ಕುಡಿಯುವ ನೀರು-ಮೇವು ಪೂರೈಕೆ ಕೊರತೆಯಾಗದಂತೆ ಕ್ರಮ: ಧಾರವಾಡ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ

Update: 2018-11-15 16:27 GMT

ಧಾರವಾಡ, ನ.15: ಮುಂಬರುವ ಬೇಸಿಗೆ ದಿನಗಳಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಮೇವು ಸಂಗ್ರಹಣೆಗೆ ಆದ್ಯತೆ ನೀಡಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಶಿರೂರ ಸೂಚಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನುವಾರುಗಳಿಗೆ ಅಗತ್ಯವಿರುವ ಮೇವು, ಲಸಿಕೆ ದಾಸ್ತಾನು ಹೊಂದಿರಬೇಕು. ವೈದ್ಯರು ದಿನದ 24 ತಾಸುಗಳ ಕಾಲವೂ ಜನರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಬೇಕು ಎಂದರು.

ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ನ.17 ರಂದು ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡುವ ಸಮಯದಲ್ಲಿ ಜಿಲ್ಲೆಯ ತೀವ್ರ ಬರಪೀಡಿತ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಮಚಂದ್ರ ಮಡಿವಾಳರ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಹನಿ ನೀರಾವರಿಗಾಗಿ ನೆರವು ನೀಡಲು ಸಾಕಷ್ಟು ಅನುದಾನವಿದೆ. ರೈತರಿಗೆ ಶೇ.90ರಷ್ಟು ಅನುದಾನ ನೀಡಲಾಗುವುದು. ಇನ್ನೂ ಕೆಲ ದಿನಗಳಲ್ಲಿ ರೈತರಿಂದ ಅರ್ಜಿ ಆಹ್ವಾನಿಸಲಾಗುವುದು. ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿದ್ದರೆ ಅವರಿಗೆ ಬೇಕಾಗುವ ಸೌಲಭ್ಯಗಳನ್ನು ಇಲಾಖೆ ವತಿಯಿಂದ ಒದಗಿಸಲಾಗುವುದು ಎಂದರು.

ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಶಾಲ ಅಡಹಳ್ಳಿಕರ್ ಮಾತನಾಡಿ, ಜಿಲ್ಲೆಯಾದ್ಯಂತ ಪಶುಗಳ ಕಾಲುಬಾಯಿ ರೋಗಕ್ಕೆ ಚಿಕಿತ್ಸೆ ನೀಡಲಾಗಿದೆ. ಬಹುಪಾಲು ಜಾನುವಾರುಗಳು ಗುಣಮುಖವಾಗಿವೆ. ಬರ ಪ್ರದೇಶವೆಂದು ಘೋಷಣೆಯಾದ ನವಲಗುಂದ ಹಾಗೂ ಹುಬ್ಬಳ್ಳಿಯಲ್ಲಿ ಮೇವು ಬ್ಯಾಂಕ್ ತೆರೆಯಲು ತಿಳಿಸಲಾಗಿದೆ ಎಂದರು.

ಜಿಪಂ ಸಿಇಒ ಡಾ. ಸತೀಶ ಬಿ.ಸಿ.ಮಾತನಾಡಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಕಷ್ಟು ಮೇವು ದಾಸ್ತಾನು ಇದೆ. ಅದನ್ನು ಕಟಾವು ಮಾಡಿ ತರುವ ಕುರಿತು ಕಾರ್ಯೋನ್ಮುಖರಾಗಬೇಕು ಎಂದರು. ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪಠಾಣ ಸಭೆಗೆ ಮಾಹಿತಿ ನೀಡಿ, ನೀರ ಸಾಗರದಲ್ಲಿನ ಮೀನುಗಾರಿಕಾ ಪ್ಲಾಂಟ್‌ನಲ್ಲಿ ಮೀನುಗಳನ್ನು ಬೆಳೆಸಲಾಗುತ್ತಿದೆ ಎಂದು ತಿಳಿಸಿದರು. ಆಗ ಸಿಇಒ ಸತೀಶ್ ಮಾತನಾಡಿ, ಜಿಲ್ಲೆಯಲ್ಲಿನ ಬಹುಪಾಲು ಗ್ರಾಮಗಳಲ್ಲಿ ದೊಡ್ಡ ಹಾಗೂ ಸಣ್ಣ ಕೆರೆಗಳು ಇವೆ. ಅಲ್ಲಿ ಇಲಾಖೆ ವತಿಯಿಂದ ನೀರನ್ನು ಶುದ್ಧವಾಗಿಡುವ ಕಪ್ಪೆಮೀನಿನ (ಗ್ಯಾಂಬ್ರಿಯಾ) ಮರಿಗಳನ್ನು ಬಿಟ್ಟು, ಬೆಳೆಸಬಹುದು ಇದರಿಂದ ಡೆಂಗ್ಯೂ ಹರಡುವಿಕೆಯನ್ನೂ ತಡೆಗಟ್ಟಬಹುದು ಈ ಬಗ್ಗೆ ಕ್ರಮ ವಹಿಸಿ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಆರ್.ಎಂ.ದೊಡ್ಡಮನಿ ಮಾತನಾಡಿ, ಜಿಲ್ಲೆಯಲ್ಲಿ 160 ಡೆಂಗ್ಯೂ, 76 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡ ನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ನಿಂಗಪ್ಪ ಘಾಟಿನ್, ಕಲ್ಲಪ್ಪಪುಡಲಕಟ್ಟಿ, ಚನ್ನಮ್ಮ ಶಿವನಗೌಡರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಜಿ.ಕೊರವರ, ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News