ಚಿಕ್ಕಮಗಳೂರು ಶೇ.90ರಷ್ಟು ಬಯಲು ಶೌಚ ಮುಕ್ತ ಜಿಲ್ಲೆ: ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ

Update: 2018-11-14 17:58 GMT

ಚಿಕ್ಕಮಗಳೂರು, ನ.14: ಬೇಸ್‍ಲೈನ್ ಸರ್ವೇ ಪ್ರಕಾರ ಜಿಲ್ಲಾದ್ಯಂತ ಎಲ್ಲ ಮನೆಗಳಿಗೂ ಶೌಚಾಲಯ ಕಲ್ಪಿಸಲಾಗಿದೆ. ಕೆಲ ಕಡೆ ಜನತೆ ನೀರಿನ ಕೊರತೆಯಿಂದಾಗಿ ಶೌಚಾಲಯ ಬಳಕೆ ಮಾಡುತ್ತಿಲ್ಲ ಎಂಬ ಮಾಹಿತಿ ಇದ್ದು, ಒಟ್ಟಾರೆ ಜಿಲ್ಲೆ ಶೇ.90ರಷ್ಟು ಬಯಲು ಶೌಚಾಲಯ ಮುಕ್ತ ಜಿಲ್ಲೆಯಾಗಿದೆ. ಶೇ.100ರಷ್ಟು ಸಾಧನೆಗೆ ಇನ್ನೂ ಸಮಯಬೇಕಾಗುತ್ತದೆ. ಶೀಘ್ರ ಈ ಗುರಿ ಸಾಧನೆಗೆ ಶ್ರಮಿಸಲಾಗುವುದು ಎಂದು  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹೇಳಿದರು.

ಬುಧವಾರ ಜಿಲ್ಲಾ ಪಂಚಾಯತ್ ಕಚೇರಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರ ಬೇಸ್‍ಲೈನ್ ಸರ್ವೇ ಪ್ರಕಾರ ಜಿಲ್ಲಾದ್ಯಂತ ಎಲ್ಲ ಮನೆಗಳಿಗೂ ಶೌಚಾಲಯ ಕಲ್ಪಿಸಲಾಗಿದೆ. ಕೆಲ ಕಡೆ ಜನತೆ ಶೌಚಾಲಯ ಬಳಕೆ ಮಾಡುತ್ತಿಲ್ಲ, ಶೌಚಾಲಯ ಬಳಕೆಯ ಅರಿವು ಮೂಡಿಸಲಾಗುತ್ತಿದೆ ಎಂದರು.

ಶೌಚಾಲಯ ಬಳಕೆ ಮಾಡದಿರಲು ನೀರಿನ ಕೊರತೆ ಎಂದು ಕೆಲವರು ಹೇಳುತ್ತಾರೆ. ಬರಪೀಡಿತ ಪ್ರದೇಶಗಳಲ್ಲಿ ಶುದ್ಧಗಂಗಾ ಘಟಕ ತೆರೆಯಲಾಗಿದೆ. ಶೌಚಾಲಯಕ್ಕೆ ಶುದ್ದ ಕುಡಿಯುವ ನೀರಿನ ಆವಶ್ಯಕತೆ ಇಲ್ಲ. ಆದರೂ ಕೆಲವರು ನೀರಿನ ಕೊರತೆ ಎಂದು ಹೇಳುತ್ತಾರೆ. 2013ರ  ಬೇಸ್‍ಲೈನ್ ಸರ್ವೆ ಪ್ರಕಾರ ಜಿಲ್ಲೆಯಲ್ಲಿ ಒಟ್ಟಾರೆ 1,82,707 ಕುಟುಂಬಗಳಿದ್ದು, ಅವುಗಳನ್ನು 69,418 ಕುಟುಂಬಗಳಲ್ಲಿ ಶೌಚಾಲಯ ಇರಲಿಲ್ಲ. ಸ್ವಚ್ಚ ಭಾರತ ಅಭಿಯಾನ ಆರಂಭಗೊಂಡ ನಂತರ 2013-14ರಲ್ಲಿ 5,104, 2014-15 ರಲ್ಲಿ 14,378, 2015-16ರಲ್ಲಿ 9332, 2016-17ರಲ್ಲಿ 31,255 ಹಾಗೂ 2017-18ರಲ್ಲಿ 9348 ಸೇರಿ ಒಟ್ಟಾರೆ 69,418 ಶೌಚಾಲಯಗಳನ್ನು ನಿರ್ಮಿಸಿ ಗುರಿ ತಲುಪಲಾಗಿತ್ತು. 2017ರ ಅಕ್ಟೋಬರ್ 2 ರಂದು ರಾಜ್ಯ ಸರಕಾರವು ಜಿಲ್ಲೆಯನ್ನು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಿತ್ತು ಎಂದು ತಿಳಿಸಿದರು.

ಶೌಚಾಲಯ ನಿರ್ಮಿಸಿಕೊಂಡ ಎಲ್ಲ ಕುಟುಂಬಗಳಿಗೆ ಹಣ ಪಾವತಿಸಲಾಗಿದೆ. ಬೇಸ್‍ಲೈನ್ ಸರ್ವೆಯಲ್ಲಿ ಸೇರದಿದ್ದ ಕೆಲವು ಕುಟುಂಬಗಳಿಗೂ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಈ ಪೈಕಿ 95 ಜನರಿಗೆ ಬಿಲ್ ಪಾವತಿಸಲು ಬಾಕಿ ಇದೆ. ಅವರಿಗೂ ಶೀಘ್ರದಲ್ಲಿಯೇ ಬಿಲ್ ಪಾವತಿಸಲಾಗುವುದು ಎಂದು ಹೇಳಿದರು.

ಸ್ವಚ್ಛ ಭಾರತ ಅಭಿಯಾನದ ಕೊನೆಯ ವರ್ಷವಾಗಿರುವ ಹಿನ್ನೆಲೆಯಲ್ಲಿ ಶೌಚಾಲಯ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ವಿಶ್ವ ಶೌಚಾಲಯ ದಿನದ ಆಚರಣೆಗಾಗಿ ಇಂದಿನಿಂದ 16 ರವರೆಗೆ ಮಕ್ಕಳ ಗ್ರಾಮಸಭೆಗಳನ್ನು ನಡೆಸಲಾಗುವುದು. ಸ್ವಚ್ಛಗ್ರಹಿಗಳಿಂದ ಎಲ್ಲ ಮನೆಗಳಿಗೆ ಭೇಟಿ ನೀಡಿ ಶೌಚಾಲಯ ನಿರ್ಮಾಣದ ಬಳಿಕ ಬಳಕೆಯನ್ನು ನಿರಂತರವಾಗಿಟ್ಟುಕೊಳ್ಳಲು ಪ್ರೇರಣೆ ನೀಡಲಾಗುವುದು ಎಂದರು.

ನ.15 ರಿಂದ 19ರವರೆಗೆ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗುವುದು. ಶಾಲೆಗಳಲ್ಲಿರುವ ಮಕ್ಕಳ ಮಂತ್ರಿಮಂಡಲದ ಆರೋಗ್ಯ ಮಂತ್ರಿಗಳ ಮೂಲಕ ಶಾಲೆಯ ಇನ್ನಿತರ ಮಕ್ಕಳಿಗೆ ಮಾಹಿತಿ ನೀಡಿಕೆ ಹಾಗೂ ಎಲ್ಲ ಮಕ್ಕಳಿಂದ ಶೌಚಾಲಯ ಕಡ್ಡಾಯ ಬಳಕೆಗಾಗಿ ಪೋಷಕರಿಕಗೆ ಪತ್ರ ಚಳುವಳಿಯನ್ನು ಮಾಡಲಾಗುವುದು ಎಂದು ಹೇಳಿದರು.

ಸ್ವ ಸಹಾಯ ಸಂಘಗಳ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಂದ ರಂಗೋಲಿ ಮತ್ತು ವಿವಿಧ ಚಿತ್ತಾರಗಳನ್ನು ನ.16 ರಿಂದ ರಚಿಸಲಾಗುವುದು. ಎಲ್ಲ ಪಂಚಾಯತ್ ಗಳ ಕೇಂದ್ರ ಸ್ಥಾನದಲ್ಲಿ ನ.17 ರಂದು ಸಂಜೆ ದೀಪಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ನ.18 ರಂದು ಶಾಲಾ ಮಕ್ಕಳಿಂದ ಸೈಕಲ್ ಜಾಥಾ, 19 ರಂದು ಎತ್ತಿನ ಗಾಡಿ ಜಾಥಾ, ಎಲ್ಲ ತಾಲೂಕುಗಳಲ್ಲಿ ಸ್ಥಬ್ದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.

ಜಿ.ಪಂ. ಉಪಾಧ್ಯಕ್ಷ ಆನಂದಪ್ಪ ಮಾತನಾಡಿ, 2018-19ನೇ ಸಾಲಿನ ಲಿಂಕ್ ಡಾಕ್ಯುಮೆಂಟ್‍ನಲ್ಲಿ ಜಿಲ್ಲೆಗೆ 121.86 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸಲ್ಲಿಸಿದ್ದ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ ಎಂದರು. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವಿಠಲ್ ಸುದ್ದಿಗೋಷ್ಠಿಯಲ್ಲಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News