ಮಡಿಕೇರಿ: ಲಂಚ ಪಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಎಸಿಬಿ ಬಲೆಗೆ

Update: 2018-11-15 15:32 GMT
ಮಾಯಾದೇವಿ ಗಲಗಲಿ- ಮೋಹನ್

ಮಡಿಕೇರಿ, ನ.15: ಮಹಿಳೆಯೊಬ್ಬರಿಂದ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಕೊಡಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮತ್ತು ಪ್ರಥಮ ದರ್ಜೆ ಗುಮಾಸ್ತರೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಉಪನಿರ್ದೇಶಕಿ ಮಾಯಾದೇವಿ ಗಲಗಲಿ ಹಾಗೂ ನೌಕರ ಮೋಹನ್ ಎಂಬುವವರನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಕಾಸರಗೋಡು ಮೂಲದ ಹಾಲಿ ಮೇಕೇರಿ ಸಮೀಪದ ಶಕ್ತಿ ನಗರದಲ್ಲಿ ವಾಸವಿರುವ ನಳಿನಾಕ್ಷಿ ಎಂಬವರ ಪತಿ ಮಾರ್ಚ್ ತಿಂಗಳಿನಲ್ಲಿ ಮೂರ್ನಾಡು ಸಮೀಪದ ಹೊಳೆಯೊಂದರಲ್ಲಿ ಮುಳುಗಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಬಳಿಕ ಈ ಪ್ರಕರಣ ಕೊಲೆಯ ತಿರುವು ಪಡೆದಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತಿಯ ಸಾವಿನ ಬಳಿಕ ನಳಿನಾಕ್ಷಿ ಮತ್ತು ಆಕೆಯ ಅತ್ತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಯಿದೆಯ ಅನ್ವಯ ತಲಾ 4 ಲಕ್ಷ ರೂ.ಗಳ ಪರಿಹಾರ ಧನ ಸರಕಾರದಿಂದ ಬಿಡುಗಡೆಯಾಗಿತ್ತು. ಈ ಪರಿಹಾರ ಹಣ ಪಡೆಯಲು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಯಾದೇವಿ ಗಲಗಲಿ ಅವರು 40 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಮನ ನೊಂದ ನಳಿನಾಕ್ಷಿ ಎಸಿಬಿಗೆ ದೂರು ನೀಡಿದ್ದರು.

ನಳಿನಾಕ್ಷಿ ಅವರ ದೂರನ್ನು ದಾಖಲಿಸಿಕೊಂಡ ಎಸಿಬಿ ಪೊಲೀಸರು ತಮ್ಮ ಮೊಬೈಲ್ ಮೂಲಕ ನಳಿನಾಕ್ಷಿ ಮತ್ತು ಮಾಯಾದೇವಿ ಗಲಗಲಿ ನಡುವೆ ಸಂಭಾಷಣೆ ನಡೆಸಿದ್ದರು. ಮಾತುಕತೆಯ ಸಂದರ್ಭ ಮಾಯಾದೇವಿ ಗಲಗಲಿ ಪರಿಹಾರ ಹಣ ನೀಡಬೇಕಾದರೆ 40 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿರುವುದು ಮೊಬೈಲ್ ಸಂಭಾಷಣೆಯಲ್ಲಿ ದಾಖಲಾಗಿದೆ. ಈ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ ಎಸಿಬಿ ಪೊಲೀಸರು ಇಂದು ಸಂಜೆ 5 ಗಂಟೆಯ ಸಮಯದಲ್ಲಿ ನಳಿನಾಕ್ಷಿ ಅವರು 20 ಸಾವಿರ ಲಂಚವನ್ನು ನೀಡುವ ಸಂದರ್ಭ ದಾಳಿ ನಡೆಸಿದರು. ಲಂಚವನ್ನು ಪ್ರಥಮ ದರ್ಜೆ ಸಹಾಯಕ ಮೋಹನ್ ಪಡೆಯುವಾಗ ಸಿಕ್ಕಿಬಿದ್ದಿದ್ದು, ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿಯನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಎಸಿಬಿ ಉಪ ಅಧೀಕ್ಷಕ ಪೂರ್ಣ ಚಂದ್ರ ತೇಜಸ್ವಿ ನೇತೃತ್ವದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News