ಮೈತ್ರಿಯೊಂದಿಗೆ ನಗರಸಭೆ ಚುನಾವಣೆ ಎದುರಿಸಲು ಸಿದ್ಧತೆ: ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ

Update: 2018-11-15 18:03 GMT

ಚಿಕ್ಕಮಗಳೂರು, ನ.15: ಮುಂಬರುವ ನಗರಸಭೆ ಚುನಾವಣೆಯನ್ನು ಕಾಂಗ್ರೆಸ್, ಜೆಡಿಎಸ್, ಸಿಪಿಐ ಪಕ್ಷಗಳು ಮೈತ್ರಿಯೊಂದಿಗೆ ಎದುರಿಸಲಿದ್ದು, ನಗರಸಭೆ ಆಡಳಿತದ ಚುಕ್ಕಾಣಿಯನ್ನು ಮೈತ್ರಿ ಪಕ್ಷಗಳ ಆಡಳಿತದ ತೆಕ್ಕೆಗೆ ಪಡೆಯಲು ರಣತಂತ್ರ ರೂಪಿಸಲಾಗುವುದು ಎಂದು ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಹೇಳಿದರು.

ನಗರದಲ್ಲಿ ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ನಿವೇಶನ ರಹಿತರಿಗೆ ಯಾವುದೇ ನಿವೇಶನ ನೀಡಿಲ್ಲ. ವಸತಿ ರಹಿತರಿಗೆ ವಸತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು, ಈವರೆಗೂ ಆಡಳಿತ ನಡೆಸಿದವರು ನಗರಸಭೆಯ ಅನದಾನವನ್ನು ದೋಚಿದ್ದಾರೆ ಎಂದು ದೂರಿದರು. ಕಳೆದ 15 ವರ್ಷಗಳಿಂದ ಚಿಕ್ಕಮಗಳೂರು ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಯಾವುದೇ ಶಾಶ್ವತ ಅಭಿವೃದ್ದಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದ ಅವರು, ಬಸವನಹಳ್ಳಿ ಕೆರೆಯಲ್ಲಿ ವಿವೇಕಾನಂದರ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ. ಪ್ರತಿಮೆ ನಿರ್ಮಾಣಕ್ಕೆ ಹಣ ವಸೂಲಿ ಮಾಡಿರುವ ನಗರಸಭೆ ಸದಸ್ಯರು ಈ ಹಣವನ್ನು ಮನಬಂದಂತೆ ಲೂಟಿ ಮಾಡಿರುವುದೇ ಬಿಜೆಪಿ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಬಿಜೆಪಿಯ ದುರಾಡಳಿತದಿಂದ ನಗರದ ಜನತೆ ಬೇಸತ್ತಿದ್ದಾರೆ. ಬಿಜೆಪಿ ಸದಸ್ಯರು, ಅಧಿಕಾರಿಗಳು ಮುಂಬರುವ ನಗರಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ನಗರದ 35 ವಾರ್ಡ್‍ಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬಹುದಾದ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ನ.30ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದ ಅವರು, ಈಗಾಗಲೇ ಸ್ಪರ್ಧಾ ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಅವರಲ್ಲಿ ವಾರ್ಡ್‍ವಾರು ಸಮರ್ಥರಾಗಿರುವ 2-3 ವ್ಯಕ್ತಿಗಳನ್ನು ಆಯ್ಕೆ ಮಾಡಿ ಸಂಬಂಧಿಸಿದ ವಾರ್ಡ್‍ಗಳ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ. ಈ ಪೈಕಿ ಸೂಕ್ತ ವ್ಯಕ್ತಿಗಳನ್ನು ಕಾಂಗ್ರೆಸ್ ವರಿಷ್ಠರ ಕಮಿಟಿ ಆಯ್ಕೆ ಮಾಡಲಿದೆ. ನಂತರ ಅವರನ್ನೇ ಮೂರು ಪಕ್ಷಗಳ ಬೆಂಬಲದೊಂದಿಗೆ ಕಣಕ್ಕಿಳಿಸಲಾಗುವುದು ಎಂದರು.

ನಗರಸಭಾ ಸದಸ್ಯ ರೂಬಿನ್‍ ಮೊಸೆಸ್ ಮಾತನಾಡಿ, ನಗರಸಭೆ ಆಡಳಿತ ಸಂಪೂರ್ಣ ಹದಗೆಟ್ಟಿದ್ದು, ಒಳಚರಂಡಿ ಕಾಮಗಾರಿಯಲ್ಲಿ ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ. ಅಮೃತ್ ಯೋಜನೆ ಅನುಷ್ಟಾನಗೊಳಿಸಲು ಪೈಪ್‍ಲೈನ್ ಅಳವಡಿಸಲು ನಗರದ ಬಹುತೇಕ ರಸ್ತೆಗಳನ್ನು ಅಗೆದು ಹಾಳು ಮಾಡಲಾಗುತ್ತಿದೆ. ನಗರದಲ್ಲಿ 3 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ನಗರದ ಹೊರವಲಯದ ವಾರ್ಡ್‍ಗಳಲ್ಲಿ 15 ದಿನಕ್ಕೊಮ್ಮೆ ನೀರು ಬಿಡಲು ನಗರಸಭೆ ಆಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಮೃತ್ ಯೋಜನೆಯಡಿಯಲ್ಲಿ ದಿನದ 24 ಗಂಟೆಯೂ ನೀರು ಸರಬರಾಜು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಸಗೀರ್ ಅಹ್ಮದ್ ಅವರ ಅಧಿಕಾರವಧಿಯಲ್ಲಿ ಅನುಷ್ಠಾನಗೊಂಡ ಯಗಚಿ ಯೋಜನೆಯ ನಂತರ ಯಾವುದೇ ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಲು ಬಿಜೆಪಿ ವಿಫಲವಾಗಿದೆ. ಬಿಜೆಪಿ ನಗರಸಭೆಯಲ್ಲಿ ವ್ಯವಸ್ಥಿತ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಗರಸಭೆ ಆಡಳಿತ ಕ್ಷೇತ್ರದ ಶಾಸಕರ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಮುನೀರ್, ಬಿ.ಎಂ.ಸಂದೇಶ್, ಹೊನ್ನೇಶ್, ಯಶೋಧಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News