ಕಡೂರು: ಪತ್ನಿಯ ಕತ್ತು ಹಿಸುಕಿ ಕೊಲೆಗೈದ ಪತಿ
ಕಡೂರು, ನ.13: ಆಂತರಿಕ ಕಲಹದಿಂದ ಪತಿಯು ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ದಾರುಣ ಘಟನೆ ತಾಲೂಕಿನ ಜೋಡಿಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜ್ಯೋತಿ ಬಾಯಿ(28) ಕೊಲೆಯಾದ ಮಹಿಳೆ. ಅರಸೀಕೆರೆ ಮೂಲದ ಜ್ಯೋತಿ ಬಾಯಿಗೆ ಜೋಡಿ ಲಿಂಗದಹಳ್ಳಿ ಗ್ರಾಮದ ಮಹೇಶ್ ಅಲಿಯಾಸ್ ಮಾಯಣ್ಣ ನಾಯಕ ಎಂಬವರ ಜೊತೆ ಕಳೆದ ಹದಿನೈದು ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿಗಳಿಗೆ ಎರಡು ಗಂಡು ಮಕ್ಕಳಿದ್ದಾರೆ. ಜ್ಯೋತಿ ಬಾಯಿ ಮತ್ತು ಮಹೇಶ್ ನಡುವೆ ಕೆಲ ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೇ, ಜ್ಯೋತಿ ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಅವಳಿಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ಮಹೇಶ್ ಆಗಾಗ ಜಗಳ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ಗಾರ್ಮೆಂಟ್ಸ್ ಕೆಲಸವನ್ನು ಬಿಡಿಸಿ ಜೋಡಿ ಲಿಂಗದಹಳ್ಳಿಗೆ ಜ್ಯೋತಿ ಬಾಯಿಯನ್ನು ಮಹೇಶ್ ಕರೆತಂದಿದ್ದ. ಭಾನುವಾರ ಸಂಜೆ ಇಬ್ಬರಿಗೂ ಮತ್ತೆ ಜಗಳ ಆರಂಭವಾಗಿ ಮಹೇಶ ಮಕ್ಕಳನ್ನು ಹೊರಗೆ ಕಳುಹಿಸಿ ರೂಮಿನ ಬಾಗಿಲು ಹಾಕಿಕೊಂಡು, ಜ್ಯೋತಿಬಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದ್ದು, ಈ ಸಮಯದಲ್ಲಿ ಆಕೆಯ ಕಿರುಚಾಟ ಕೇಳಿ ಗ್ರಾಮಸ್ಥರು ಮನೆ ಮುಂದೆ ಜಮಾಯಿಸಿದ್ದಾರೆ. ಹೆದರಿದ ಮಹೇಶ ತಾನು ನೇಣು ಹಾಕಿಕೊಳ್ಳಲು ಪ್ರಯತ್ನಿಸಿ ವಿಫಲನಾಗಿದ್ದಾನೆನ್ನಲಾಗಿದೆ.
ಸಖರಾಯಪಟ್ಟಣ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಸ್ಥಳಕ್ಕೆ ತರೀಕೆರೆ ಡಿವೈಎಸ್ಪಿ ತಿರುಮಲೇಶ್, ವೃತ್ತ ನಿರೀಕ್ಷಕ ಬಿ.ಎಸ್. ಮಂಜುನಾಥ್, ಸಖರಾಯಪಟ್ಟಣ ಪಿಎಸ್‍ಐ ವಿನುತ್ ಭೇಟಿ ನೀಡಿದ್ದರು.