ಕಾರ್ಖಾನೆ ಪ್ರಕಟಿಸಿದ ದರದ ಪ್ರಕಾರ ಬಿಲ್ ಪಾವತಿಗೆ ಬೆಳಗಾವಿ ಜಿಲ್ಲಾಧಿಕಾರಿ ಸೂಚನೆ

Update: 2018-11-14 16:13 GMT

ಬೆಳಗಾವಿ, ನ.14: ಸಕ್ಕರೆ ಕಾರ್ಖಾನೆಗಳು ಕಳೆದ ಬಾರಿ ಘೋಷಿಸಿರುವ ದರದ ಪ್ರಕಾರವೇ ರೈತರ ಬಿಲ್ ಹದಿನೈದು ದಿನಗಳಲ್ಲಿ ಕಡ್ಡಾಯವಾಗಿ ಪಾವತಿಸಬೇಕು ಹಾಗೂ ಈ ವರ್ಷ ಕಬ್ಬು ನುರಿಸುವ ಸಂದರ್ಭದಲ್ಲಿಯೆ ಎಫ್‌ಆರ್‌ಪಿ ಪ್ರಕಾರ ದರ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದ್ದಾರೆ.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಫ್‌ಆರ್‌ಪಿ ದರ ಪಾವತಿ ಕಡ್ಡಾಯ: ಸರಕಾರ ಪ್ರಕಟಿಸಿರುವ ಎಫ್‌ಆರ್‌ಪಿ ದರವನ್ನೇ ನೀಡುವುದಾಗಿ ಜಿಲ್ಲೆಯ ಎಲ್ಲ ಕಾರ್ಖಾನೆಗಳು ಇಂದೇ(ನ.14) ಘೋಷಿಸಬೇಕು. ಒಂದು ವೇಳೆ ಹೆಚ್ಚಿನ ದರ ನೀಡುವುದಾದರೆ ತಾವು ಘೋಷಿಸಿದ ಪ್ರಕಾರವೇ ಕಡ್ಡಾಯವಾಗಿ ನೀಡಬೇಕು. ಯಾವುದೇ ಕಾರಣಕ್ಕೂ ಎಫ್‌ಆರ್‌ಪಿ ಗಿಂತ ಕಡಿಮೆ ನೀಡಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.

ಕಾರ್ಖಾನೆಗಳು ಎಫ್‌ಆರ್‌ಪಿಗಿಂತ ಹೆಚ್ಚಿನ ದರ ಪ್ರಕಟಿಸುವುದಕ್ಕೆ ಸರಕಾರದ ಆಕ್ಷೇಪಣೆ ಇಲ್ಲ. ಆದರೆ, ಕಾರ್ಖಾನೆ ಆರಂಭದಲ್ಲಿ ಒಮ್ಮೆ ಪ್ರಕಟಿಸುವ ದರದ ಪ್ರಕಾರವೇ ಎಲ್ಲ ರೈತರಿಗೂ ಬಿಲ್ ಪಾವತಿಸಬೇಕು. ನಿಯಮಾವಳಿ ಪ್ರಕಾರ ಕಬ್ಬು ಪೂರೈಸಿದ ಹದಿನಾಲ್ಕು ದಿನಗಳಲ್ಲಿ ಬಿಲ್ ಪಾವತಿಸಬೇಕು. ಒಂದು ವೇಳೆ ತಪ್ಪಿದಲ್ಲಿ ಶೇ.15 ಬಡ್ಡಿದರದ ಸಮೇತ ಪಾವತಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಕಾರ್ಖಾನೆಗಳು ಮೊದಲು ಹೆಚ್ಚಿನ ದರ ಪ್ರಕಟಿಸಿ ನಂತರದ ದಿನಗಳಲ್ಲಿ ಕಡಿಮೆ ಹಣ ಪಾವತಿಸುವುದರಿಂದ ರೈತರಿಗೆ ಅನ್ಯಾಯ ಆಗುತ್ತಿದೆ. ಕಾರ್ಖಾನೆಗಳು ಇದನ್ನು ಅರಿತುಕೊಂಡು ವ್ಯವಹರಿಸಬೇಕು. ತಾವು ಪ್ರಕಟಿಸಿದ ಪ್ರಕಾರವೆ ಬಿಲ್ ಪಾವತಿಸಬೇಕು. ಕಾರ್ಖಾನೆ ಆಡಳಿತ ಮಂಡಳಿಯವರು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತ ಮುಖಂಡರ ಜತೆ ಚರ್ಚಿಸಿ ದರ ಪ್ರಕಟಿಸಬೇಕು ಎಂದು ಅವರು ಸಲಹೆ ನೀಡಿದರು.

ತೂಕಯಂತ್ರ ಪರಿಶೀಲನೆಗೆ ಸೂಚನೆ: ಜಿಲ್ಲೆಯ ಎಲ್ಲ ಕಾರ್ಖಾನೆಗಳ ಕಬ್ಬು ಖರೀದಿ ಮತ್ತು ಸಕ್ಕರೆ ಮಾರಾಟದ ತೂಕಯಂತ್ರಗಳನ್ನು ಒಂದು ವಾರದೊಳಗೆ ಪರಿಶೀಲಿಸಿ ವರದಿ ನೀಡಬೇಕು ಎಂದು ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ದೂಧಗಂಗಾ ಕಾರ್ಖಾನೆಯು ಕಳೆದ ವರ್ಷ ಪ್ರತಿ ಟನ್ ಕಬ್ಬಿಗೆ 2900 ರೂ.ದರ ಘೋಷಣೆ ಮಾಡಿತ್ತು. ಆದರೆ ನಂತರದ ದಿನಗಳಲ್ಲಿ ಕಡಿಮೆ ದರ ಪಾವತಿ ಮಾಡಿರುವ ಬಗ್ಗೆ ಪ್ರಶ್ನಿಸಿದ ಜಿಲ್ಲಾಧಿಕಾರಿ, ವ್ಯತ್ಯಾಸವಾಗಿರುವ ಬಿಲ್ ಅನ್ನು ತಕ್ಷಣ ಪಾವತಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್.ಸುಧೀರಕುಮಾರ್ ರೆಡ್ಡಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಭವಾನಿಸಿಂಗ್ ಮೀನಾ, ಡಿಸಿಪಿ ನಂದಗಾವಿ, ಚಿಕ್ಕೋಡಿ, ಬೆಳಗಾವಿ ಉಪ ಭಾಗಾಧಿಕಾರಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಸಮೀದಾ ಆಫ್ರೀನ್ ಬಾನು ಬಳ್ಳಾರಿ ಮತ್ತು ರೈತ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News