ಮೈಸೂರು: ಅಕ್ರಮ ಕಟ್ಟಡ ತೆರವಿಗೆ ಅಡ್ಡಿಪಡಿಸಿದ ಮಾಲಕ; ಬಿಲ್ಡಿಂಗ್ ಏರಿ ಆತ್ಮಹತ್ಯೆಯ ಬೆದರಿಕೆ
Update: 2018-11-13 23:14 IST
ಮೈಸೂರು,ನ.13: ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ವೇಳೆ ಬಿಲ್ಡಿಂಗ್ ಏರಿದ ಮಾಲಕನೊಬ್ಬ ತನ್ನ ಕಟ್ಟಡ ತೆರವು ಮಾಡಿದರೆ ಮೇಲಿಂದ ಬಿದ್ದು ಸಾಯುವುದಾಗಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ರಾಜೀವ್ ನಗರದಲ್ಲಿ ಅಕ್ರಮ ಕಟ್ಟಡವೊಂದು ನಿರ್ಮಾಣ ಗೊಂಡಿದ್ದು, ಮಾಹಿತಿ ಪಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಈ ವೇಳೆ ಕಟ್ಟಡದ ತೆರವಿಗೆ ಅವಕಾಶ ನೀಡದ ಮಾಲಕ ಮುಷಾಹಿದ್ ತೆರವು ಮಾಡಿದರೆ ಮಹಡಿ ಮೇಲಿಂದ ಜಿಗಿಯುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಅಧಿಕಾರಿಗಳು ಹಾಗೂ ಮಾಲಕರ ನಡುವೆ ಮಾತಿನ ಚಕಮಕಿ ಮುಂದುವರೆದಿದ್ದು, ಕಟ್ಟಡದ ಸುತ್ತ ಮುತ್ತ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.