ಭಾರತೀಯ ಸಂಜಾತೆಗೆ ಟ್ರಂಪ್ ನೀಡಿದ 'ದೀಪಾವಳಿ ಗಿಫ್ಟ್' ಏನು ಗೊತ್ತೇ?

Update: 2018-11-14 04:03 GMT

ವಾಷಿಂಗ್ಟನ್, ನ.14: ಅಮೆರಿಕದ ಸುಪ್ರೀಂಕೋರ್ಟ್ ಹೊರತುಪಡಿಸಿದರೆ ಅತ್ಯಂತ ಪ್ರಭಾವಿ ನ್ಯಾಯಾಲಯ ಎಂದೇ ಪರಿಗಣಿಸಲ್ಪಡುವ ಡಿಸಿ ಸರ್ಕ್ಯೂಟ್‌ನ ಯುಎಸ್ ಕೋರ್ಟ್ ಆಫ್ ಅಪೀಲ್ಸ್‌ಗೆ ಭಾರತ ಮೂಲದ ನವೋಮಿ ರಾವ್ ಅವರನ್ನು ನೇಮಕ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಬ್ರೆಟ್ ಕವನುಘ್ ಸ್ಥಾನಕ್ಕೆ ರಾವ್ ಅವರನ್ನು ನೇಮಕ ಮಾಡಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಕುರಿತ ಅಧಿಕೃತ ಆದೇಶ ಬುಧವಾರ ಶ್ವೇತಭವನದಿಂದ ಹೊರಬೀಳಲಿದೆ.

"ಡಿಸಿ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್‌ನಲ್ಲಿ ನ್ಯಾಯಮೂರ್ತಿ ಬ್ರೆಟ್ ಕವನುಘ್ ಹುದ್ದೆಗೆ ನವೋಮಿ ರಾವ್ ಅವರನ್ನು ಈಗಷ್ಟೇ ನೇಮಕ ಮಾಡಿದ್ದೇನೆ. ಇದು ದೊಡ್ಡ ಸುದ್ದಿ" ಎಂದು ಶ್ವೇತಭವನದ ದೀಪಾವಳಿ ಸಮಾರಂಭದಲ್ಲಿ ಅಮೆರಿಕದ ಅಧ್ಯಕ್ಷರು ಪ್ರಕಟಿಸಿದರು.

"ನನ್ನ ಮೇಲೆ ವಿಶ್ವಾಸ ಇರಿಸಿ ಈ ಪ್ರಭಾವಿ ಕೋರ್ಟ್‌ಗೆ ನೇಮಕ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ನವೋಮಿ ನುಡಿದರು.

ಈ ನೇಮಕಕ್ಕೆ ಅಮೆರಿಕ ಸೆನೆಟ್ ಅನುಮೋದನೆ ನೀಡಿದರೆ ನವೋಮಿ ರಾವ್ (45) ಅವರು ಡಿಸಿ ಸರ್ಕ್ಯೂಟ್ ನ್ಯಾಯಾಲಯದಲ್ಲಿ ಭಾರತೀಯ ಮೂಲದ ಎರಡನೇ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದಕ್ಕೂ ಮುನ್ನ ಶ್ರೀನಿವಾಸನ್ ಇಲ್ಲಿ ನ್ಯಾಯಾಧೀಶರಾಗಿದ್ದರು.

ಮಹತ್ವದ ನಿಯಂತ್ರಣ ಸಂಸ್ಥೆಗಳು, ರಾಷ್ಟ್ರೀಯ ಭದ್ರತೆ ಮತ್ತು ಅಧಿಕಾರದ ವಿಭಜನೆಯಂಥ ಪ್ರಮುಖ ಜವಾಬ್ದಾರಿಗಳು ಈ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ರಾವ್ ಪ್ರಸ್ತುತ, ಮಾಹಿತಿ ಮತ್ತು ನಿಯಂತ್ರಣ ವ್ಯವಹಾರಗಳ ಕಚೇರಿಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಭಾರತೀಯ ಮೂಲದ ಪರ್ಶಿಯನ್ ವೈದ್ಯ ದಂಪತಿ ನರಿಯೋಶಂಗ್ ರಾವ್- ಝೆರಿನ್ ರಾವ್ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News