಸ್ತೂರಿ ರಂಗನ್ ವರದಿ: ಕಲ್ಕುಳಿ ವಿಠಲ್ ಹೆಗಡೆ

Update: 2018-11-13 12:59 GMT

ಜಯಪುರ, ನ.13: ಕೇರಳ, ಕೊಡಗಿನಲ್ಲಿ ಮಳೆಯಿಂದ ಬಹಳ ದೊಡ್ಡ ಅನಾಹುತವಾಗಿದ್ದು, ಇಂತಹ ಅನಾಹುತ ತಡೆಯಲು ಕಸ್ತೂರಿರಂಗನ್ ವರದಿ ಜಾರಿಮಾಡಬೇಕೆಂದು ಎನ್.ಜಿ.ಒ ಸಂಸ್ಥೆಗಳು ಹಸಿರು ಸುಪ್ರೀಂ ಕೋರ್ಟ್‍ನ ಪೀಠಕ್ಕೆ ತಪ್ಪು ಮಾಹಿತಿಯನ್ನು ನೀಡಿದ್ದರ ಫಲವಾಗಿ ಕಸ್ತೂರಿ ರಂಗನ್ ವರದಿ ಜಾರಿಗೆ ನ್ಯಾಯಾಲಯ ಆದೇಶ ನೀಡಿದೆ. ಮಲೆನಾಡಿನಲ್ಲಿ ಕಾಡಿನ ಹೊರತಾಗಿ ಮನುಷ್ಯರ ಅಸ್ತಿತ್ವವೇ ಇಲ್ಲದಂತೆ ಮಾಡುವ ಈ ವರದಿ ಜಾರಿಯಾಗುವುದನ್ನು ತಡೆಯದಿದ್ದಲ್ಲಿ ಇಲ್ಲಿನ ಜನರು ಗುಳೇ ಹೋಗುವುದು ಅನಿವಾರ್ಯವಾಗಿದೆ ಎಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ್ ಹೆಗಡೆ ಎಚ್ಚರಿಸಿದ್ದಾರೆ.

ಪಟ್ಟಣದ ಆಟೊ ನಿಲ್ದಾಣದ ಆವರಣದಲ್ಲಿ ಮಂಗಳವಾರ ಮಲೆನಾಡು ಉಳಿಸಿ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಕಸ್ತೂರಿ ರಂಗನ್ ವರದಿ ವಿರೋಧಿ- ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸ್ಥಳೀಯ ಗ್ರಾಮ ಪಂಚಾಯತ್‍ನಿಂದ ಹಿಡಿದು ರಾಜ್ಯ ಸರಕಾರ ಹಾಗೂ ಜನಪ್ರತಿನಿಧಿಗಳು ಕಸ್ತೂರಿ ರಂಗನ್ ವರದಿ ವಿರೋಧಿಸಿವೆ. ಆದರೆ ನ್ಯಾಯಾಲಯಕ್ಕೆ ಎನ್.ಜಿ.ಓ ಸಂಸ್ಥೆಗಳು ಪೂರ್ವಾಗ್ರಹ ಪೀಡಿತವಾದ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ಪರವಾದ ಮಾಹಿತಿಯನ್ನು ಸು.ಕೋ. ಹಸಿರು ಪೀಠಕ್ಕೆ ನೀಡಿವೆ. ಇದರಿಂದಾಗಿ ನ್ಯಾಯಾಲಯ ಈ ವರದಿಯನ್ನು ಜಾರಿ ಮಾಡಲು ಕೇಂದ್ರ ಸರಕಾರಕ್ಕೆ ಆದೇಶಿಸಿದೆ ಎಂದ ಅವರು, ವರದಿ ಜಾರಿಯಾದಲ್ಲಿ ಮುಂದಿನ ದಿನಗಳಲ್ಲಿ ಮಲೆನಾಡಿನ ಸ್ಥಿತಿ ಚಿಂತಾಜನಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಸ್ತೂರಿ ರಂಗನ್ ವರದಿ ಜಾರಿಗೆ ಇನ್ನು ಕೆಲವೇ ತಿಂಗಳು ಬಾಕಿ ಇವೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಮಲೆನಾಡಿನ ಪ್ರತಿಯೊಬ್ಬರೂ ಆಕ್ಷೇಪಣೆ ಸಲ್ಲಿಸಬೇಕಾದ ತುರ್ತು ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಜನಜಾಗೃತಿ ಅತ್ಯಗತ್ಯವಾಗಿದೆ ಎಂದ ಅವರು, ಮಲೆನಾಡಿನ ಜನರು ಮುಗ್ಧರೆಂಬ ಭಾವನೆ ನಕಲಿ ಪರಿಸರ ವಾದಿಗಳಲ್ಲಿರುವುದರಿಂದ ಈ ಬಗ್ಗೆ ಜನವಿರೋಧ ವ್ಯಕ್ತವಾಗದೆಂಬ ಕಾರಣಕ್ಕೆ ವರದಿ ಜಾರಿಗೆ ಹುನ್ನಾರ ನಡೆಸಲಾಗುತ್ತಿದೆ. ಮಲೆನಾಡಿನ ಜನತೆ ತಮ್ಮ ನೆತ್ತಿಯ ಮೇಲೆ ತೂಗುಗತ್ತಿ ನೇತಾಡುವಂತಹ ಪರಿಸ್ಥಿತಿಯಲ್ಲೂ ವಿರೋಧ ವ್ಯಕ್ತಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ವರದಿ ಜಾರಿ ವಿರುದ್ಧ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗಬೇಕಿದೆ ಎಂದರು ಇದೇ ವೇಳೆ ವಿಠಲ್ ಹೆಗಡೆ ಕರೆ ನೀಡಿದರು.

ಸಂವಿಧಾನ ಉಳಿಸಿ ವೇದಿಕೆ ಮುಖಂಡ ಹಾಗೂ ಚಿಂತಕ ಕೆ.ಎಲ್.ಅಶೋಕ್ ಮಾತನಾಡಿ, ಈ ಹಿಂದೆ ಜಾಗತೀಕರಣ, ಸಾಮ್ರಾಜ್ಯಶಾಹಿಗಳು, ಬಹುರಾಷ್ಟ್ರೀಯ ಕಂಪೆನಿಗಳಿಂದ ದೇಶಕ್ಕೆ ಭವಿಷ್ಯದಲ್ಲಿ ಅಪಾಯವಿದೆ ಎಂದು ಹೋರಾಟಗಾರರು ಹೇಳುತ್ತಿದ್ದರು. ಆಗ ಈ ಪದಗಳು ಇಲ್ಲಿನ ಜನರಿಗೆ ಅರ್ಥವಾಗುತ್ತಿರಲಿಲ್ಲ. ಪ್ರಸಕ್ತ ಇವುಗಳು ಮಲೆನಾಡಿಗರ ಮನೆ ಬಾಗಿಲಿಗೆ ಬಂದು ಸರಕಾರ, ನ್ಯಾಯಾಲಯಗಳ ಮೂಲಕ ಒಕ್ಕಲೇಳುವಂತೆ ಆದೇಶ ನೀಡುತ್ತಿವೆ. ಈ ಬಗ್ಗೆ ಮಲೆನಾಡಿನ ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಸುಧೀರ್ ಕುಮಾರ್ ಮುರೋಳಿ ಮಾತನಾಡಿ, ಮಲೆನಾಡಿನಲ್ಲಿ ಅರಣ್ಯ ನಾಶವಾಗುತ್ತಿದೆ ಎಂಬ ಮಾತಿಗೆ ಅರ್ಥವಿಲ್ಲ. ಕೆಲ ಶ್ರೀಮಂತರ ಭೂ ದಾಹದಿಂದ ಕಾಡು ಸ್ವಲ್ಪ ಪ್ರಮಾಣದಲ್ಲಿ ನಾಶವಾಗಿರಬಹುದು. ಆದರೆ ಇದಕ್ಕೆ ಇಡೀ ಮಲೆನಾಡಿನ ಜನರನ್ನು ಬಲಿಪಶು ಮಾಡುವುದು ತರವಲ್ಲ. ಗಾಡ್ಗಿಳ್ ವರದಿಯ ಮುಂದುವರಿದ ಭಾಗವಾಗಿರುವ ಕಸ್ತೂರಿರಂಗನ್ ವರದಿ ಜಾರಿಯ ಹಿಂದೆ ಪರಿಸರ ವ್ಯಾದಿಗಳ ಹುನ್ನಾರ ಅಡಗಿದೆ. ಪಶ್ಚಿಮಘಟ್ಟದ ಜೀವವೈವಿಧ್ಯತೆ ಹಾಗೂ ಪ್ರವಾಸೋದ್ಯಮದ ಲಾಭಕ್ಕಾಗಿ ಇಂತಹ ಜನವಿರೋಧಿ ಯೋಜನೆಗಳ ಜಾರಿಗೆ ವ್ಯವಸ್ಥಿತಿ ಸಂಚು ರೂಪಿಸಲಾಗುತ್ತಿದೆ. ಇದರ ವಿರುದ್ಧ ಹೋರಾಟ ಆರಂಭವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದ ಅವರು, ಹುಲಿ ಯೋಜನೆ, ಅಭಯಾರಣ್ಯದಂತಹ ಪರಿಸರ ಸಂಬಂಧಿ ಯೋಜನೆಗಳಿಗೆ ಮಲೆನಾಡು ಬಲಿಯಾಗುತ್ತಿದೆ. ಮುಂದೊಂದು ದಿನ ಇಡೀ ಮಲೆನಾಡಿನಲ್ಲಿ ಮನುಷ್ಯರೇ ಇಲ್ಲದಂತಾಗಲಿದ್ದು, ಈ ಬಗ್ಗೆ ಇಂದಿನಿಂದಲೇ ಧ್ವನಿ ಎತ್ತಬೇಕಿರುವುದು ಅತ್ಯಗತ್ಯ ಎಂದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಚ್.ಎಂ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಪಕ್ಷಾತೀತವಾಗಿ ಹೋರಾಟ ಮಾಡಿದರೆ ಮಲೆನಾಡಿನ ಉಳಿವು ಸಾಧ್ಯ. ಸಂಬಂಧಪಟ್ಟ ಶಾಸಕರು, ಸಂಸದರು ಇದರ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ಮಲೆನಾಡಿನ ಜನರ ಬದುಕು ಮೂರಾಬಟ್ಟೆಯಾಗಲಿದೆ ಎಂದರು.

ಕಾರ್ಯಕ್ರಮವನ್ನು ಕಾಫಿ ಬೆಳೆಗಾರ ಕೌಳಿ ಶ್ರೀನಿವಾಸ್‍ಗೌಡರು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಸ್ತೂರಿರಂಗನ್ ವಿರೋಧಿ ಮಲೆನಾಡು ಉಳಿಸಿ ವೇದಿಕೆ ಮೇಗುಂದಾ ಹೋಬಳಿಯ ಅಧ್ಯಕ್ಷ ಲಕ್ಷ್ಮೀನಾರಾಯಣ್ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ವೇದಿಕೆಯ ಗೌರವಾಧ್ಯಕ್ಷ ಬಾಳೆಮನೆ ನಟರಾಜ್, ಜಯಪುರ ರೋಟರಿ ಸಂಸ್ಥೆ ಅಧ್ಯಕ್ಷ ರಮೇಶ್, ಜಯಪುರ ವರ್ತಕರ ಸಂಘದ ಅಧ್ಯಕ್ಷ ಅಶೋಕ್, ವೇದಿಕೆಯ ಕಾರ್ಯದರ್ಶಿ ಮರಿಯಪ್ಪಗೌಡ,  ಕಾರ್ಮಿಕ ಮುಖಂಡರಾದ ಸೆಲ್ವಂ, ಮುನಿಯಾಂಡಿ, ಸುಬ್ರಹ್ಮಣ್ಯಂ, ಹೋರಾಟಗಾರರಾದ ಸುರೇಶ್ ಭಟ್, ಆಟೊ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ಅಶೋಕ್ ಮುಂಡೊಳಲು ನಿರೂಪಿಸಿ, ಕೌಳಿ ರಾಮು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News