ಚಿನ್ನದ ಗಟ್ಟಿಗಾಗಿ ಸಿಸಿಬಿ ಹುಡುಕಾಟ: ನ.14ರಂದು ರೆಡ್ಡಿ ಜಾಮೀನು ತೀರ್ಪು

Update: 2018-11-13 14:03 GMT

ಬೆಂಗಳೂರು, ನ.13: ಆ್ಯಂಬಿಡೆಂಟ್ ಕಂಪೆನಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ, ನ.14 ರಂದು ತೀರ್ಪು ಪ್ರಕಟಿಸಲಿದೆ.

ಪ್ರಕರಣ ಸಂಬಂಧ ಮಂಗಳವಾರ, ವಾದ-ಪ್ರತಿ ವಾದ ಆಲಿಸಿದ ನಂತರ ನ್ಯಾಯಮೂರ್ತಿ ಜಗದೀಶ್ ಅವರು, ಜಾಮೀನು ಅರ್ಜಿ ತೀರ್ಪು ಅನ್ನು ನ.14 ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ರೆಡ್ಡಿ ವಾದವೇನು?: ಜನಾರ್ದನ ರೆಡ್ಡಿ ಪರ ವಕೀಲ ಸಿ.ಎಚ್.ಹನುಮಂತರಾಯ, ಆ್ಯಂಬಿಡೆಂಟ್ ಹೂಡಿಕೆ ಕಂಪೆನಿ ವಂಚನೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಜಾಮೀನು ದೊರೆತಿದೆ. ಜತೆಗೆ ಐದನೇ ಆರೋಪಿಗೂ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಪೊಲೀಸರು ನೋಟಿಸ್ ನೀಡಿದ ಕೂಡಲೇ ನನ್ನ ಕಕ್ಷಿದಾರ(ಜನಾರ್ದನರೆಡ್ಡಿ) ತನಿಖೆಗೆ ಹಾಜರಾಗಿದ್ದಾರೆ ಎಂದು ವಾದಿಸಿದರು.

ಆಲಿಖಾನ್ 4ನೆ ಆರೋಪಿಯಿಂದ 57 ಕೆಜಿ ಚಿನ್ನ ಪಡೆದಿದ್ದ. ಆದರೆ, ಇದಕ್ಕೂ ಜನಾರ್ದನ ರೆಡ್ಡಿಗೂ ಸಂಬಂಧವಿಲ್ಲ. ಹೀಗೆಂದು, ಪೊಲೀಸರು ರಿಮಾಂಡ್ ಅರ್ಜಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಜನಾರ್ದನ ರೆಡ್ಡಿಗೆ ಮಾಹಿತಿ ಇರುವುದು ಒಪ್ಪಿದ್ದಾರೆ. ಅದನ್ನು ಮರಳಿ ಕೊಡಿಸಲು ಯತ್ನಿಸುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು ಎನ್ನಲಾಗಿದೆ.

ಜನಾರ್ದನ ರೆಡ್ಡಿ ವಿರುದ್ಧ ಯಾವುದೇ ಆರೋಪವಿಲ್ಲ. ಸಿಬಿಐ ತನಿಖಾ ಸಂಸ್ಥೆಯಲ್ಲಿ ದಾಖಲಾಗಿರುವ ದೂರಿಗೆ ಸಂಬಂಧಪಟ್ಟಂತೆ ಜನಾರ್ದನ ರೆಡ್ಡಿ ಹಾಜರಾಗಬೇಕು. ಹೀಗಾಗಿ, ಅವರಿಗೆ ಜಾಮೀನು ನೀಡುವಂತೆ ಹನುಮಂತರಾಯ ನ್ಯಾಯಾಲಯಕ್ಕೆ ಕೋರಿದರು.

ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಬರೋಬ್ಬರಿ 600 ಕೋಟಿ ರೂ.ಗಳಿಗೂ ಹೆಚ್ಚಿನ ಅಕ್ರಮ ನಡೆಸಿ, ಸಾವಿರಾರು ಜನರಿಗೆ ವಂಚಿಸಿದೆ ಎಂದು ಸರಕಾರಿ ವಕೀಲರು ಪ್ರತಿವಾದ ಮಂಡಿಸಲು ಆರಂಭಿಸುತ್ತಿದ್ದಂತೆ ನ್ಯಾ.ಜಗದೀಶ್ ಅವರು ಆ್ಯಂಬಿಡೆಂಟ್ ಮತ್ತು ಜನಾರ್ದನ ರೆಡ್ಡಿಗೆ ಏನು ಸಂಬಂಧ ಎಂದು ಪ್ರಶ್ನೆ ಕೇಳಿದರು ಎಂದು ತಿಳಿದುಬಂದಿದೆ.

ಹುಡುಕಾಟ: ಆ್ಯಂಬಿಡೆಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬಿಕಾ ಜ್ಯುವೆಲರ್ಸ್ ಮಾಲಕ ರಮೇಶ್ ಕೊಠಾರಿ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಮಂಗಳವಾರ ಆಗಮಿಸಿದ್ದರು. ರಮೇಶ್ ಜೊತೆ ಹೂಡಿಕೆದಾರರಾದ ಹನೀಫ್, ರಝಾಕ್, ಬಷೀರ್ ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿ, 57 ಕೆಜಿ ಚಿನ್ನದ ಗಟ್ಟಿ ಎಲ್ಲಿದೆ ಎಂಬುವುದರ ಬಗ್ಗೆ ಮಾಹಿತಿ ನೀಡುವಂತೆ ತನಿಖಾಧಿಕಾರಿಗಳು ಸೂಚಿಸಿದರು ಎನ್ನಲಾಗಿದೆ.

57 ಕೆ.ಜಿ. ಗಟ್ಟಿ ಚಿನ್ನ ಯಾರ ಹೆಸರಿನಲ್ಲಿ ಖರೀದಿ ಆಯ್ತು? ಈಗಲೂ ಚಿನ್ನ ಹಾಗೆಯೇ ಇದೆಯೇ ಅಥವಾ ಕರಗಿಸಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಚಿನ್ನ ಖರೀದಿ ಮಾಡಿ ತುಂಬಾ ದಿನಗಳು ಕಳೆದಿರುವುದರಿಂದ, ಮಾರಾಟವಾಗಿರುವ ಶಂಕೆಯೂ ಸಿಸಿಬಿ ಪೊಲೀಸರಿಗೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News