ಬಹುಜನರು ಆಡಳಿತ ನಡೆಸುವ ವರ್ಗವಾಗಬೇಕು: ಬಿಎಸ್ಪಿ ರಾಜ್ಯ ಸಂಯೋಜಕ ತೋಮರ್

Update: 2018-11-13 18:16 GMT

ಮಂಡ್ಯ, ನ.13: ಬಹುಜನರು ದೇಶದ ಆಡಳಿತ ನಡೆಸುವ ವರ್ಗವಾಗಬೇಕಿದೆ ಎಂದು ಬಹುಜನ ಸಮಾಜ ಪಕ್ಷದ ಕರ್ನಾಟಕ ರಾಜ್ಯ ಸಂಯೋಜಕ ಎಂ.ಎಲ್. ತೋಮರ್ ಹೇಳಿದ್ದಾರೆ.

ನಗರದ ವಿಠಲ ಸಮುದಾಯಭವನದಲ್ಲಿ ಬಹುಜನ ಸಮಾಜ ಪಕ್ಷದ ಮೈಸೂರು ವಲಯದ ಮಂಡ್ಯ ವಿಭಾಗ ಮಂಗಳವಾರ ಆಯೋಜಿಸಿದ್ದ ವಿಭಾಗಮಟ್ಟದ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶದಲ್ಲಿ ಬಹುಜನರೇ ದೊಡ್ಡ ಸಮುದಾಯವಾಗಿದ್ದು, ಒಗ್ಗೂಡಿ ದೇಶದ ಆಡಳಿತ ನಡೆಸುವ ರಾಜಕೀಯ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಳ್ಳಬೇಕಿದೆ. ಬಹುಜನರು ಈ ದೇಶದ ಆಸ್ತಿ. ಕೇವಲ ಶೇ.4ರಷ್ಟಿರುವ ಮನುವಾದಿಗಳು ದೇಶವನ್ನು ಆಳಿ ಬಹುಜನರನ್ನು ತುಳಿಯುತ್ತಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಂಡು ದೇಶ, ರಾಜ್ಯಗಳಲ್ಲಿನ ಪ್ರಮುಖ ಪಕ್ಷಗಳ ನಾಯಕರು ಅಧಿಕಾರ ನಡೆಸಲು ಮುಂದಾಗುತ್ತಿದ್ದಾರೆ. ಯಾರು ಬಿಎಸ್ಪಿಯನ್ನು ವಿರೋಧಿಸುತ್ತಿದ್ದರೋ ಅಂತಹವರೇ ಇಂದು ಮಾಯಾವತಿ ಅವರನ್ನು ಭೇಟಿ ಮಾಡಿ ಬೆಂಬಲಕ್ಕಾಗಿ ಬೇಡುತ್ತಿದ್ದಾರೆ ಎಂದರು. ಡಾ. ಬಿ.ಆರ್.ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಲು ದಾದಾಸಾಹೇಬ್ ಕಾನ್ಶೀರಾಂ ಮುಂದಾಗಿ ಯಶಸ್ವಿಯಾದರು. ಕಾನ್ಶೀರಾಂ ಅವರ ಕನಸನ್ನು ನನಸು ಮಾಡಲು ಮಾಯಾವತಿ ಅವರನ್ನು ಪ್ರಧಾನಮಂತ್ರಿ ಮಾಡುವ ಮೂಲಕ ಸಾಧಕರಾಗೋಣ ಎಂದು ಅವರು ಕರೆ ನೀಡಿದರು.

ಶಾಸಕ ಎನ್. ಮಹೇಶ್ ಮಾತನಾಡಿ, ರಾಜಕೀಯ ಎನ್ನುವುದು ವಿಜ್ಞಾನ. ವಿಜ್ಞಾನ ಯಾವಾಗಲೂ ಪ್ರಾಯೋಗಿಕವಾಗೇ ಸಾಬೀತು ಆಗಬೇಕಿದೆ. ರಾಜಕೀಯ ಪ್ರಜ್ಞೆ ಎಲ್ಲರಲ್ಲೂ ಬೆಳೆಯಬೇಕಿದೆ ಎಂದರು.

ಬಹುಜನರು ಆಳುವ ಶಕ್ತಿಯಾಗಬೇಕಾದರೆ ಸಂಘಟನಾ ಚಳುವಳಿ ಅಗತ್ಯ. ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ, ಕನಸುಗಳನ್ನೇ ಕಾನ್ಶೀರಾಮ್ ಕಟ್ಟಿ ಬೆಳೆಸಿರುವುದು. ಇಂದು ದೇಶ ಮತ್ತು ರಾಜ್ಯಗಳಲ್ಲಿ ಬಿಎಸ್ಪಿ ವರಿಷ್ಠೆ ಮಾಯಾವತಿ ಮೂಲಕ ನಸಾಗುತ್ತಿದೆ. ಬಹುಜನರನ್ನು ಆಳುವ ವರ್ಗವಾಗಿ ಬೆಳೆಸುತ್ತಿದ್ದಾರೆ ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಬಿಎಸ್ಪಿ ಸಂಸ್ಥಾಪಕ ಅಧ್ಯಕ್ಷ ಕಾನ್ಶೀರಾಂ ಅವರ "ಆನೆ ಗುರುತಿಗೆ ಒಂದು ಓಟು, ಬಿಎಸ್ಪಿಗೆ ಒಂದು ರೂ. ನೋಟು" ಎಂದು ಘೋಷವಾಕ್ಯಕ್ಕೆ ಮನ್ನಣೆ ನೀಡಿದ ಪದಾಧಿಕಾರಿಗಳು ಸುಮಾರು 15 ಸಾವಿರ ರೂ.ಗಳನ್ನು ಕಾಣಿಕೆಯಾಗಿ ನೀಡಿದರು. 

ಈ ವಿಭಾಗೀಯ ಸಮಾವೇಶದಲ್ಲಿ  ಮಂಡ್ಯ, ರಾಮನಗರ, ಹಾಸನ ವಿಭಾಗಮಟ್ಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News