ಕೇಂದ್ರ ಸರ್ಕಾರ ಮೀಸಲಾತಿಯನ್ನು ದುರ್ಬಲಗೊಳಿಸುತ್ತಿದೆ: ಮಾಜಿ ಸಚಿವ ಮಹದೇವಪ್ಪ ಆರೋಪ

Update: 2018-11-14 17:39 GMT

ಮೈಸೂರು,ನ.14: ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೀಸಲಾತಿಯನ್ನು ದುರ್ಬಲಗೊಳಿಸುತ್ತಿದೆ. ಮೀಸಲಾತಿ ದುರ್ಬಲವಾಗಿದೆ. ಬ್ಯಾಕ್‍ಲಾಗ್ ಹುದ್ದೆಗಳು ಹೆಚ್ಚಿದ್ದರೂ ಭರ್ತಿ ಮಾಡುತ್ತಿಲ್ಲ, ಪ್ರಧಾನಿಗಳು ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಮೋದಿ ಕೊಟ್ಟಿರುವ ಭರವಸೆಯನ್ನು ಚುನಾವಣೆಗೆ ಹೋಗುವ ಮುನ್ನ ಈಡೇರಿಸಬೇಕು ಎಂದು ಆಗ್ರಹಿಸಿದರು.

ಅಸ್ಸಾಂ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡು ಮಕ್ಕಳಿದ್ದವರಿಗೆ ಸ್ಪರ್ಧೆಗೆ ಅವಕಾಶ ಇಲ್ಲ ಎನ್ನಲಾಗಿದೆ. ಇದು ಸಂವಿಧಾನ ಬಾಹಿರ. ಕಲ್ಯಾಣದ ಹೆಸರಲ್ಲಿ ದಲಿತ, ಬುಡಕಟ್ಟು, ಹಿಂದುಳಿದವರನ್ನು ಅವಕಾಶ ವಂಚಿತರಾಗಿ ಮಾಡುತ್ತಿರುವುದು ಸಲ್ಲದು ಎಂದರು.

ಸಿದ್ದರಾಮಯ್ಯ ಹಾಗೂ ತಮ್ಮ ಸ್ನೇಹದ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಇಬ್ಬರೂ ಸೋತಿದ್ದೆವು. ಇಬ್ಬರಿಗೂ ಬೇಜಾರಾಗಿತ್ತು. ಹೀಗಾಗಿ ಮೂರು ತಿಂಗಳು ವಿಶ್ರಾಂತಿಯಲ್ಲಿದ್ದೆವು. ನನ್ನ ಅವರ ಸ್ನೇಹ 35 ವರ್ಷ ಹಳೆಯದು. ಯಾಕೆ ನಮ್ಮಲ್ಲಿ ಭಿನ್ನಾಭಿಪ್ರಾಯ ಬರುತ್ತೆ. ಈಗ ಜೊತೆಯಲ್ಲೆ ಓಡಾಡುತ್ತಿದ್ದೇವೆ. ಮುಂದೆಯೂ ಓಡಾಡುತ್ತೇವೆ. ನನ್ನ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಮುಖಂಡರಾದ ದೇವಗಳ್ಳಿ ಸೋಮಶೇಖರ್, ಆಲಗೂಡು ಶಿವಕುಮಾರ್, ಸೋಸಲೆ ಮಹೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News