ಸಂವಿಧಾನ ವಿರೋಧಿ ಆದೇಶ ಹಿಂಪಡೆಯಿರಿ: ಡಾ.ಎಚ್.ಸಿ ಮಹದೇವಪ್ಪ ಆಗ್ರಹ

Update: 2018-11-15 14:07 GMT

ಬೆಂಗಳೂರು, ನ. 15: ಒಂದಿಲ್ಲೊಂದು ವಿವಾದದಲ್ಲೆ ಸದಾ ಸುದ್ದಿಯಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಇದೀಗ ವಿವಿಧ ಹುದ್ದೆಗಳ ನೇಮಕದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಹಿತಕ್ಕೆ ವಿರುದ್ಧವಾದ ಆದೇಶವೊಂದನ್ನು ಹೊರಡಿಸುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದೆ.

2012ರಲ್ಲಿ ಹೈಕೋರ್ಟ್ ಕೆಪಿಎಸ್ಸಿ 1998, 1999 ಹಾಗೂ 2004ರಲ್ಲಿ ಕೆಎಎಸ್ ಹುದ್ದೆಗಳ ನೇಮಕಕ್ಕೆ ಮಾತ್ರ ಅನ್ವಯವಾಗುವಂತೆ ನೀಡಿದ್ದ ಆದೇಶದ ನೆಪದಲ್ಲಿ ರಾಜ್ಯ ಸರಕಾರ ನವೆಂಬರ್ 3ರಂದು ಸಾಮಾಜಿಕ ನ್ಯಾಯ ಮತ್ತು ಸಂವಿಧಾನಕ್ಕೆ ವಿರುದ್ಧವಾದ ಆದೇಶವನ್ನು ಹೊರಡಿಸಿದೆ ಎಂಬ ಆರೋಪ ಕೇಳಿ ಬಂದಿದೆ.

‘ನ.3ಕ್ಕೆ ರಾಜ್ಯ ಸರಕಾರ ಹೊರಡಿಸಿರುವ ಆದೇಶ ಮೀಸಲಾತಿ ನಿಯಮಗಳಿಗೆ ವಿರುದ್ಧವಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಸಂವಿಧಾನಕ್ಕೂ ಇದು ವಿರುದ್ಧ. ಆದುದರಿಂದ ಈ ಆದೇಶವನ್ನು ತೀವ್ರವಾಗಿ ವಿರೋಧಿಸುತ್ತೇನೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ’ ಎಂದು ಮಾಜಿ ಸಚಿವ ಡಾ.ಎಚ್. ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಡಾ.ಮಹದೇವಪ್ಪ, ‘ಎಸ್ಸಿ-ಎಸ್ಟಿ, ಓಬಿಸಿಗಳಿಗೆ ವಿರುದ್ಧವಾಗಿರುವ ರಾಜ್ಯ ಸರಕಾರದ ಆದೇಶವನ್ನು ಹಿಂಪಡೆಯಬೇಕೆಂದು ಕೋರಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್ ಅವರಿಗೆ ಶೀಘ್ರವೇ ಪತ್ರ ಬರೆಯುತ್ತೇನೆ’ ಎಂದು ಹೇಳಿದರು.

‘ರಾಜ್ಯದಲ್ಲಿನ ಮೈತ್ರಿ ಸರಕಾರ ದಲಿತ, ಹಿಂದುಳಿದವರ ಹಿತ ರಕ್ಷಣೆ ಮಾಡಬೇಕು. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕೇ ಹೊರತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಯಾವುದೇ ಕಾರಣಕ್ಕೂ ನಡೆಯಬಾರದು’ ಎಂದು ಅವರು ಮನವಿ ಮಾಡಿದರು.

ಜೇಷ್ಠತೆ ಧಿಕ್ಕರಿಸಿದ್ದು ಸಲ್ಲ: ‘ರಾಜ್ಯ ಸರಕಾರದ ಆದೇಶ ಅನುಷ್ಠಾನಗೊಂಡರೆ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ಜೇಷ್ಠತೆ(ಮೆರಿಟ್) ಧಿಕ್ಕರಿಸಿ ಅವರ ನ್ಯಾಯೋಚಿತ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ. ಎಸ್ಸಿ-ಎಸ್ಟಿ, ಓಬಿಸಿ ವರ್ಗದವರು ಎಷ್ಟೇ ಜೇಷ್ಠತೆ ಇದ್ದರೂ ಅವರನ್ನು ‘ಸಾಮಾನ್ಯ ವರ್ಗದಲ್ಲಿ’ ಪರಿಗಣಿಸುವುದಿಲ್ಲ. ಬದಲಿಗೆ ಆಯಾ ವರ್ಗದ ಮೀಸಲಾತಿ ಅಡಿಯಲ್ಲೇ ಅವರನ್ನು ಪರಿಗಣಿಸಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾಗದಂತೆ ತಡೆಗಟ್ಟಿದಂತೆ ಆಗುತ್ತದೆ’ ಎಂದು ಮಹದೇವಪ್ಪ ವಿಶ್ಲೇಷಿಸಿದರು.

‘ಮೈತ್ರಿ ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಅವರು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಜನತೆ ಅವರನ್ನು ಬೆಂಬಲಿಸುವುದಿಲ್ಲ’ ಎಂದು ಮಹದೇವಪ್ಪ ಇದೇ ವೇಳೆ ಎಚ್ಚರಿಸಿದರು.

‘ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆ ಸಂಬಂಧದ ರಾಜ್ಯ ಸರಕಾರದ ಆದೇಶವನ್ನು ತಾನೂ ಗಮನಿಸಿದ್ದು, ಈ ಬಗ್ಗೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿ ಸರಿಪಡಿಸಲು ಕ್ರಮ ವಹಿಸಲಾಗುವುದು’

-ಸಿದ್ದರಾಮಯ್ಯ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News