ನ.17 ರಂದು ಮೈಸೂರು ಮನಪಾ ಮೇಯರ್, ಉಪಮೇಯರ್ ಚುನಾವಣೆ

Update: 2018-11-14 17:35 GMT

ಮೈಸೂರು. ನ.14: ಮೈಸೂರು ಮಹಾ ನಗರಪಾಲಿಕೆ ನೂತನ ಮೇಯರ್ ಮತ್ತು ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಆಯ್ಕೆ ಸಂಬಂಧ ನ.17 ರ ಶನಿವಾರ ಪೂರ್ವಾಹ್ನ 11.30 ಕ್ಕೆ ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ.

ಮೈಸೂರು ಮಹಾನಗರ ಪಾಲಿಕೆ ಸದಸ್ಯರು ಹಾಗೂ ಮೈಸೂರು ಲೋಕಸಭಾ ಸದಸ್ಯರು, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಸದಸ್ಯರು, ಮತ್ತು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ವಿಧಾನ ಪರಿಷತ್ ಸದಸ್ಯರಿಗೆ ಸಭೆಯ ತಿಳುವಳಿಕೆ ಪತ್ರವನ್ನು ಕಳುಹಿಸಲಾಗಿದೆ.

ಮೇಯರ್/ ಉಪ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೆ ನಾಮಪತ್ರಗಳನ್ನು ನ.12 ರಿಂದ ಕಚೇರಿ ವೇಳೆಯಲ್ಲಿ ನಗರಪಾಲಿಕೆಯ ಪರಿಷತ್ ಕಾರ್ಯದರ್ಶಿಯವರ ಕಚೇರಿಯಲ್ಲಿ ಪಡೆಯಬಹುದಾಗಿದೆ. ನ.12 ರಿಂದ ಕಚೇರಿ ಅವಧಿಯಲ್ಲಿ ಹಾಗೂ ನ.17 ರಂದು ಬೆಳಿಗ್ಗೆ 7 ಗಂಟೆಯಿಂದ 9.30 ರವರೆಗೆ (ಸಾರ್ವತ್ರಿಕ ರಜೆಯನ್ನು ಹೊರತುಪಡಿಸಿ) ಅಪರ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ, ಮೈಸೂರು ರವರಿಗೆ ಕೊಠಡಿ ಸಂಖ್ಯೆ 13, ನೆಲಮಹಡಿ (ಎಸ್‍ಬಿಐ ಬ್ಯಾಂಕ್ ಪಕ್ಕ), ಮೈಸೂರು ಮಹಾನಗರ ಪಾಲಿಕೆ ಮುಖ್ಯ ಕಚೇರಿ ಆವರಣ ಇಲ್ಲಿ ಸಲ್ಲಿಸಬಹುದಾಗಿದೆ.

ನ.17 ರಂದು ಪೂರ್ವಾಹ್ನ 11.30 ಕ್ಕೆ ಮಹಾನಗರಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸಭೆಯು ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಅವರ ಅಧ್ಯಕ್ಷತೆಯಲ್ಲಿ ಸಮಾವೇಶಗೊಂಡು ಚುನಾವಣಾ ಪ್ರಕ್ರಿಯೆಯನ್ನು ಜರುಗಿಸಲಾಗುವುದು.

ಚುನಾವಣಾ ಪ್ರಕ್ರಿಯೆ ಪ್ರಾರಂಭದಲ್ಲಿ 2018 ರ ಚುನಾವಣೆಯಲ್ಲಿ ಆಯ್ಕೆಯಾದ ಮೈಸೂರು ಮಹಾನಗರ ಪಾಲಿಕೆ ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News