ವಾಯು ಮಾಲಿನ್ಯದ ಗಂಡಾಂತರ

Update: 2018-11-15 04:20 GMT

ಬಂಡವಾಳಶಾಹಿ ಅಭಿವೃದ್ಧಿ ಮಾರ್ಗ ನಮ್ಮ ಬದುಕನ್ನು ಎಷ್ಟು ಅಧೋಗತಿಗೆ ತಂದು ನಿಲ್ಲಿಸಿದೆ ಎಂಬುದಕ್ಕೆ ದೇಶದ ರಾಜಧಾನಿ ದಿಲ್ಲಿಯ ಅಸಹನೀಯ ವಾಯು ಮಾಲಿನ್ಯ ಕಣ್ಣ ಮುಂದಿನ ಉದಾಹರಣೆಯಾಗಿದೆ. ಅಲ್ಲಿ ವಾಯುಮಾಲಿನ್ಯ ಎಷ್ಟು ವಿಪರೀತಕ್ಕೆ ಹೋಗಿದೆಯೆಂದರೆ ಉಸಿರಾಡಲು ಶುದ್ಧ ಗಾಳಿಗಾಗಿ ದಿಲ್ಲಿಯ ಜನತೆ ಪರದಾಡುತ್ತಿದ್ದಾರೆ. ವಾಯು ಮಾಲಿನ್ಯದ ಪರಿಣಾಮವಾಗಿ ಕವಿದ ದಟ್ಟಹೊಗೆಯಿಂದಾಗಿ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ರಸ್ತೆಗಳು ಬಿಕೋ ಎನ್ನುತ್ತಿವೆ, ಶಾಲೆ ಕಾಲೇಜುಗಳಿಗೆ ಆಗಾಗ ರಜೆ ಘೋಷಿಸಲಾಗುತ್ತಿದೆ, ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ, ಆದರೂ ದಿಲ್ಲಿಯ ಪರಿಸ್ಥಿತಿ ಸುಧಾರಿಸುತ್ತಿಲ್ಲ.

ದೇಶದ ಉಳಿದ ಕಾಸ್ಮೋಪಾಲಿಟನ್ ನಗರಗಳಲ್ಲೂ ವಾಯುಮಾಲಿನ್ಯದ ಅಪಾಯ ಎದುರಾಗಿದೆ. ದಿಲ್ಲಿಯ ಪರಿಸ್ಥಿತಿಯಿಂದ ಆತಂಕಗೊಂಡ ಸುಪ್ರೀಂ ಕೋರ್ಟ್, ಹತ್ತು ವರ್ಷ ಹಳೆಯದಾದ ಡೀಸೆಲ್ ಮತ್ತು ಹದಿನೈದು ವರ್ಷ ಹಳೆಯದಾದ ಪೆಟ್ರೋಲ್ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಲು ಸರಕಾರಕ್ಕೆ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ನ ಈ ಆದೇಶ ಇಂದಲ್ಲ ನಾಳೆ ದೇಶದ ಇತರ ಮಹಾನಗರಗಳಾದ ಬೆಂಗಳೂರು, ಮುಂಬೈ, ಕೋಲ್ಕತಾ, ಚೆನ್ನೈ ನಗರಗಳಿಗೂ ವಿಸ್ತರಿಸಲ್ಪಟ್ಟರೆ ಅಚ್ಚರಿಯಿಲ್ಲ. ದೇಶದ ರಾಜಧಾನಿ ದಿಲ್ಲಿಯ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಜನತೆಗೆ ಶುದ್ಧ ಗಾಳಿಯನ್ನು ಪೂರೈಸಲು ರಸ್ತೆಗಳಲ್ಲಿ ಆಮ್ಲಜನಕ ಕೇಂದ್ರಗಳು ಸಾಲಾಗಿ ತಲೆ ಎತ್ತಿವೆ. ಕಚೇರಿ, ಕಾರ್ಖಾನೆಗಳಿಗೆ ಹೋಗುವ ನೌಕರರು, ಶಾಲೆ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬೆನ್ನಿಗೆ ಆಮ್ಲಜನಕದ ಸಿಲಿಂಡರ್‌ಗಳನ್ನು ಕಟ್ಟಿಕೊಂಡು ಓಡಾಡುವ ಸನ್ನಿವೇಶ ನಿರ್ಮಾಣವಾಗಿದೆ, ವಾಯು ಮಾಲಿನ್ಯದ ಜೊತೆಗೆ ಚಳಿಗಾಲದ ಹಿಮಗಾಳಿ ಸೇರಿಕೊಂಡು ಜನಸಾಮಾನ್ಯರ ಜಂಘಾಬಲವನ್ನೇ ಉಡುಗಿಸಿದೆ.

ದಿಲ್ಲಿಯ ಈ ದುರ್ಗತಿಗೆ ಏನು ಕಾರಣ ಎಂಬುದು ತಿಳಿದವರಿಗೆಲ್ಲ ಗೊತ್ತಿರುವ ಸಂಗತಿ. ಜಾಗತೀಕರಣದ ನಂತರ ನಮ್ಮ ನಗರಗಳ ಲಂಗು ಲಗಾಮಿಲ್ಲದ ಯೋಜನಾಬದ್ಧವಲ್ಲದ ಬೆಳವಣಿಗೆ, ಎಲ್ಲೆಡೆ ಆವರಿಸಿದ ಕಾಂಕ್ರಿಟ್ ಕಾಡು, ಸುರಕ್ಷತಾ ನಿಯಮಗಳ ಕಡೆಗಣನೆ, ತ್ಯಾಜ್ಯ ನಿರ್ವಹಣೆಯಲ್ಲಿ ನಗರ ಪಾಲಿಕೆಗಳ ವೈಫಲ್ಯ, ವಿಪರೀತ ವಾಹನ ದಟ್ಟಣೆ, ಏರ್ ಕಂಡಿಶನರ್‌ಗಳು ಮತ್ತು ಜನರೇಟರ್‌ಗಳ ವಿಪರೀತ ಬಳಕೆ ಹೀಗೆ ಮುಂತಾದ ಕಾರಣಗಳಿಂದ ವಾಯುಮಾಲಿನ್ಯ ಅಪಾಯಕಾರಿಯಾಗಿ ಪರಿಣಮಿಸಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ಸರಕಾರ ಕ್ರಮ ಕೈಗೊಂಡಿಲ್ಲವೆಂದಲ್ಲ, ಆದರೂ ಹೊಗೆಯುಗುಳುವ ಕೈಗಾರಿಕೆಗಳು, ಬೀದಿಯಲ್ಲಿ ಕಸಕಡ್ಡಿ ಸುಡುವುದು ಇವುಗಳನ್ನೆಲ್ಲ ನಿರ್ಬಂಧಿಸಲು ಸಾಧ್ಯವಾಗಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಮ್ಮ ದೇಶದ ಮಹಾನಗರಗಳು ವಾಯುಮಾಲಿನ್ಯದಿಂದ ತತ್ತರಿಸಿ ಹೋಗಲಿವೆ. ಪ್ರತಿವಾರ ನಮ್ಮ ಮಹಾನಗರಗಳಲ್ಲಿ ನಾಲ್ಕು ಸಾವಿರದಿಂದ ಐದು ಸಾವಿರದವರೆಗೆ ಹೊಸ ವಾಹನಗಳು ನೋಂದಣಿ ಆಗುತ್ತವೆ. ಈ ವಾಹನಗಳ ಹೆಚ್ಚಳಕ್ಕೆ ತಕ್ಕ ರಸ್ತೆಗಳು ನಮ್ಮಲ್ಲಿಲ್ಲ. ಹೊಸ ವಾಹನಗಳ ನೋಂದಣಿಯ ಮೇಲೆ ನಿರ್ಬಂಧ ಹೇರುವ ಇಚ್ಛಾಶಕ್ತಿ ಸರಕಾರಕ್ಕಿಲ್ಲ, ಕಾರ್ಪೊರೇಟ್ ಕಂಪೆನಿಗಳ ಆಟೊಮೊಬೈಲ್ ಲಾಬಿಗಳ ಪ್ರಭಾವ ಸರಕಾರದ ಕೈಗಳನ್ನು ಕಟ್ಟಿ ಹಾಕುತ್ತದೆ. ಹೀಗಾಗಿ ಪರಿಸ್ಥಿತಿ ಅಪಾಯಕಾರಿಯಾಗಿದೆ.

ನಮ್ಮ ಕರ್ನಾಟಕದಲ್ಲೂ ಬೆಂಗಳೂರು ಮಾತ್ರವಲ್ಲ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು, ಹಾಸನ, ಕಲಬುರಗಿ ಮುಂತಾದ ಮಹಾನಗರಗಳು ವಾಯುಮಾಲಿನ್ಯದ ಭೀತಿಯನ್ನು ಎದುರಿಸುತ್ತಿವೆ. ನಮ್ಮ ಮಹಾನಗರಗಳಲ್ಲಿ ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಇಲ್ಲ, ಕಸ ನಿರ್ವಹಣೆಯಲ್ಲಿ ನಗರಾಡಳಿತಗಳು ವಿಫಲಗೊಂಡಿವೆ, ಘನತ್ಯಾಜ್ಯದ ನಿರ್ವಹಣೆಯನ್ನು ಅವು ಸರಿಯಾಗಿ ನಡೆಸುತ್ತಿಲ್ಲ. ರಿಯಲ್ ಎಸ್ಟೇಟ್ ಮತ್ತು ಭೂ ಮಾಫಿಯಾಗಳ ಒತ್ತಡಕ್ಕೆ ಮಣಿದು ಬಡಾವಣೆಗಳಲ್ಲಿ ಹಸಿರುಪಟ್ಟಿ (ಗ್ರೀನ್‌ಬೆಲ್ಟ್) ಬಿಡುವುದನ್ನೇ ಮರೆತಿವೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಗಿಡ ಮರಗಳನ್ನು ಕಡಿಯಲಾಗುತ್ತದೆ. ಲೇಔಟ್‌ಗಳನ್ನು ನಿರ್ಮಿಸಲು ಕೆರೆ ಕಟ್ಟೆಗಳನ್ನು ನಾಶ ಮಾಡಲಾಗುತ್ತಿದೆ. ಉದ್ಯಾನಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಸ್ಥಳೀಯ ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಜನರು ಕಂಡ ಕಂಡಲ್ಲಿ ಕೊಳವೆ ಬಾವಿಗಳನ್ನು ಕೊರೆಯಲು ಅವಕಾಶ ನೀಡಲಾಗಿದೆ. ಮಳೆನೀರು ಕೊಯ್ಲು ಸರಿಯಾಗಿ ಆಗುತ್ತಿಲ್ಲ. ಸೋಲಾರ್ ಅಳವಡಿಕೆಯ ನಿಯಮಗಳನ್ನು ಬಹುತೇಕ ನಾಗರಿಕರು ಪಾಲಿಸುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಹದಗೆಡುತ್ತಿದೆ. ದಿಲ್ಲಿಯ ವಿಷಕಾರಿ ವಾಯುಮಾಲಿನ್ಯದ ಅಪಾಯ ಭವಿಷ್ಯದಲ್ಲಿ ದೇಶದ ಉಳಿದ ನಗರಗಳು ಎದುರಿಸುವ ದಿನಗಳು ದೂರವಿಲ್ಲ. ಆದ್ದರಿಂದ ಕೆರೆ, ಬಾವಿಗಳ ರಕ್ಷಣೆ, ನದಿಗಳ ಸಂರಕ್ಷಣೆ, ಅರಣ್ಯ ಗಿಡ ಮರಗಳನ್ನು ಬೆಳೆಸುವುದು ನಮ್ಮ ಆದ್ಯತೆಯಾಗಬೇಕಾಗಿದೆ.

ಜನರ ಪ್ರಾಣಕ್ಕೆ ಮಾತ್ರವಲ್ಲ ಸಕಲ ಜೀವ ರಾಶಿಗೆ ಗಂಡಾಂತರ ತರುವ ಈ ವಾಯು ಮಾಲಿನ್ಯ ತಡೆಯಬೇಕಾದರೆ ಸರಕಾರ ಮನಸ್ಸು ಮಾಡಬೇಕು. ಆದರೆ ಈಗ ಅಧಿಕಾರದಲ್ಲಿರುವವರ ಆದ್ಯತೆಯ ಪಟ್ಟಿಯಲ್ಲಿ ಪರಿಸರ ರಕ್ಷಣೆ ಎಂಬುದಿಲ್ಲ. ದೇಶದ ನಗರ, ಪಟ್ಟಣಗಳ ಹಳೆಯ ಹೆಸರುಗಳನ್ನು ಬದಲಿಸಿ ಹೊಸ ಹೆಸರುಗಳನ್ನಿಡುವುದೇ ಇವರ ದೈನಂದಿನ ಕಾರ್ಯಕ್ರಮವಾಗಿದೆ. ಜನರಿಗೆ ಉಸಿರಾಡುವ ಗಾಳಿಯೂ ಅಲಭ್ಯವಾದ ಈ ಪರಿಸ್ಥಿತಿಗೆ ಈಗಿನ ಅಭಿವೃದ್ಧಿ ಮಾರ್ಗವೇ ಕಾರಣ. ಆದರೆ ದೇಶದ ಅಪರೂಪದ ಅರಣ್ಯ ಸಂಪತ್ತನ್ನು ಕಾರ್ಪೊರೇಟ್ ಬಂಡವಾಳಶಾಹಿ ಮಡಿಲಿಗೆ ಹಾಕಲು ಹೊರಟ ಬಿಜೆಪಿ ಸರಕಾರ ಜನರನ್ನು ಕೋಮು ಆಧಾರದಲ್ಲಿ ವಿಭಜಿಸಿ ಮುಂದಿನ ಚುನಾವಣೆ ಗೆಲ್ಲಲು ಹೊರಟಿದೆ.

ಅದಕ್ಕಾಗಿ ಉತ್ತರ ಪ್ರದೇಶದ ಯೋಗಿ ಸರಕಾರ ಮಾತ್ರವಲ್ಲ ಹರ್ಯಾಣ ಮತ್ತು ಗುಜರಾತ್ ಬಿಜೆಪಿ ಸರಕಾರಗಳು ನಗರಗಳ ಮಾಲಿನ್ಯ ನಿವಾರಣೆಗಿಂತ ನಗರಗಳ ಹೆಸರು ಬದಲಾವಣೆಗೆ ಒತ್ತು ನೀಡುತ್ತಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪರಿಸರ ರಕ್ಷಣೆ ಹಾಗೂ ವಾಯು ಮಾಲಿನ್ಯ ನಿವಾರಣೆಗೆ ರಾಜಕೀಯ ಪಕ್ಷಗಳು ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಭರವಸೆ ನೀಡಬೇಕು. ವಾಯುಮಾಲಿನ್ಯಕ್ಕೆ ಅತ್ಯಂತ ಮುಖ್ಯ ಕಾರಣವಾದ ವಾಹನಗಳ ದಟ್ಟಣೆ ಕಡಿಮೆಯಾಗಬೇಕು. ಖಾಸಗಿ ವಾಹನಗಳಿಗೆ ಕಡಿವಾಣ ಹಾಕಿ ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಸರಕಾರ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ಕುಡಿಯುವ ನೀರನ್ನು ಖರೀದಿಸುತ್ತಿರುವಂತೆ ಉಸಿರಾಡುವ ಗಾಳಿಯನ್ನು ಖರೀದಿಸಬೇಕಾದ ಸ್ಥಿತಿ ಬಂದೀತು. ನಾಳೆ ಕಾರ್ಪೊರೇಟ್ ಕಂಪೆನಿಗಳು ಉಸಿರಾಡುವ ಗಾಳಿಯ ಮಾರಾಟಕ್ಕೂ ಮುಂದಾಗಬಹುದು, ಹಾಗಾಗಬಾರದೆಂದರೆ ಸರಕಾರ ಈಗಲೇ ಎಚ್ಚತ್ತು ವಾಯುಮಾಲಿನ್ಯ ತಡೆಗೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News