ಬಾರ್ & ರೆಸ್ಟೋರೆಂಟ್‌ಗಳಲ್ಲಿ ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಆಕ್ಷೇಪ: ಪೊಲೀಸರ ವಿರುದ್ಧ ಕಿಡಿಕಾರಿದ ಹೈಕೋರ್ಟ್

Update: 2018-11-15 16:19 GMT

ಬೆಂಗಳೂರು, ನ.15: ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಪೊಲೀಸರ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ.

ನಗರದ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಮಹಿಳಾ ಪರಿಚಾರಕಿಯರನ್ನು ನೇಮಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳ ತಕರಾರು ಪ್ರಶ್ನಿಸಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲಕರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ನ್ಯಾಯಪೀಠ, ಮಹಿಳಾ ಉದ್ಯೋಗಿಗಳನ್ನ ಯಾಕೆ ನೀವು ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿತು. ಅಲ್ಲದೆ, ಪೊಲೀಸ್ ಇಲಾಖೆಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸುತ್ತಾರೆ. ಹಾಗೇನಾದರೂ ಅವರ ವಿರೋಧವನ್ನು ಲೆಕ್ಕಿಸದೆ ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡರೆ ಹಲವು ಕಾನೂನುಗಳ ಅಡಿಯಲ್ಲಿ ದೂರು ದಾಖಲಿಸಿಕೊಳ್ಳುತ್ತಾರೆ. ಇದರಿಂದ, ಮೂಲಭೂತ ಹಕ್ಕುಗಳಿಗೆ ಉಲ್ಲಂಘನೆಯಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಸಿಸಿಬಿ ಬಲವಂತವಾಗಿ ಮುಚ್ಚಿರುವ ಎಲ್ಲ 27 ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಕರ್ನಾಟಕ ಅಬಕಾರಿ ಕಾಯ್ದೆ-1965ರ ಅನ್ವಯ ಅಧೀಕೃತ ಪರವಾನಿಗೆ ಹೊಂದಿವೆ. ಈ ಪೈಕಿ 26 ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಸಿಎಲ್-9 ಹೊಂದಿದ್ದರೆ, ಒಂದು ಬಾರ್ ಆ್ಯಂಡ್ ರೆಸ್ಟೋರೆಂಟ್ ಸಿಎಲ್-7 ಹೊಂದಿದೆ. ಅಲ್ಲದೇ ಇವರೆಲ್ಲರೂ ಕರ್ನಾಟಕ ಪೌರ ನಿಗಮ ಕಾಯ್ದೆ-1976ರ ಅನ್ವಯ ಬಿಬಿಎಂಪಿಯಿಂದ ವಾಣಿಜ್ಯ ಪರವಾನಿಗೆ ಪಡೆದುಕೊಂಡಿದ್ದಾರೆ. ಅಲ್ಲದೇ ವಿವಿಧ ಪ್ರಾಧಿಕಾರಗಳಿಂದ ಅಗತ್ಯ ಪರವಾನಿಗೆ ಪಡೆದುಕೊಳ್ಳಲಾಗಿದೆ. ಸದ್ಯ ಈ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ಮುಚ್ಚಲ್ಪಟ್ಟಿರುವುದರಿಂದ ಇಲ್ಲಿ ಕೆಲಸ ಮಾಡುವ ಸಾವಿರಕ್ಕೂ ಹೆಚ್ಚು ಮಹಿಳೆಯರ ಕುಟುಂಬಗಳು ಬೀದಿಪಾಲಾಗಿವೆ. ಜೊತೆಗೆ ಸಾವಿರಕ್ಕೂ ಹೆಚ್ಚು ಪುರಷರು ಸಹ ಕೆಲಸವಿಲ್ಲದೇ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಪೊಲೀಸರು ವಿರೋಧ ಪಡಿಸುತ್ತಿರುವುದು ಏಕೆ? ಮಹಿಳಾ ಉದ್ಯೋಗಿಗಳನ್ನ ಯಾಕೆ ನೀವು ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದು, ಈ ಸಂಬಂಧ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News