ಪರಿಸರ ಸಂರಕ್ಷಿಸದಿದ್ದರೆ ಮನುಕುಲಕ್ಕೆ ಕಂಟಕ: ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ್

Update: 2018-11-14 17:04 GMT

ಶಿವಮೊಗ್ಗ, ನ. 14: 'ಪರಿಸರ ಸಂರಕ್ಷಣೆ ಪ್ರತಿಯೋರ್ವರ ಜವಾಬ್ದಾರಿಯಾಗಿದೆ. ಪರಿಸರಕ್ಕೆ ಹಾನಿಯಾದರೆ ಮನುಕುಲಕ್ಕೆ ಕಂಟಕ ಬರುವುದು ನಿಶ್ಚಿತ. ಈ ಕಾರಣದಿಂದ ಪರಿಸರ ಉಳಿಸಿ, ಬೆಳೆಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಎ. ದಯಾನಂದ್ ಅಭಿಪ್ರಾಯಪಟ್ಟಿದ್ದಾರೆ. 

ಬುಧವಾರ ನಗರದಲ್ಲಿ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಸೈಕಲ್ ಕ್ಲಬ್ ಸೇರಿದಂತೆ ವಿವಿಧ ಸಂಘಟನೆಗಳು ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. ಪರಿಸರ ವಿನಾಶದಿಂದ ಈಗಾಗಲೇ ಹತ್ತು ಹಲವು ರೀತಿಯ ಪ್ರಾಕೃತಿಕ ವಿಕೋಪಗಳನ್ನು ನೋಡುತ್ತಿದ್ದೆವೆ. ಅತಿವೃಷ್ಟಿ, ಅನಾವೃಷ್ಟಿಯಂತಹ ವೈಪರೀತ್ಯಗಳು ಕಂಡುಬರುತ್ತಿವೆ. ಇದು ಮನುಕುಲಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಪರಿಸರ ಸಂರಕ್ಷಿಸದಿದ್ದರೆ, ಅಪಾಯ ಕಟ್ಟಿಟ್ಟಬುತ್ತಿಯಾಗಿದೆ ಎಂದರರು. 

ಪರಿಸರ ಹೋರಾಟಗಾರ ಪ್ರೊ. ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಪಶ್ಚಿಮಘಟ್ಟಗಳು ಕರ್ನಾಟಕ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ಜೀವನಾಡಿಯಾಗಿದೆ. ಹತ್ತು ಹಲವು ಅಪರೂಪದ ಜೀವಸಂಕುಲ, ಸಸ್ಯ ಪ್ರಬೇಧದ ತಾಣವಾಗಿದೆ. ಹಾಗೆಯೇ ಜೀವ ನದಿಗಳ ಉಗಮ ಸ್ಥಾನವಾಗಿದೆ. ಈ ಕಾರಣದಿಂದಲೇ ವಿಶ್ವ ಸಂಸ್ಥೆಯು ಪಶ್ಚಿಮಘಟ್ಟವನ್ನು ವಿಶ್ವದ ಅತೀ ಸೂಕ್ಷ್ಮ ಪ್ರದೇಶಗಳಲ್ಲೊಂದೆಂದು ಗುರುತಿಸಿದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಪಶ್ಚಿಮಘಟ್ಟಗಳು ಅಪಾಯದಂಚಿಗೆ ಸಿಲುಕಿವೆ. ಅಭಿವೃದ್ದಿ ಕಾಮಗಾರಿಗಳು, ಮಾನವನ ದುರಾಸೆಯಿಂದ ಘಟ್ಟ ಪ್ರದೇಶಕ್ಕೆ ಧಕ್ಕೆಯಾಗುತ್ತಿದೆ. ಅಪರೂಪದ ಜೀವ ಸಂಕುಲ ನಾಶವಾಗುತ್ತಿದೆ. ಅರಣ್ಯ ಪ್ರದೇಶ ಕಣ್ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಪಶ್ಚಿಮಘಟ್ಟಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನವು ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ನ.18 ರಂದು ಆಯೋಜಿಸಲಾಗಿರುವ ಪಶ್ಚಿಮಘಟ್ಟಗಳ ಉಳಿವಿನ ಅಭಿಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪರಿಸರ ಪ್ರೇಮಿಗಳು ಆಗಮಿಸಬೇಕು. ಈ ಮೂಲಕ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಪ್ರೊ. ಬಿ.ಎಂ.ಕುಮಾರಸ್ವಾಮಿಯವರು ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News