ಸಿಎಂ ಜನತಾ ದರ್ಶನ: ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಎಚ್‌ಡಿಕೆ ಸೂಚನೆ

Update: 2018-11-15 14:13 GMT

ಬೀದರ್, ನ. 15: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನತಾ ದರ್ಶನದಲ್ಲಿ ದಾಖಲೆಯ ಪ್ರಮಾಣದಲ್ಲಿ ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಪರಿಹಾರ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.

ಗುರುವಾರ ಇಲ್ಲಿನ ನೆಹರೂ ಕ್ರೀಡಾಂಗಣದ ಏರ್ಪಡಿಸಿದ್ದ ಸಹಕಾರಿ ಸಪ್ತಾಹ ಉದ್ಘಾಟನಾ ಸಮಾರಂಭದ ವೇದಿಕೆಯ ಪಕ್ಕದಲ್ಲಿ ಹಾಕಿದ್ದ ಎರಡು ಮಳಿಗೆಗಳಲ್ಲಿ ಜನರು ಸಾಲುಸಾಲಾಗಿ ನಿಂತು ಅರ್ಜಿ ಸಲ್ಲಿಸಿದರು. ತಮ್ಮ ಬೇಡಿಕೆಗಳ ಅಹವಾಲನ್ನು ಸಲ್ಲಿಸಿ ಹೆಸರು ನೋಂದಾಯಿಸಿ ಸ್ವೀಕೃತಿ ಪಡೆದರು.

ಈ ಮಳಿಗೆಯಲ್ಲಿ ಸಂಜೆ 4.30ರ ವರೆಗೆ ಒಟ್ಟು 497 ಅರ್ಜಿಗಳು ಸ್ವೀಕೃತವಾಗಿದ್ದವು. ಸಮಾರಂಭದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ವಿಷಯ ಪ್ರಸ್ತಾಪಿಸಿದ ಕುಮಾರಸ್ವಾಮಿ, ಈ ಅರ್ಜಿಗಳನ್ನು ಪರಿಶೀಲಿಸಿ ಕೆಲ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಬೇಕೆಂದು ಸೂಚಿಸಿದರು. ಬಾಕಿ ಅರ್ಜಿಗಳ ವಿಲೇವಾರಿಗೆ ಕೂಡಲೇ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುವೆ ಎಂದರು.

ಬ್ಯಾಂಕುಗಳಿಂದ ಸಾಲ ಸಿಗುತ್ತಿಲ್ಲ. ಪಿಂಚಿಣಿ ಕೊಡುತ್ತಿಲ್ಲ. ನಮ್ಮ ಹೊಲಕ್ಕೆ ದಾರಿ ಇಲ್ಲ. ನಮಗೆ ಮನೆ ನಿರ್ಮಿಸಿಕೊಡಿ, ಉದ್ಯೋಗ ಕೊಡಿಸಿ. ರಸ್ತೆ ನಿರ್ಮಿಸಿ ಕೊಡಿ, ಪ್ರೌಢಶಾಲೆ ಮಂಜೂರು ಮಾಡಿಸಿಕೊಡಿ ಎನ್ನುವುದು ಸೇರಿದಂತೆ ಇನ್ನಿತರ ಅಹವಾಲುಗಳನ್ನು ಸಾರ್ವಜನಿಕರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News