ಕಾಲೇಜು, ವಿವಿಗಳು ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಇಟ್ಟುಕೊಳ್ಳುವಂತಿಲ್ಲ: ಹೈಕೋರ್ಟ್ ಆದೇಶ

Update: 2018-11-15 16:43 GMT

ಬೆಂಗಳೂರು, ನ.15: ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಯಾವುದೇ ವ್ಯಕ್ತಿ ಅಥವಾ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದ್ದು, ಈ ಮೂಲಕ ದಾಖಲೆಗಳ ಸಿಗದೆ ಪರಿತಪಿಸುತ್ತಿದ್ದ ವೈದ್ಯರಿಗೆ ನ್ಯಾಯಾಲಯ ದೊಡ್ಡ ನಿರಾಳವನ್ನು ನೀಡಿದೆ.

ಬಳ್ಳಾರಿಯ ಡಾ.ಟಿ.ಕೆ.ರೇಷ್ಮಾ ಎಂಬುವವರು ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದು, ಬಳ್ಳಾರಿಯ ವಿಜಯನಗರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿಗೆ ಸೇರ್ಪಡೆಗೊಳ್ಳುವ ವೇಳೆ ಸಲ್ಲಿಸಲಾಗಿದ್ದ ಮೂಲ ದಾಖಲೆಗಳನ್ನು ಹಿಂತಿರುಗಿಸುವಂತೆ ಸೂಚನೆ ನೀಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು. ಪದವಿ ಪೂರ್ಣಗೊಳಿಸಿದ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ದಾಖಲೆಗಳನ್ನು ಕಾಲೇಜು ತಡೆದಿದೆ. ಆದರೆ, ಯಾವ ಆಧಾರದ ಮೇಲೆ ಮೂಲ ದಾಖಲೆಗಳನ್ನು ತಡೆದಿದೆ ಎಂಬುದನ್ನು ತಿಳಿಯುತ್ತಿಲ್ಲ ಎಂದು ತಿಳಿಸಲಾಗಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಅರ್ಜಿದಾರರಿಗೆ ಹಾಗೂ ನಾಗರಿಕರಿಗೆ ಮುಂದಿನ ಭವಿಷ್ಯಕ್ಕಾಗಿ, ಉದ್ಯೋಗಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಮೂಲ ದಾಖಲೆಗಳು ಅತ್ಯಂತ ಮುಖ್ಯವಾಗಿರುತ್ತದೆ. ದಾಖಲೆಗಳನ್ನು ತಡೆಹಿಡಿಯಲು ಕಾನೂನಿನ ಅಗತ್ಯವಿದೆ. ಆದರೆ, ಅಂತಹ ಕಾನೂನುಗಳು ಯಾವುದನ್ನೂ ಸಂಸ್ಥೆ ತೋರಿಸಿಲ್ಲ ಎಂದು ಹೇಳಿದೆ, ಅಲ್ಲದೆ, ಅರ್ಜಿದಾರರಿಗೆ ಎಲ್ಲ ಮೂಲ ದಾಖಲೆಗಳನ್ನು ಹಿಂತಿರುಗಿಸುವಂತೆ ಕಾಲೇಜು ಸಂಸ್ಥೆಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News