ಮೈಸೂರಿನಲ್ಲೂ ಆ್ಯಂಬಿಡೆಂಟ್ ಕಂಪೆನಿಯಿಂದ ವಂಚನೆ: ಆರೋಪ

Update: 2018-11-14 16:47 GMT

ಮೈಸೂರು,ನ.14: ಈಗಾಗಲೇ ಸಾಕಷ್ಟು ಸುದ್ಧಿ ಮಾಡಿರುವ ಬೆಂಗಳೂರಿನ ಆ್ಯಂಬಿಡೆಂಟ್ ಕಂಪೆನಿ ವಂಚನೆ ನಗರದಲ್ಲಿಯೂ ನಡೆದಿದ್ದು, ಇಲ್ಲಿ ಹಣ ಕಳೆದುಕೊಂಡಿರುವ ಸುಮಾರು ಒಂದೂವರೆ ಸಾವಿರದಿಂದ ಎರಡು ಸಾವಿರ ಮಂದಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಬಂಧಿತ ಸಂಸ್ಥೆಗಳು ನೆರವಾಗಬೇಕೆಂದು ಸಂತ್ರಸ್ತರ ಪರವಾಗಿ ವಕೀಲ ಹರೀಶ್ ಮನವಿ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ಹಗರಣಕ್ಕೆ ಸಂಬಂಧಿಸಿದಂತೆ ಕೇವಲ ಗಣಿ ದಣಿ ರೆಡ್ಡಿ ಹಾಗೂ ಕಂಪನಿ ಮಾಲಕ ಫರೀದ್ ಸುತ್ತವೇ ಎಲ್ಲ ಸುದ್ಧಿ ಹರಡುತ್ತಿದ್ದು, ವಾಸ್ತವವಾಗಿ ಹಣ ಕಳೆದುಕೊಂಡವರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜೊತೆಗೆ, ನಗರದಲ್ಲಿ ಕಂಪನಿ ಬಹುತೇಕ ಮುಸ್ಲಿಂ ಬಡ ಕುಟುಂಬಗಳನ್ನೇ ಗುರಿಯಾಗಿರಿಸಿಕೊಂಡು ಸುಮಾರು ಎರಡು ಸಾವಿರ ಮಂದಿಯಿಂದ ಒಟ್ಟಾರೆ ಐವತ್ತರಿಂದ ನೂರು ಕೋಟಿ ರೂ.ಗಳವರೆಗೆ ಹಣ ಸಂಗ್ರಹಿಸಿ ವಂಚಿಸಿದೆ. ಈ ನಡುವೆ ತಮ್ಮ ಹೋರಾಟಕ್ಕೆ ನಗರ ಪೊಲೀಸರು ಸಾಕಷ್ಟು ಪೂರಕವಾಗಿ ಸ್ಪಂದಿಸುತ್ತಿದ್ದರೂ, ಸಂಬಂಧಿಸಿದ ಇಲಾಖೆ, ಸಚಿವಾಲಯಗಳು ಸಂತ್ರಸ್ತರಿಗೆ ಅವರ ಹಣ ವಾಪಸಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು.

ಅಲ್ಲದೆ, ಫರೀದ್‍ಗೆ ಸಂತ್ರಸ್ತರು ಬ್ಯಾಂಕ್ ನೆಫ್ಟ್ ಮೂಲಕವೇ ನಿರ್ದಿಷ್ಟ ಖಾತೆಗೆ ಹಣ ವರ್ಗಾಯಿಸಿದ್ದು, ಆತ ಅದನ್ನು ಮೊಬೈಲ್ ವ್ಯವಹಾರ, ಆಸ್ತಿ ವ್ಯವಹಾರ, ಚಿನ್ನದ ಮೇಲೆ ಹೂಡಿಕೆ ಮಾಡಿ ಲಾಭಾಂಶ ದೊರಕಿಸಿಕೊಡುವುದಾಗಿ ನಂಬಿಸಿದ. ಆದರೆ ತಮಗೆ ಆತ ಅಂತಾರಾಷ್ಟ್ರೀಯ ಬಿಟ್ ಕಾಯ್ನ್ ಚಟುವಟಿಕೆ ಮೇಲೆ ಹೂಡಿರುವ ಶಂಕೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಈ ವೇಳೆ ಸಂತ್ರಸ್ತರು ಮಾತನಾಡಿ, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂಪೆನಿ ನಗರದ ಐಷಾರಾಮಿ ಹೊಟೇಲೊಂದರಲ್ಲಿ ದೊಡ್ಡದೊಂದು ಔತಣಕೂಟ ಏರ್ಪಡಿಸಿ, ಬಳಿಕ ಉದಯಗಿರಿಯಲ್ಲಿ ಕಚೇರಿ ಶಾಖೆ ತೆರೆದು ಕೆಲವರಿಂದ ಹಣ ಸಂಗ್ರಹಿಸಿ, ತಿಂಗಳಿಗೆ ಲಕ್ಷಕ್ಕೆ ಹತ್ತು ಸಾವಿರದಂತೆ ಲಾಭಾಂಶ ನೀಡಿತು. ಇದನ್ನು ನಂಬಿದ ಅನೇಕರು ಅದೇ ರೀತಿ ಕನಿಷ್ಟ ಲಕ್ಷದಂತೆ ಹಣ ತೊಡಗಿಸಿ ಈಗ ವಂಚನೆಗೊಳಗಾಗಿದ್ದಾರೆಂದು ವಿವರಿಸಿದರು.

ಸಂತ್ರಸ್ತರ ಪೈಕಿ ಸೈಯದ್ ಅಬ್ದುಲ್, ಇಮ್ರಾನ್, ಮಹ್ಮದ್ ಇಮ್ರಾನ್ ಖಾನ್, ಹಸೀಫ್ ಅಹ್ಮದ್ ಖುರೇಷಿ, ಅಬ್ದುಲ್ ಲತೀಫ್ ಮೊದಲಾದವರು ಗೋಷ್ಟಿಯಲ್ಲಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News