ಪರ್ಯಾಯ ಶ್ರೀ ಪಲಿಮಾರು ಮಠದಿಂದ ಸಂತ್ರಸ್ತರಿಗೆ ಸಹಾಯ ಹಸ್ತ: 2 ಕೋಟಿ ವಿನಿಯೋಗಿಸಲು ನಿರ್ಧಾರ

Update: 2018-11-15 18:21 GMT

ಮಡಿಕೇರಿ, ನ.15 : ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಪ್ರದೇಶಗಳ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ಉಡುಪಿಯ ಪರ್ಯಾಯ ಶ್ರೀ ಪಲಿಮಾರು ಮಠ ಮುಂದೆ ಬಂದಿದ್ದು, ಸುಮಾರು 2 ಕೋಟಿ ರೂ.ಗಳನ್ನು ವಿನಿಯೋಗಿಸಲು ಮಠ ಸಿದ್ಧವಿದೆ ಎಂದು ಮಠದ ಆಡಳಿತಾಧಿಕಾರಿ ಪ್ರಹ್ಲಾದ ಆಚಾರ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರೀ ಮಳೆಯಿಂದ ಉಂಟಾದ ವಿಕೋಪಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಸಂತ್ರಸ್ತ ಕುಟುಂಬಗಳ ನೆರವಿಗೆ ಬರಲು ಮಠದ ಶ್ರೀ ವಿದ್ಯಾದೀಶ ಶ್ರೀಪಾದಂಗಳವರು ನಿಶ್ಚಯಿಸಿದ್ದಾರೆ ಎಂದರು. ಮಠ 2 ಕೋಟಿ ರೂ. ಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸಿದ್ಧವಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಸೂಚಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಹ್ಲಾದ ಆಚಾರ್ಯ ತಿಳಿಸಿದರು. 

ಮಠದ ಪ್ರತಿನಿಧಿ ರಾಘವೇಂದ್ರ ಆಚಾರ್ಯ ಮಾತನಾಡಿ, ಪ್ರಸಕ್ತ ಸಾಲಿನ ಸೆಪ್ಟೆಂಬರ್ 25 ರಂದು ಪಲಿಮಾರು ಮಠದ ಶ್ರೀವಿದ್ಯಾದೀಶ ಶ್ರೀಪಾದಂಗಳವರು ಕೊಡಗು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದು, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಯಾವುದೇ ಒಂದು ಗ್ರಾಮವನ್ನು ದತ್ತು ಪಡೆದು, ಸರ್ಕಾರದ ಸಹಯೋಗದೊಂದಿಗೆ ಔಷಧಾಲಯ, ಪಶು ಚಿಕಿತ್ಸಾ ಕೇಂದ್ರ, ಸಮುದಾಯ ಭವನ, ಪ್ರಾರ್ಥನಾ ಮಂದಿರ, ಶಾಲೆ ನಿರ್ಮಾಣ ಹೀಗೆ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮಠ ಆಸಕ್ತವಾಗಿರುವುದನ್ನು ತಿಳಸಲಾಗಿತ್ತು. ಅದರಂತೆ ಮಠದಿಂದ ಜಿಲ್ಲೆಗೆ ಭೇಟಿ ನೀಡಿರುವ ತಮ್ಮ ತಂಡ ಅದಾಗಲೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ನೆರವು ನೀಡುವುದಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ್ದೇವೆ. ಇದಕ್ಕೆ ಪೂರಕ ಸ್ಪಂದನ ನೀಡಿರುವ ಜಿಲ್ಲಾಧಿಕಾರಿಗಳು, ಸರ್ಕಾರದೊಂದಿಗೆ ಚರ್ಚಿಸಿ ನೆರವನ್ನು ಎಲ್ಲಿಗೆ ವಿನಿಯೋಗಿಸಬಹುದು ಎನ್ನುವ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶ್ರೀಪಲಿಮಾರು ಮಠದ ಸೇವಾ ಕಾರ್ಯಗಳಿಗೆ ಕೈಜೋಡಿಸಲಿರುವ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಮಠದ ನೆರವನ್ನು ವಿನಿಯೋಗಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‍ರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.

ಕರ್ಣಂಗೇರಿಗೆ ಭೇಟಿ
ಸಂತ್ರಸ್ತರಿಗೆ ಸೂಕ್ತ ನೆಲೆಯೊದಗಿಸುವ ನಿಟ್ಟಿನಲ್ಲಿ ಕರ್ಣಂಗೇರಿಯಲ್ಲಿ ಜಿಲ್ಲಾಡಳಿತದಿಂದ ಸಜ್ಜುಗೊಳಿಸಿರುವ ನವಗ್ರಾಮ ಪುನರ್ವಸತಿ ಯೋಜನಾ ಪ್ರದೇಶಕ್ಕೆ ಶ್ರೀ ಪಲಿಮಾರು ಮಠದ ಪ್ರತಿನಿಧಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಮುಂದೆ ಮಠ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಚರ್ಚಿಸಿರುವುದಾಗಿ ಕೇಶವ ಪ್ರಸಾದ್ ಮುಳಿಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಠದ ಪರವಾಗಿ ಸದಸ್ಯ ರಮೇಶ್ ರಾವ್ ಹಾಗೂ  ಮಡಿಕೇರಿಯ ರವೀಂದ್ರ ರೈ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News