ಅತಿವೃಷ್ಟಿ ಹಾನಿ ಸಂತ್ರಸ್ತರಿಗೆ ಪರಿಹಾರ: ವೀರಶೈವ ಮಹಾಸಭಾದಿಂದ ಕೊಡಗು ಜಿಲ್ಲಾಡಳಿತಕ್ಕೆ ಮನವಿ

Update: 2018-11-13 18:29 GMT

ಮಡಿಕೇರಿ, ನ.13: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ತಮ್ಮ ಮನೆ, ತೋಟಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಅಗತ್ಯ ಪರಿಹಾರವನ್ನು ಶೀಘ್ರ ಒದಗಿಸಿಕೊಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಈ ಸಂದರ್ಭ ಮಾತನಾಡಿದ ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದು, ಅಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಕೈಗೊಂಡ ತುರ್ತು ಕಾರ್ಯಗಳು ಶ್ಲಾಘನಾರ್ಹವೆಂದರು.

ನೂರಾರು ಮಂದಿ ಮನೆ ಕಳೆದುಕೊಂಡಿದ್ದು, ಸಾವಿರಾರು ಎಕರೆ ಕೃಷಿ ಭೂಮಿ ನಾಶವಾಗಿದೆ. ಈ ಬಗ್ಗೆ ಈಗಾಗಲೇ ಸರ್ವೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದ್ದರೂ, ಮನೆ ಕಳೆದುಕೊಂಡು ನಿರ್ಗತಿಕರಾಗಿರುವವರಿಗೆ ಶಾಶ್ವತ ಆಶ್ರಯ ಕಲ್ಪಿಸುವ ಯೋಜನೆ ವಿಳಂಬವಾಗುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ ತೋಟ, ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದ ಹಲವು ಮಂದಿ ಇಂದೂ ಕೂಡ ತಾತ್ಕಾಲಿಕ ನಿರಾಶ್ರಿತ ಕೇಂದ್ರದಲ್ಲಿಯಯೇ ಆಶ್ರಯ ಪಡೆದಿದ್ದು, ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದ ಮಂದಿ ಪರದಾಡುವಂತಾಗಿದೆ. ಆದ್ದರಿಂದ ಮನೆ ಕಳೆದುಕೊಂಡಿರುವವರಿಗೆ ತಕ್ಷಣ ಮನೆ ನಿರ್ಮಿಸಿ ಕೊಡುವ ಬಗ್ಗೆ, ನಿರಾಶ್ರಿತರಾದ ಕಾರ್ಮಿಕರಿಗೂ ಮಾನವೀಯ ನೆಲೆಗಟ್ಟಿನಲ್ಲಿ ಶಾಶ್ವತ ಯೋಜನೆ ರೂಪಿಸುವುದರೊಂದಿಗೆ ಕೃಷಿ ಭೂಮಿ ಕಳೆದುಕೊಂಡಿರುವರಿಗೆ ತಕ್ಷಣ ಅಗತ್ಯ ಪರಿಹಾರವನ್ನು ಒದಗಿಸಿ ಕೊಡಬೇಕೆಂದು ಸ್ವಾಮೀಜಿ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು, ಅತಿವೃಷ್ಟಿ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಕಾರ್ಯಗಳು ಸಮಾರೋಪಾದಿಯಲ್ಲಿ ನಡೆಯುತ್ತಿದೆ. ಮನೆ ಕಳೆದುಕೊಂಡವರಿಗೆ ಲೇಔಟ್ ನಿರ್ಮಾಣದ ಮೂಲಕ ಸುಸಜ್ಜಿತ ಮನೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಈ ಕಾರಣಕ್ಕಾಗಿ ವಸತಿ ಯೋಜನೆ ವಿಳಂಬವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಮಾನವೀಯ ನೆಲೆಗಟ್ಟಿನಲ್ಲಿ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೂ ಮನೆ ನಿರ್ಮಿಸಿಕೊಡುವ ಕುರಿತು ಚಿಂತನೆ ನಡೆಸಲಾಗುವುದೆಂದು ಭರವಸೆ ನೀಡಿದರು.

ಈ ಸಂದರ್ಭ ಕಲ್ಲುಮಠದ ಮಹಾಂತ ಸ್ವಾಮೀಜಿ, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜ್, ಉಪಾಧ್ಯಕ್ಷ ಹಾಲಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಸ್.ಮಹೇಶ್, ತಾಲೂಕು ಅಧ್ಯಕ್ಷರಾದ ಮಹದೇವಪ್ಪ ಹಾಗೂ ಪ್ರಮುಖರಾದ ಶಾಂಭಶಿವಮೂರ್ತಿ, ಉದಯ ಕುಮಾರ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News