×
Ad

ಅಂತರ್ಜಲ ವೃದ್ಧಿಸಲು ‘ಬ್ಯಾರೇಜ್ ಕಮ್ ಚೆಕ್‌ಡ್ಯಾಂ’ಗಳ ನಿರ್ಮಾಣ: ಸಚಿವ ಪುಟ್ಟರಾಜು

Update: 2018-11-13 22:18 IST

ಬೆಂಗಳೂರು, ನ.13: ರಾಜ್ಯದಲ್ಲಿ ಅಂತರ್ಜಲವನ್ನು ವೃದ್ಧಿಸಲು ಅಗತ್ಯಕ್ಕೆ ತಕ್ಕಂತೆ ‘ಬ್ಯಾರೇಜ್ ಕಮ್ ಚೆಕ್‌ಡ್ಯಾಂ’ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿರುವ 3600 ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಅಂತರ್ಜಲ ವೃದ್ಧಿ ನಮ್ಮ ಆದ್ಯತೆ. ಅದಕ್ಕಾಗಿ, ಬ್ಯಾರೇಜ್ ಕಮ್ ಚೆಕ್‌ಡ್ಯಾಂಗಳನ್ನು ನಿರ್ಮಿಸುವ ಮೂಲಕ ನೀರನ್ನು ಆಯಾ ಭಾಗದಲ್ಲಿ ನಿಲ್ಲಿಸುವುದು ನಮ್ಮ ಉದ್ದೇಶ ಎಂದರು.

2018ರ ಮಾರ್ಚ್ ತಿಂಗಳಿನಲ್ಲಿ ಹಿಂದಿನ ಸರಕಾರ ಹೊಸ ತಿದ್ದುಪಡಿಯನ್ನು ತಂದು ಕೆರೆ ಅಭಿವೃದ್ಧಿ ಪ್ರಾಧಿಕಾರದ ಜೊತೆಗೆ ಕೆರೆ ಸಂರಕ್ಷಣೆ ಪ್ರಾಧಿಕಾರವನ್ನು ರಚಿಸಿದೆ. ಈ ಪ್ರಾಧಿಕಾರಿಗಳ ಅಧ್ಯಕ್ಷರಾಗಿ ಮುಖ್ಯಮಂತ್ರಿ ಹಾಗೂ ಉಪಾಧ್ಯಕ್ಷರಾಗಿ ಸಣ್ಣ ನೀರಾವರಿ ಇಲಾಖೆಯ ಸಚಿವರು ಕಾರ್ಯನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.

ಈ ಪ್ರಾಧಿಕಾರಗಳಿಗೆ ನಿವೃತ್ತ ಅಧಿಕಾರಿಗಳು, ಇಂಜಿನಿಯರ್‌ಗಳು, ತಜ್ಞರನ್ನು ಸದಸ್ಯರನ್ನಾಗಿ ನೇಮಿಸಿ, ಅವರ ಸಲಹೆಗಳ ಆಧಾರದಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ನಾಡಿನ ಉಳಿವಿಗಾಗಿ ಕೆರೆಗಳನ್ನು ಉಳಿಸುವುದು ಮುಖ್ಯ ಎಂದು ಪುಟ್ಟರಾಜು ತಿಳಿಸಿದರು.

ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯಾ ಜಿಲ್ಲೆಗಳ ಕೆರೆಗಳ ಸಮೀಕ್ಷೆ ಮಾಡಿಸಿ, ನಮ್ಮ ಇಲಾಖೆ ಮೂಲಕ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ, ಸಂರಕ್ಷಣೆ ಮಾಡಲಾಗುವುದು. ಜೊತೆಗೆ, ಕೆರೆ ಸಂಜೀವಿನಿ ಯೋಜನೆಯಡಿ ಕೆರೆಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಸಲಾಗುವುದು ಎಂದು ಅವರು ಹೇಳಿದರು.

ಕೆರೆಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಕೆರೆಗಳ ಸಹಕಾರ ಸಂಘಗಳಿಗೆ ಪ್ರೋತ್ಸಾಹ ಧನ ನೀಡಲು 7-8 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಸಂಘಗಳಿಗೆ ತಲಾ 50 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಪುಟ್ಟರಾಜು ತಿಳಿಸಿದರು.

ನಮ್ಮ ಇಲಾಖೆಗೆ ಬಜೆಟ್‌ನಲ್ಲಿ 2000 ಕೋಟಿ ರೂ.ಗಳ ಅನುದಾನ ಒದಗಿಸಿದ್ದು, ಹೆಚ್ಚುವರಿಯಾಗಿ 3000 ಕೋಟಿ ರೂ.ಗಳನ್ನು ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಕೆರೆಗಳ ನಿರ್ವಹಣೆಗೆ ಹಲವಾರು ಸಂಸ್ಥೆಗಳು ಮುಂದೆ ಬಂದಿದ್ದು, ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಕೆರೆಗಳ ಅತಿಕ್ರಮ ಪ್ರವೇಶಕ್ಕೆ ಯಾರಿಗೂ ಅವಕಾಶ ನೀಡುವುದಿಲ್ಲ. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹಾಗೂ ಎ.ಟಿ.ರಾಮಸ್ವಾಮಿ ನೀಡಿರುವ ವರದಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ನೇತೃತ್ವದಲ್ಲಿ ಶೀಘ್ರವೇ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

-ಸಿ.ಎಸ್.ಪುಟ್ಟರಾಜು, ಸಣ್ಣ ನೀರಾವರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News