ಕಾವೇರಿ ಪ್ರತಿಮೆ ನಿರ್ಮಾಣದಿಂದ ಪ್ರವಾಸೋದ್ಯಮ ಅಭಿವೃದ್ಧಿ: ಸಚಿವ ಡಿಕೆಶಿ

Update: 2018-11-15 16:52 GMT

ಬೆಂಗಳೂರು, ನ.15: ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜ ಸಾಗರ(ಕೆಆರ್‌ಎಸ್)ದ ಬಳಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದ ಮೊದಲ ಬಜೆಟ್‌ನಲ್ಲಿ ಕೆಆರ್‌ಎಸ್ ಬಳಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಲಾಗಿತ್ತು. ನಮ್ಮಲ್ಲಿರುವ ವನ್ಯಜೀವಿ, ಅರಣ್ಯ ಸಂಪತ್ತು ಎಲ್ಲವನ್ನು ಬಳಸಿಕೊಂಡು ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು ಎಂದರು.

ಕೆಆರ್‌ಎಸ್ ಬಳಿ ಸರಕಾರದ 300 ಎಕರೆ ಭೂಮಿ ಲಭ್ಯವಿದೆ. ಖಾಸಗಿ ಸಹಭಾಗಿತ್ವದಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಪ್ರೇಕ್ಷಣೀಯ ಸ್ಥಳ ಅಭಿವೃದ್ಧಿ ಪಡಿಸಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಜಾಗತಿಕ ಟೆಂಡರ್ ಕರೆಯಲಾಗುವುದು ಎಂದು ಅವರು ಹೇಳಿದರು.

ಗೋಲ್‌ಗುಂಬಝ್, ಹಂಪಿ, ಬೇಲೂರು, ಹಳೇಬೀಡು ಸೇರಿದಂತೆ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳ ಕುರಿತು ಪ್ರವಾಸಿಗರಿಗೆ ಮಾಹಿತಿ ಒದಗಿಸುವ ಸ್ಟ್ರೀಟ್ ಅಲ್ಲಿರಲಿದೆ. ಭದ್ರತೆಯ ದೃಷ್ಟಿಯಿಂದ ಎಲ್ಲರನ್ನೂ ಅಣೆಕಟ್ಟಿನ ಬಳಿ ಬಿಡುವುದಿಲ್ಲ. ಆದುದರಿಂದ, ಪ್ರವಾಸಿಗರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಕೆಆರ್‌ಎಸ್ ಬಳಿ ಕಾವೇರಿ ತಾಯಿ ಪ್ರತಿಮೆ ನಿರ್ಮಿಸಬೇಕೆಂಬ ಪ್ರಾತ್ಯಕ್ಷಿಕೆ ನೀಡಲಾಗಿದೆ. ನಾವು ಕೆಲವು ಸಲಹೆಗಳನ್ನು ನೀಡುತ್ತಿದ್ದು, ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು.

ಕಾವೇರಿ ತಾಯಿಯ ಪ್ರತಿಮೆಯ ಕೆಳಗೆ ನೀರು ಹರಿಯುತ್ತದೆ. ಮಧ್ಯೆ ಗಾಜಿನ ವ್ಯವಸ್ಥೆ ಇರುತ್ತದೆ. ಅಲ್ಲಿಗೆ ತೆರಳಲು ಲಿಫ್ಟ್ ವ್ಯವಸ್ಥೆಯೂ ಇರುತ್ತದೆ. ಪ್ರವಾಸಿಗರು ಅಣೆಕಟ್ಟು, ಸುತ್ತಮುತ್ತಲಿನ ಅರಣ್ಯ ಸಂಪತ್ತು, ನಿರ್ಸಗದ ರಮಣೀಯ ಸ್ಥಳಗಳನ್ನು ಕಣ್ಣು ತುಂಬಿಕೊಳ್ಳಲು ಅವಕಾಶವಿರುತ್ತದೆ ಎಂದು ಅವರು ಹೇಳಿದರು.

ಆ್ಯಂಬಿಡೆಂಟ್ ಕಂಪೆನಿ ಹಗರಣದಲ್ಲಿ ಐಪಿಎಸ್ ಅಧಿಕಾರಿ ಹಾಗೂ ಮಹಿಳೆಯೊಬ್ಬರ ಪಾತ್ರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಗೃಹ ಸಚಿವನೂ ಅಲ್ಲ, ಪೊಲೀಸ್ ಆಯುಕ್ತನೂ ಅಲ್ಲ ಈ ಬಗ್ಗೆ ಪ್ರತಿಕ್ರಿಯಿಸಲು. ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರತಿದಿನ ಪತ್ರಿಕೆಗಳಲ್ಲಿ ಬರುತ್ತಿರುವ ಸುದ್ದಿಗಳ ತಲೆಬರಹವಷ್ಟೇ ನೋಡುತ್ತೇನೆ. ಪೂರ್ಣ ಸುದ್ದಿ ಓದಲು ನನಗೆ ಸಮಯವಿಲ್ಲ. ನನಗೆ ನನ್ನ ಕೆಲಸಗಳೇ ಸಾಕಷ್ಟಿವೆ. ಅದನ್ನು ಮಾಡಿದರೆ ಸಾಕು. ನಾನು ಯಾರ ತಂಟೆಗೂ ಹೋಗುತ್ತಿಲ್ಲ. ಉಪ ಚುನಾವಣೆ ಸಂದರ್ಭದಲ್ಲಿಯೂ ನಾನು ಶ್ರೀರಾಮುಲು ಸೇರಿದಂತೆ ಇನ್ನಿತರರನ್ನು ಅಣ್ಣ, ಅಕ್ಕಾ ಎಂದು ಮಾತನಾಡಿಸಿಕೊಂಡು ಬಂದಿದ್ದೇನೆ ಎಂದರು.

ಜನಾರ್ದನ ರೆಡ್ಡಿಗೆ ಶುಭವಾಗಲಿ

ಮಾಜಿ ಸಚಿವ ಜನಾರ್ದನ ರೆಡ್ಡಿ ದೊಡ್ಡವರು, ದೊಡ್ಡವರ ಬಾಯಲ್ಲಿ ದೊಡ್ಡ ದೊಡ್ಡ ಮಾತುಗಳು ಬರುವುದು ಸಾಮಾನ್ಯ. ಅವರ ಬಗ್ಗೆ ನಾವು ಮಾತನಾಡಲು ಸಾಧ್ಯವೇ. ಆ್ಯಂಬಿಡೆಂಟ್ ಕಂಪೆನಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ರೆಡ್ಡಿ ಅಣ್ಣ ಏನೇ ಕೊಟ್ಟರೂ ನಾವು ಅದನ್ನು ಪ್ರಸಾದ ಎಂದು ಸ್ವೀಕರಿಸುತ್ತೇವೆ. ಅವರಿಗೆ ಶುಭವಾಗಲಿ.

-ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News