ಮೈಸೂರು ವಿವಿ ಕುಲಪತಿ ಆಯ್ಕೆ: ಮೂರು ಜನರ ಹೆಸರು ಸರಕಾರಕ್ಕೆ ಶಿಫಾರಸ್ಸು

Update: 2018-11-14 16:56 GMT

ಬೆಂಗಳೂರು, ನ.14: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಗೆ ರಚಿಸಿದ್ದ ಶೋಧನಾ ಸಮಿತಿ ಸಭೆ ನಡೆಸಿ ಮೂರು ಜನರ ಹೆಸರನ್ನು ಅಂತಿಮ ಮಾಡಿ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಸಲ್ಲಿಸಿದೆ.

ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ನಾರಾಯಣ ಗೌಡರ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ಸಭೆ ನಡೆದಿದ್ದು, ಅಂತಿಮವಾಗಿ ಮೂರು ವ್ಯಕ್ತಿಗಳ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಸರಕಾರಕ್ಕೆ ರವಾನಿಸಲಾಗಿದೆ. ಈ ಶಿಫಾರಸ್ಸು ಕಡತವನ್ನು ಸರಕಾರ ಶೀಘ್ರವೇ ರಾಜ್ಯಪಾಲರಿಗೆ ಕಳುಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಹೇಮಂತ್ ಕುಮಾರ್, ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರೊ.ಮಿಡತಲೆ ರಾಣಿ, ಮಂಗಳೂರು ವಿವಿಯ ಪ್ರೊ.ಚಂದ್ರಶೇಖರ್, ಬೆಂವಿವಿಯ ಪ್ರೊ.ರಾಮಚಂದ್ರಗೌಡ, ಪ್ರೊ.ಸೋಮಶೇಖರ್ ಸೇರಿದಂತೆ ಹಲವರು ಹೆಸರುಗಳು ಆಕಾಂಕ್ಷಿಗಳ ಪಟ್ಟಿಯಲ್ಲಿತ್ತು.

ಶೋಧನಾ ಸಮಿತಿಗೆ 82 ಅರ್ಜಿಗಳು ಬಂದಿದ್ದು, ಕುಲಪತಿ ನೇಮಕ ಮಾನದಂಡ ಅಡಿ ಎಲ್ಲ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವ ಸಮಿತಿ ಮೂವರ ಹೆಸರನ್ನು ಅಂತಿಮಗೊಳಿಸಿ, ಶಿಫಾರಸು ಮಾಡಲಾಗಿದೆ.

ಪ್ರೊ.ರಂಗಪ್ಪ ಅವರ ಬಳಿಕ ಕಳೆದ ಎರಡು ವರ್ಷಗಳಿಂದ ಮೈಸೂರು ವಿವಿ ಕುಲಪತಿ ಹುದ್ದೆ ಖಾಲಿ ಇದ್ದು, ಪ್ರಭಾರ ಕುಲಪತಿಗಳ ನೇತೃತ್ವದಲ್ಲಿಯೇ ವಿವಿ ನಡೆಯುತ್ತಿದೆ. ಇದೀಗ ಅಂತಿಮವಾಗಿ ಕುಲಪತಿ ನೇಮಕಕ್ಕೆ ಉನ್ನತ ಶಿಕ್ಷಣ ಸಚಿವರು ಮುಂದಾಗಿದ್ದಾರೆ. ಸರಕಾರ ಅಂತಿಮ ಗೊಳಿಸಿದ ಹೆಸರಿಗೆ ರಾಜ್ಯಪಾಲರ ಅಂಕಿತ ಬಿದ್ದ ನಂತರವಷ್ಟೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News