ಬೀರೂರು: ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾದ ಪುರಸಭೆ ವಿಶೇಷ ಸಾಮಾನ್ಯ ಸಭೆ

Update: 2018-11-15 18:00 GMT

ಬೀರೂರು, ನ.15: ಪಟ್ಟಣ ವ್ಯಾಪ್ತಿಯ ಬಡಾವಣೆಯಲ್ಲಿ ವಿವಿಧ ಅನುದಾನದಡಿ ಇ-ಪ್ರೊಕ್ಯೂರ್‍ಮೆಂಟ್ ಹಾಗೂ ಮ್ಯಾನುಯಲ್ ಟೆಂಡರ್ ಮುಖಾಂತರ ಕರೆದಿರುವ ಕಾಮಗಾರಿಗಳಿಗೆ ಟೆಂಡರ್ ಮಂಜೂರಾತಿ ಹಾಗೂ ಆಡಳಿತಾತ್ಮಕ ಮಂಜೂರಾತಿಗಾಗಿ ಪುರಸಭೆ ಅಧ್ಯಕ್ಷೆ ಸವಿತಾ ರಮೇಶ್ ಅಧ್ಯಕ್ಷತೆಯಲ್ಲಿ ಗುರುವಾರ ವಿಶೇಷ ಸಭೆ ನಡೆಯಿತು.

ಬಡಾವಣೆಗಳಲ್ಲಿ ಪೈಪ್‍ಲೈನ್ ಅಳವಡಿಸುವುದು, ರುದ್ರಭೂಮಿಗಳಲ್ಲಿ ರಸ್ತೆ ಅಭಿವೃದ್ದಿ, ಶೌಚಾಲಯ ನಿರ್ಮಾಣ, ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಾಂಪೌಂಡ ನಿರ್ಮಾಣ, ಕಚೇರಿಗೆ ಸಿಸಿ ಟಿವಿ ಅಳವಡಿಕೆ, ಸಮುದಾಯ ಭವನಗಳ ದುರಸ್ಥಿ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಸುಮಾರು 2.22 ಕೋಟಿ ಅನುದಾನವನ್ನು ಉಪಯೋಗಿಸಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.

ಭೆಯ ಆರಂಭಕ್ಕೂ ಮುನ್ನ ಪುರಸಭೆ ಸದಸ್ಯ ಲೋಕೇಶಪ್ಪ ಮಾತನಾಡಿ, ಅಕ್ರಮವಾಗಿ ಅತಿಕ್ರಮಿಸಿರುವ ಪುರಸಭೆ ನಿವೇಶನಗಳ ಬಗ್ಗೆ ಹಲವಾರು ಬಾರಿ ಸದಸ್ಯರು ಮಾಹಿತಿ ನೀಡಿದ್ದರೂ ಹಾಗೂ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದರೂ ಪುರಸಭೆ ಕಣ್ಮುಚ್ಚಿ ಕುಳಿತಿದೆ ಎಂದು ನಾಗರೀಕರು ದೂರುತ್ತಿದ್ದಾರೆ. ಸಂಗೀತ ಶಾಲೆಗೆ ಗುರುತಿಸಲಾಗಿದ್ದ ನಿವೇಶನವನ್ನು ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿಯವರೆ ಆದೇಶಿಸಿದ್ದರೂ ಅಧಿಕಾರಿ ವರ್ಗ ನಿಷ್ಕ್ರಿಯವಾಗಿದೆ, ಅಧ್ಯಕ್ಷರೂ ಸೇರಿದಂತೆ ಸಿಬ್ಬಂದಿ ಈ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. 

ಇದಕ್ಕೆ ಉತ್ತರಿಸಿದ ಪುರಸಭೆ ಅಧ್ಯಕ್ಷೆ ಸವಿತಾ ರಮೇಶ್, ನಾನು ಅಕ್ರಮಗಳ ವಿಷಯವಾಗಿ ಕಾನೂನು ಬದ್ಧ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ದಾಖಲೆಯಿಲ್ಲದ ಮಾತಿನಿಂದ ಯಾವುದೂ ಸಾಭೀತಾಗುವುದಿಲ್ಲ, ದಾಖಲೆಗಳಿದ್ದರೆ ನೀಡಿ ತನಿಖೆಯಿಂದಲೇ ಸತ್ಯ ಹೊರ ಬರಲಿ ಎಂದು ಹೇಳಿದರು. ನಿಮ್ಮ ವಾರ್ಡ್‍ನಲ್ಲಿ ಮೆಸ್ಕಾಂ ಅಳವಡಿಸಿದ ವಿದ್ಯುತ್ ಕಂಬಕ್ಕೆ ಗುತ್ತಿಗೆದಾರನ ಮೂಲಕ ನೀವು ಮಾಡಿಸಿದ ಕೆಲಸ ಎಂದು ಬಿಲ್ ಪಾವತಿಸಲು ಹೇಳಿದ್ದಿರಿ. ಕೆಲಸವನ್ನೇ ಮಾಡದೆ ಗುತ್ತಿಗೆದಾರನಿಗೆ ಬಿಲ್ ಪಾವತಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಗುತ್ತಿಗೆದಾರ ಕೆಲಸ ಮಾಡಿದ್ದರೆ ಸಭೆಗೆ ಕರೆಸಿ ಅವನಿಂದ ಹೇಳಿಕೆ ಕೊಡಿಸಿ ಬಿಲ್ ಪಡೆಯಬೇಕಿತ್ತು. ನಿಮ್ಮ ಕೋರಿಕೆ ಮಾನ್ಯ ಮಾಡದಿರುವುದಕ್ಕೆ ಆರೋಪಿಸುತ್ತಿದ್ದೀರಿ ಎಂದು ಹರಿಹಾಯ್ದರು.

ಮುಖ್ಯಾಧಿಕಾರಿ ಮಂಜಪ್ಪ ಮಾತನಾಡಿ, ನೀವು ಲಿಖಿತವಾಗಿ ನೀಡಿರುವ ದೂರುಗಳಿಗೆ ಲಿಖಿತವಾಗಿ ಉತ್ತರ ನೀಡಲಾಗುವುದು. ನಿವೇಶನ ಅತಿಕ್ರಮಣ ಕುರಿತು ಸದರಿಯವರಿಗೆ ನೋಟಿಸ್ ಜಾರಿ ಮಾಡಿದ್ದು, ಇಂದು ಎರಡನೇ ನೋಟಿಸ್ ಜಾರಿಗೊಳಿಸಲಾಗುವುದು. ಅವರು ಕಟ್ಟಡ ನಿರ್ಮಿಸಿದರೂ ತೆರವು ಮಾಡುವುದು ಖಚಿತ ಎಂದರು. 

ಬೀದಿ ದೀಪಗಳ ಅಳವಡಿಕೆ ಮತ್ತು ಅವುಗಳ ನಿರ್ವಹಣೆ ವಿಷಯವಾಗಿ ಮೂಡಿ ಬಂದ ಚರ್ಚೆಯಲ್ಲಿ ಸರ್ಕಾರದ ನಿರ್ದೇಶನದಂತೆ ಜಿಲ್ಲಾಧ್ಯಂತ ಸರ್ವೆ ನಡೆದು ಪ್ರತಿ ಕಂಬಗಳಿಗೂ ಎಲ್‍ಇಡಿ ಬಲ್ಬ್ ಅಳವಡಿಸುವುದು ಮತ್ತು 10 ವರ್ಷಗಳ ಅವಧಿಗೆ ನಿರ್ವಹಣೆ ಮಾಡುವುದು ಗುತ್ತಿಗೆದಾರನ ಜವಾಬ್ದಾರಿಯಾಗಲಿದ್ದು, ಈ ಕುರಿತಂತೆ ಕಾರ್ಯ ಆದೇಶ ಆಗುವವರೆಗೂ ಸಧ್ಯ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರೇ ಕೆಲಸ ನಿರ್ವಹಿಸಲಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಮಾಹಿತಿ ನೀಡಿದರು. 

ಐಡಿಎಸ್‍ಎಂಟಿ ಯೋಜನೆಯಲ್ಲಿ ಮತ್ತು ವಾಣಿಜ್ಯ ಮಳಿಗೆಗಳಿಂದ ವಸೂಲಾಗಿರುವ ಮೊತ್ತದಲ್ಲಿ ಪುರಸಭೆ ಆವರಣದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲು ಸದಸ್ಯರು ಅಧಿಕಾರಿ ಮತ್ತು ಸಿಬ್ದಂದಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸದಸ್ಯರಾದ ಗೀತಾ ಹೇಮಂತ್, ಬಸವರಾಜು, ರುದ್ರಪ್ಪ, ನಾಗರಾಜು, ಸುದರ್ಶನ್, ವಸಂತಾ ರಮೇಶ್, ಮಾರ್ಗದ ಮಧು, ರವಿಕುಮಾರ್ ಹಾಗೂ ಪುರಸಭೆ ಸಿಬ್ಬಂದಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News