ಟಿಪ್ಪು ಮತಾಂಧ ಎನ್ನುವವರು ನಿಜವಾದ ಮತಾಂಧರು: ವೈರಲ್ ಆದ ಬಿಜೆಪಿ ನಾಯಕನ ಹೇಳಿಕೆ

Update: 2018-11-15 14:10 GMT

ಶಿವಮೊಗ್ಗ, ನ. 15: ಒಂದೆಡೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರೋಧಿಸಿ, ಇತ್ತೀಚೆಗೆ ಬಿಜೆಪಿ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಮತ್ತೊಂದೆಡೆ ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರ ಪಟ್ಟಣದ ಪುರಸಭೆಯ ಬಿಜೆಪಿ ಸದಸ್ಯರೋರ್ವರು, 'ಟಿಪ್ಪು ಸುಲ್ತಾನ್ ಮತಾಂಧ ಎಂದು ಹೇಳುವವರೇ ನಿಜವಾದ ಮತಾಂಧರು' ಎಂದು ಹೇಳುವ ಮೂಲಕ ಪಕ್ಷದ ನಾಯಕರಲ್ಲಿ ತೀವ್ರ ಇರುಸುಮುರಸು ಉಂಟು ಮಾಡಿದ್ದಾರೆ.

ಶಿಕಾರಿಪುರ ಪಟ್ಟಣದ ಬಿಜೆಪಿ ಕಾರ್ಯದರ್ಶಿಯೂ ಆಗಿರುವ ಪರಶುರಾಮ್ ಚಾರುಗಲ್ಲಿ ಟಿಪ್ಪುವಿನ ಗುಣಗಾನ ಮಾಡಿದ್ದಾರೆ. ಟಿಪ್ಪುವನ್ನು ಹೊಗಳುವ ಅವರ ಭಾಷಣದ ವೀಡಿಯೋ ತುಣುಕು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರುದ್ದ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. 

ಶಿಕಾರಿಪುರ ಪಟ್ಟಣದ ಮಾವಿನಕೊಪ್ಪಲಿನ ಕುಂಬಾರಗುಂಡಿ ಮಸೀದಿಯಲ್ಲಿ ಇತ್ತೀಚೆಗೆ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 2ನೇ ವಾರ್ಡ್‍ನ ಪರಶುರಾಮ್ ಚಾರುಗಲ್ಲಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ ಭಾಷಣದಲ್ಲಿ ಅವರು ಟಿಪ್ಪು ಸುಲ್ತಾನ್ ಗುಣಗಾನ ಮಾಡಿದ್ದರು. 

'ಟಿಪ್ಪು ಮತಾಂಧ ಎಂದು ಕರೆಯುವವರಿಗೆ ಇತಿಹಾಸದ ಅರಿವಿಲ್ಲ. ಅದಕ್ಕಾಗಿ ಹಾಗೆ ಮಾತನಾಡುತ್ತಾರೆ. ಟಿಪ್ಪು ಜಯಂತಿ ವಿರೋಧಿಸುವವರು ನಿಜವಾದ ಮತಾಂಧರಾಗಿದ್ದಾರೆ. ಹಿಂದೂ ದೇವಾಲಯ ರಕ್ಷಿಸಿದ್ದ ಟಿಪ್ಪು ಮಹಾ ಸಾಧಕನಾಗಿದ್ದಾನೆ. ಬ್ರಿಟಿಷರ ವಿರುದ್ದ ಹೋರಾಟ ನಡೆಸಿದ ಅವರು ದೇಶಪ್ರೇಮಿಯಾಗಿದ್ದಾರೆ. ಸುಮ್ಮನೆ ಅವರಿಗೆ ಮೈಸೂರು ಹುಲಿ ಎಂದು ಬಿರುದು ಬಂದಿಲ್ಲ. ಆ ಮಟ್ಟಕ್ಕೆ ಅವರು ಹೋರಾಟ ನಡೆಸಿದ್ದಾರೆ. ರಾಜ್ಯ ಸಂರಕ್ಷಣೆಗಾಗಿ ತಮ್ಮ ಇಬ್ಬರು ಮಕ್ಕಳನ್ನು ಒತ್ತೆಯಿಟ್ಟಿದ್ದರು ಎಂದಿದ್ದಾರೆ. 

ರೈತರು, ದೀನದಲಿತರ ಪರವಾಗಿ ಕಾರ್ಯನಿರ್ವಹಿಸಿದ ಟಿಪ್ಪು, ನೂರಾರು ಹಿಂದೂ ದೇವಾಲಯಗಳ ಸಂರಕ್ಷಣೆ ಮಾಡಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಟಿಪ್ಪು ಜಯಂತಿ ವಿರೋಧಿಸಲಾಗುತ್ತಿದೆ. ಬೇರೆ ಜಾತಿಯವರ ಜಯಂತಿ ಮಾಡಿದಾಗ ನೀವು ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಸಹಕಾರ ಕೊಡುತ್ತೀರಿ. ಆದೇ ರೀತಿಯಲ್ಲಿ ನಾವು ಕೂಡ ಸಹಕಾರ ನೀಡಬೇಕು. ಟಿಪ್ಪು ದೇಶ, ರಾಜ್ಯಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಶೃಂಗೇರಿ ಮಠಕ್ಕೆ ಮರಾಠರು, ಪೇಶ್ವೆಗಳು ದಾಳಿ ಮಾಡಿ ಹಾನಿಗೊಳಿಸಿದಾಗ ಜೀರ್ಣೋದ್ದಾರಗೊಳಿಸಿದ್ದರು ಎಂದು ಟಿಪ್ಪುವಿನ ಗುಣಗಾನ ಮಾಡಿದ್ದರು. 

ಕಳೆದೆರಡು ದಿನಗಳ ಹಿಂದೆ ಶಿಕಾರಿಪುರ ಕಾಂಗ್ರೆಸ್ ಪಕ್ಷದ ನಾಯಕರೋರ್ವರು, ಬಿಜೆಪಿ ಪುರಸಭಾ ಸದಸ್ಯ ಪರಶುರಾಮ್ ಚಾರುಗಲ್ಲಿ ಮಾಡಿದ್ದ ಭಾಷಣದ ವೀಡಿಯೋ ತುಣಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದೀಗ ಇದು ಸಾಕಷ್ಟು ಸದ್ದು ಮಾಡಲಾರಂಭಿಸಿದೆ. 

ತಬ್ಬಿಬ್ಬು: ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದ ಯಾವೊಬ್ಬ ಜನಪ್ರತಿನಿಧಿಯೂ ಭಾಗವಹಿಸಿರಲಿಲ್ಲ. ಜಯಂತಿ ಆಚರಣೆ ವಿರುದ್ಧ ಆ ಪಕ್ಷ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ಕೂಡ ನಡೆಸಿತ್ತು. ಮತ್ತೊಂದೆಡೆ ಯಡಿಯೂರಪ್ಪ ಸ್ವಕ್ಷೇತ್ರದ ಪಕ್ಷದ ಪುರಸಭಾ ಸದಸ್ಯ, ಮಸೀದಿಯೊಂದರಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿ ಆಚರಣೆಯಲ್ಲಿ ಭಾಗಿಯಾಗಿದ್ದಲ್ಲದೆ ಟಿಪ್ಪುವಿನ ಗುಣಗಾನ ಮಾಡಿದ ಅಂಶ ಬೆಳಕಿಗೆ ಬಂದಿರುವುದು ಆ ಪಕ್ಷದ ಸ್ಥಳೀಯ ಮುಖಂಡರನ್ನು ತಬ್ಬಿಬ್ಬುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News