ನ.15ಕ್ಕೆ ಸಿಎಂ ಮೊದಲ ‘ರೈತ ಸ್ಪಂದನ’ ಕಾರ್ಯಕ್ರಮ

Update: 2018-11-14 16:34 GMT

ಬೆಂಗಳೂರು, ನ. 14: ಸ್ವಾತಂತ್ರ್ಯೊತ್ಸವ ಭಾಷಣದಲ್ಲಿ ಮಾಡಿದ ಘೋಷಣೆಯಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮೊದಲ ‘ರೈತ ಸ್ಪಂದನ’ ಕಾರ್ಯಕ್ರಮಕ್ಕೆ ನಾಳೆ (ನ.15) ಬೀದರ್‌ನಲ್ಲಿ ಚಾಲನೆ ನೀಡಲಿದ್ದಾರೆ. ಕೃಷಿ ಒಂದು ಲಾಭದಾಯಕ ಉದ್ಯಮ ಎಂಬ ಭಾವವನ್ನು ರೈತರ ಮನದಲ್ಲಿ ಮೂಡಿಸಿ, ಕೃಷಿಕರನ್ನು ಆಧುನಿಕ ತಂತ್ರಜ್ಞಾನದತ್ತ ಸೆಳೆದೊಯ್ಯುವುದು ‘ರೈತ ಸ್ಪಂದನ’ ಕಾರ್ಯಕ್ರಮದ ಮೂಲ ಆಶಯ.

ಆಗಸ್ಟ್ ತಿಂಗಳಿನಲ್ಲಿ ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ‘ಭತ್ತ ನಾಟಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಅದರ ಮುಂದುವರೆದ ಭಾಗವಾಗಿ ನಾಳೆ ಮಧ್ಯಾಹ್ನ 2.30ಕ್ಕೆ ಬೀದರ್ ಜಿಲ್ಲೆ ಚಿಟ್ಟಾ ಗ್ರಾಮದ ಪ್ರಗತಿಪರ ರೈತರ ತೊಟಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಬೀದರ್ ರಂಗಮಂದಿರದಲ್ಲಿ ಆಯೋಜಿಸಿರುವ ರೈತ ಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತರೊಂದಿಗೆ ಸಂವಾದ ನಡೆಸಲಿದ್ದು, ಜಿಲ್ಲೆಯ ಐವರು ಪ್ರಗತಿಪರ ರೈತರ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಯಾರಿಸಿರುವ ಸಾಕ್ಷ್ಯಚಿತ್ರ ಹಾಗೂ ಸರಕಾರ ರೈತರಿಗೆ ನೀಡುತ್ತಿರುವ ಯೊಜನೆಗಳ ಕುರಿತ ಕಿರುಚಿತ್ರವನ್ನು ಸಿಎಂ ಕುಮಾರಸ್ವಾಮಿ ವೀಕ್ಷಿಸಲಿದ್ದಾರೆ.

ಮಿಶ್ರ ಬೆಳೆಯ ಪ್ರಯೋಗದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ರಾಯಚೂರು ಜಿಲ್ಲೆಯ ಪ್ರಗತಿಪರ ಕೃಷಿಕರಾದ ಕವಿತಾ ಉಮಾಶಂಕರ ಮಿಶ್ರಾ ಅವರು ಈ ಸಂದರ್ಭದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಜಿಲ್ಲೆಯ ಸುಮಾರು 800 ಜನ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಕೃಷಿ ಸಚಿವ ಎನ್. ಎಚ್. ಶಿವಶಂಕರ ರೆಡ್ಡಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಸಂವಾದ ನಿರ್ವಹಣೆ ಮಾಡಲಿದ್ದಾರೆಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News