ಕೇಂದ್ರ ಸರಕಾರದಿಂದ ಬಿಎಸ್ಸೆನ್ನೆಲ್ ಖಾಸಗೀಕರಣಕ್ಕೆ ಹುನ್ನಾರ: ಆರೋಪ

Update: 2018-11-14 17:51 GMT

ಚಿಕ್ಕಮಗಳೂರು, ನ.14: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಎಸ್ಸೆನೆಲ್ ಸಮಸ್ತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಸದಸ್ಯರು ಬುಧವಾರ ನಗರದಲ್ಲಿ ಧರಣಿ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಬೇಡಿಕೆಗಳ ಆಗ್ರಹಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ ಬಿಎಸ್ಸೆನೆಲ್ ಸಂಸ್ಥೆಯ ನೌಕರರು ನಂತರ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡರು. ಈ ವೇಳೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಎಸ್.ಎನ್.ಇ.ಎ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ, ಬಿಎಸ್ಸೆನ್ನೆಲ್ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿದೆ. ಆದರೆ ಸರಕಾರ ಖಾಸಗಿ ಕಂಪೆನಿಗಳಿಗೆ 4ಜಿ ಸೇವೆಯನ್ನು ನೀಡಿದ್ದು, ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸಂಸ್ಥೆಗೆ ಆವಶ್ಯವಿರುವ ತರಂಗಾಂತರಗಳನ್ನು ನೀಡಿಲ್ಲ. 60 ಸಾವಿರ ಟವರ್ ಗಳನ್ನು ಖಾಸಗಿ ಕಂಪೆನಿಗಳಿಗೆ ನೀಡಿರುವ ಸರಕಾರ ಉಳಿದ ಎಲ್ಲಾ ಟವರ್ ಗಳನ್ನು ಬಿಎಸ್ಸೆನ್ನೆಲ್ ಕಂಪೆನಿಯಿಂದ ಕಿತ್ತುಕೊಳ್ಳಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. ಸರ್ಕಾರದ ಈ ಧೋರಣೆಯನ್ನು ಪ್ರಶ್ನಿಸಿ ಸಂಘಟನೆ ಕಾನೂನು ಸಮರ ಆರಂಭಿಸಿದೆ ಎಂದರು.

ಇಲಾಖಾ ವತಿಯಿಂದ ನೀಡುತ್ತಿದ್ದ ಸೌಲಭ್ಯಗಳಿಗೆ ಪೈಪೋಟಿಯುತವಾಗಿ ಖಾಸಗಿ ದೂರಸಂಪರ್ಕ ಸಂಸ್ಥೆಗಳು ಕಡಿಮೆ ದರದಲ್ಲಿ ಸೌಲಭ್ಯಗಳನ್ನು ನೀಡುತ್ತಿವೆ. ಇದು ಬಿಎಸ್ಸೆನೆಲ್ ಸಂಸ್ಥೆಗೆ ದೊಡ್ಡ ಪೆಟ್ಟು ನೀಡುತ್ತದೆ. ಬಿಎಸ್ಸೆನ್ನೆಲ್ ಸಂಸ್ಥೆಯ ಆದಾಯದ ಮೂಲಗಳನ್ನು ಟ್ರಾಯ್ ಮೂಲಕ ಹತ್ತಿಕ್ಕಲಾಗುತ್ತಿದೆ. ಸರಕಾರದ ಈ ನೀತಿಗಳಿಂದ ಬಿಎಸ್ಸೆನೆಲ್ ನಷ್ಟದ ಹಾದಿಯತ್ತ ಹೋಗುತ್ತಿದ್ದು, ನಷ್ಟದ ನೆಪ ಮಾಡಿಕೊಂಡು ಖಾಸಗೀಕರಣಗೊಳಿಸುವ ಹುನ್ನಾರವನ್ನು ಕೇಂದ್ರ ಸರಕಾರ ನಡೆಸುತ್ತಿದೆ ಎಂದು ಆರೋಪಿಸಿದರು. 

4ಜಿ ತರಂಗಾಂತರಗಳನ್ನು ಕೂಡಲೇ ನೀಡುವುದು, ಮೊಬೈಲ್ ಟವರ್ ಗಳ ಖಾಸಗೀಕರಣ ಪ್ರಕ್ರಿಯೆಗೆ ಕಡಿವಾಣ ಹಾಕುವುದು, ಸಂಸ್ಥೆ ನಷ್ಟದಲ್ಲಿರುವುದನ್ನೇ ನೆಪಮಾಡಿಕೊಂಡು ನೌಕರರಿಗೆ ಕಾಲ ಕಾಲಕ್ಕೆ ನೀಡಬೇಕಾದ ಸೌಲಭ್ಯಗಳಿಗೆ ತಡೆ ಹಾಕಬಾರದು. ಖಾಸಗೀ ಕಂಪೆನಿಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಬಿಎಸ್ಸೆನೆಲ್ ಸಂಸ್ಥೆಗೂ ನೀಡುವ ಮೂಲಕ ತಾರತಮ್ಯ ಧೋರಣೆ ನಿವಾರಿಸಬೇಕು. ಪಿಂಚಣಿದಾರರ ವೇತನವನ್ನು ಸಕಾಲದಲ್ಲಿ ಪರಿಷ್ಕರಣೆ ಮಾಡುವಂತೆ ಇದೇ ವೇಳೆ ನೌಕರರು ಸರಕಾರವನ್ನು ಆಗ್ರಹಿಸಿದರು.

ನಂತರ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಈ ಸಂಬಂಧ ಮನವಿಯನ್ನು ಸಲ್ಲಿಸಲಾಯಿತು. ಧರಣಿಯಲ್ಲಿ ಬಿಎಸ್ಸೆನೆಲ್ ನಿವೃತ್ತ ನೌಕರರ ಪದಾಧಿಕಾರಿ ಹಿರಿಯಣ್ಣ, ಜಿಲ್ಲಾ ಕಾರ್ಯದರ್ಶಿ ಜಿ.ರಂಗಸ್ವಾಮಿ, ಮುಕುಂದ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News