ಕೊಡಗು ಉಸ್ತುವಾರಿ ಸಚಿವರ ಹೆಸರು ಹೇಳಿ ಲಕ್ಷಾಂತರ ರೂ. ಪಂಗನಾಮ

Update: 2018-11-13 13:31 GMT

ಮಡಿಕೇರಿ, ನ.13: ರಾಜ್ಯ ಪ್ರವಾಸೋದ್ಯಮ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬರಿಂದ ಒಂದು ಲಕ್ಷ ರೂ. ಹಣ ಪಡೆದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ತಂಡದ ಮೂಲಕ ತನಿಖೆ ಕೈಗೊಂಡಿದೆ.

ಸಚಿವ ಸಾ.ರಾ.ಮಹೇಶ್ ಅವರ ಹೆಸರು ಹೇಳಿ ಪಂಗನಾಮ ಹಾಕಿದ ಪ್ರಕರಣ ಮಡಿಕೇರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ  ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿದ್ದು ಮೂವರಿದ್ದ ತಂಡವೊಂದು ಈ ಕೃತ್ಯ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಶೇಷ ತಂಡ ತನಿಖೆಯನ್ನು ಚುರುಕುಗೊಳಿಸಿದೆ. ಆರೋಪಿಗಳನ್ನು ಇನ್ನೆರಡು ದಿನಗಳಲ್ಲಿ ಬಂಧಿಸಲಾಗುವುದೆಂದು ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ
ಬೆಂಗಳೂರಿನ ಬನಶಂಕರಿ ನಿವಾಸಿ ಮೂಲತಃ ಮದ್ದೂರು ಗ್ರಾಮದವರಾದ ಲಿಂಗೇಗೌಡ ಎಂಬವರು ಕುಶಾಲನಗರದಲ್ಲಿ 7 ಎಕರೆ ಭೂಮಿ ಹೊಂದಿದ್ದರು. ಈ ಭೂಮಿಯ ಭೂ ಪರಿವರ್ತನೆ ಮಾಡಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಪ್ರಸ್ತುತ 7 ಎಕರೆ ಭೂಮಿಯ ಭೂ ಪರಿವರ್ತನೆಯಾಗಿ ಕಡತಗಳು ಸಿದ್ಧಗೊಂಡಿದ್ದವು. ಈ ಹಿನ್ನೆಲೆಯಲ್ಲಿ ದಾಖಲೆ ಪಡೆದುಕೊಳ್ಳಲು ಲಿಂಗೇಗೌಡ ಅವರು ನ.3 ರಂದು ಕುಶಾಲನಗರಕ್ಕೆ ಆಗಮಿಸಿ, ರಾತ್ರಿ ಅಲ್ಲಿಯೇ ವ್ಯಾಸ್ತವ್ಯ ಹೂಡಿದ್ದರು ಎನ್ನಲಾಗುತ್ತಿದೆ. ನವೆಂಬರ್ 4 ರಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಲಿಂಗೇಗೌಡ ಅವರನ್ನು ವ್ಯಕ್ತಿಯೊಬ್ಬ ಎದುರಾಗಿ ಬಂದ ಕಾರಣವನ್ನು ವಿಚಾರಿಸಿದ್ದಾನೆ. ಈ ಸಂದರ್ಭ ಲಿಂಗೇಗೌಡ ಭೂ ದಾಖಲೆ ಪಡೆಯಲು ಬಂದಿರುವುದಾಗಿ ಮಾಹಿತಿ ನೀಡಿದಾಗ, ನಿಮ್ಮ  ಭೂ ದಾಖಲೆಗಳನ್ನು ನಾನೇ ಸಿದ್ಧಪಡಿಸಿರುವುದಾಗಿ ತಿಳಿಸಿದ ಅನಾಮಿಕ ವ್ಯಕ್ತಿ ತನ್ನನ್ನು ‘ಕೇಸ್ ವರ್ಕರ್’ ಗಿರೀಶ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಭೂ ಪರಿವರ್ತನೆಗೆ 1 ಲಕ್ಷ ರೂಪಾಯಿ ಶುಲ್ಕ ಪಾವತಿ ಮಾಡಬೇಕಿದ್ದು ಹೆಚ್ಚುವರಿ 1 ಸಾವಿರ ಹಣವನ್ನು ಕಚೇರಿಯ ಇತರ ಸಿಬ್ಬಂದಿಗಳಿಗೆ ನೀಡಬೇಕಿದೆ ಎಂದು ತಿಳಿಸಿದ್ದಾನೆ.

ಮಾತ್ರವಲ್ಲದೆ ಈ ನಡುವೆ ಬೇರೊಬ್ಬ ವ್ಯಕ್ತಿಗೆ ಫೋನ್ ಮಾಡಿ ಸಚಿವ ಸಾ.ರಾ. ಮಹೇಶ್ ಅವರ ಆಪ್ತ ಕಾರ್ಯದರ್ಶಿಯೊಂದಿಗೆ ಮಾತನಾಡಿ ಎಂದು ಮೊಬೈಲನ್ನು ಲಿಂಗೇಗೌಡರಿಗೆ ನೀಡಿದ್ದಾನೆ. ದೂರವಾಣಿಯಲ್ಲಿ ಮಾತನಾಡಿದ ವ್ಯಕ್ತಿ ತನ್ನನ್ನು ಸಾ.ರಾ. ಮಹೇಶ್ ಅವರ ಆಪ್ತ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ನಿಮ್ಮ ಭೂ ದಾಖಲೆಗಳು ರೆಡಿಯಾಗಿದೆ ಎಂದು ಹೇಳಿ, ಸಚಿವ ಸಾ.ರಾ. ಮಹೇಶ್ ಮಾತನಾಡುತ್ತಾರೆ ಎಂದು ಬೇರೊಬ್ಬನಿಗೆ ಫೋನ್ ನೀಡಿದ್ದಾನೆ. ಆ ವ್ಯಕ್ತಿ ನಾನು ಸಾ.ರಾ. ಮಹೇಶ್ ಎಂದು ಹೇಳಿದಲ್ಲದೆ, ನಿಮ್ಮ ದಾಖಲೆಗಳು ಸಿದ್ಧವಾಗಿದೆ. ಗಿರೀಶನ ಕೈಯಿಂದ ಪಡೆದುಕೊಳ್ಳಿ ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ.

ಇದನ್ನು ನಿಜವೆಂದು ನಂಬಿದ ಲಿಂಗೇಗೌಡ ತನ್ನ ಕೈಯಲ್ಲಿ ಕೇವಲ 4 ಸಾವಿರ ಮಾತ್ರ ಹಣವಿದ್ದು, ಬ್ಯಾಂಕಿನಲ್ಲಿ 47 ಸಾವಿರ ರೂಪಾಯಿ ಹಣವಿದೆ ಎಂದು ತಿಳಿಸಿದ್ದಾರೆ. ಬಳಿಕ ಲಿಂಗೇಗೌಡ ಅನಾಮಿಕ ವ್ಯಕ್ತಿಯನ್ನು ತನ್ನೊಂದಿಗೆ ಬ್ಯಾಂಕಿಗೆ ಕರೆದೊಯ್ದಿದಾರೆ. ಉಳಿದ 50 ಸಾವಿರ ಹಣಕ್ಕಾಗಿ ಲಿಂಗೇಗೌಡ ಕುಶಾಲನಗರದ ತನ್ನ ಸ್ನೇಹಿತನಿಗೆ ಕರೆ ಮಾಡಿ ಖಾತೆಗೆ ಹಣ ವರ್ಗಾಯಿಸುವಂತೆ ಹೇಳಿದ್ದಾರೆ. ತದನಂತರ ನಗರದ ಕೊಡವ ಸಮಾಜದ ವಾಣಿಜ್ಯ ಕಟ್ಟಡದಲ್ಲಿರುವ ಖಾಸಗಿ ಬ್ಯಾಂಕಿನಿಂದ ಒಟ್ಟು 97 ಸಾವಿರ ಹಾಗೂ ತನ್ನಲ್ಲಿದ್ದ 4 ಸಾವಿರ ಹಣವನ್ನು ತೆಗೆದು ಅನಾಮಿಕ ವ್ಯಕ್ತಿಗೆ ನೀಡಿದ್ದಾರೆ. ಹಣ ಪಡೆದುಕೊಂಡ ಅನಾಮಿಕ ವ್ಯಕ್ತಿ ತಾನು ತಾಲೂಕು ಕಚೇರಿಗೆ ತೆರಳಿ ಭೂ ಪರಿವರ್ತನೆಯ ಶುಲ್ಕ ಪಾವತಿಸಿ ಜಿಲ್ಲಾಡಳಿತ ಭವನಕ್ಕೆ ಬರುವುದಾಗಿ ತಿಳಿಸಿ, ನೀವು ಕೂಡ ಅಲ್ಲಿಗೆ ಬಂದು ದಾಖಲೆ ಪಡೆದುಕೊಳ್ಳುವಂತೆ ಹೇಳಿದ್ದಾನೆ. ಬ್ಯಾಂಕಿನಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿದ ಲಿಂಗೇಗೌಡ ಕೇಸ್ ವರ್ಕರ್(ಅನಾಮಿಕ ವ್ಯಕ್ತಿ)ಗಾಗಿ ಹಲವು ಸಮಯ ಕಾದರೂ ಆ ವ್ಯಕ್ತಿ ಮಾತ್ರ ಬರಲಿಲ್ಲ. ಆತ ನೀಡಿದ ಮೊಬೈಲ್ ಸಂಖೈಗೆ ಕರೆ ಮಾಡಿದ ಸಂದರ್ಭ ಅದು ‘ಸ್ವಿಚ್ಚ್ ಆಫ್’ ಆಗಿದೆ ಎಂಬ ಉತ್ತರ ದೊರಕಿದೆ. ಇದರಿಂದ ಗಾಬರಿಯಾದ ಲಿಂಗೇಗೌಡ ಕಚೇರಿಯಲ್ಲಿ ವಿಚಾರಿಸಿದಾಗ ತಾನು ಮೋಸ ಹೋಗಿರುವ ವಿಚಾರ ಅರಿವಾಗಿದೆ. 

ಬಳಿಕ ನಗರ ಪೊಲೀಸ್ ಠಾಣೆಗೆ ತೆರಳಿದ ಲಿಂಗೇಗೌಡ ನಡೆದ ವಿಷಯವನ್ನು ತಿಳಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಜಿಲ್ಲಾಡಳಿತ ಭವನ ಮತ್ತು ಬ್ಯಾಂಕಿಗೆ ತೆರಳಿ ಹಣ ದೋಚಿದ ವ್ಯಕ್ತಿಯ ಚಹರೆ ಪತ್ತೆ ಹಚ್ಚಲು ಸಿ.ಸಿ.ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗಿದೆ. ಇದೀಗ ವಿಶೇಷ ತಂಡದ ಮೂಲಕ ತನಿಖೆ ಚುರುಕುಗೊಂಡಿದ್ದು, ವಂಚಕರನ್ನು ಶೀಘ್ರ ಬಂಧಿಸಲಾಗುವುದೆಂದು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News