ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಮಂಡ್ಯ ಜಿಪಂ ಕಚೇರಿ ಎದುರು ಕೃಷಿ ಕೂಲಿಕಾರರ ಪ್ರತಿಭಟನೆ

Update: 2018-11-15 17:53 GMT

ಮಂಡ್ಯ, ನ.15: ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘದ ಸದಸ್ಯರು ಗುರುವಾರ ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರಿಗೆ ಪೊಲೀಸರು ತಡೆಯೊಡ್ಡಿದರು. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ  ಜಾರಿಯಾಗುತ್ತಿಲ್ಲ. ಕೆಲಸ ಕೇಳಿದವರಿಗೆ ಕೆಲಸ ನೀಡುತ್ತಿಲ್ಲ. ಕೂಲಿಯನ್ನು ಸರಿಯಾಗಿ ಪಾವತಿ ಮಾಡುತ್ತಿಲ್ಲ ಎಂದು ಆರೋಪಸಿದರು.

ಗ್ರಾಮ ಪಂಚಾಯತ್ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಯನ್ನು ಗುತ್ತಿಗೆದಾರರಿಗೆ ಅಡಮಾನವಿಟ್ಟು, ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಭ್ಟಷ್ಟಾಚಾರದಲ್ಲಿ ಮುಳುಗಿದವರು ಐಷಾರಾಮಿ ಜೀವನ ಮಾಡುತ್ತಿದ್ದರೆ, ಕೃಷಿ ಕೂಲಿಕಾರರು ಬೀದಿಪಾಲಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾಳೆಯಿಂದಲೇ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಕೊಡಬೇಕು. ಇಲ್ಲವಾದರೆ ನಿರುದ್ಯೋಗ ಭತ್ಯೆ ನೀಡಬೇಕು. ಗುತ್ತಿಗೆದಾರರಿಗೆ ಕೆಲಸ ಕೊಡುವುದನ್ನು ನಿಲ್ಲಿಸಿ, ಈವರೆಗೆ ಮಾಡಿರುವ ಕೆಲಸದ ಬಗ್ಗೆ ತನಿಖೆಯಾಗಬೇಕು. ಜಿಲ್ಲೆಯಾದ್ಯಂತ ವಿವಿಧ ಸಂಘಗಳ ಸಹಕಾರದೊಂದಿಗೆ ಸಂಜೆ 5 ಗಂಟೆ ನಂತರ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಬೇಕು. ಜಿಪಂ ಸಭೆಯ ನಡಾವಳಿಯಂತೆ ಜಿಲ್ಲೆಯ ವಿವಿಧ ಗ್ರಾಮಗಳ ಸರಕಾರಿ ಭೂಮಿಯಲ್ಲಿ ವಾಸ ಮಾಡುವ ಕೂಲಿ ಕಾರ್ಮಿಕರ ಹೆಸರಿಗೆ ಖಾತೆ ಮಾಡಿ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಕೃಷಿ ಕೂಲಿಕಾರರ ಜೀವನಕ್ಕಾಗಿ ಆರ್‍ಬಿಐ ನಿರ್ದೇಶನದಂತೆ ಬ್ಯಾಂಕ್‍ಗಳು 1 ಲಕ್ಷ ಭದ್ರತಾ ರಹಿತ ಸಾಲ ನೀಡಬೇಕು. ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಿಸಿಕೊಂಡವರಿಗೆ ಹಣ ಬಿಡುಗಡೆ ಮಾಡಬೇಕು. ಉದ್ಯೋಗ ಖಾತ್ರಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರ ಕುಟುಂಬಗಳನ್ನು ಕಟ್ಟಡ ಕಾರ್ಮಿಕರಾಗಿ ನೋಂದಾಯಿಸಬೇಕು ಎಂದು ಅವರು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್,   ಬಿ.ಎಂ.ಶಿವಮಲ್ಲಯ್ಯ, ಅಬ್ದುಲ್ಲಾ, ರೋಣಿತಾ, ಚಂದ್ರು, ಎಚ್.ನಾಗರಾಜು, ಕೆ.ಬಸವರಾಜು, ಬಸವಣ್ಣ, ಚಿಕ್ಕತಾಯಮ್ಮ, ಪ್ರಕಾಶ್, ರಿಜ್ವಾನಾ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಇತರರು ನೇತೃತ್ವವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News