ಟ್ರಂಪ್ ವಿರುದ್ಧ ಸಿಎನ್‌ಎನ್ ಹೋರಾಟಕ್ಕೆ ಪ್ರತಿಷ್ಠಿತ ಸುದ್ದಿ ಸಂಸ್ಥೆಗಳ ಬೆಂಬಲ

Update: 2018-11-16 15:56 GMT

ವಾಶಿಂಗ್ಟನ್, ನ. 16: ತನ್ನ ವರದಿಗಾರ ಜಿಮ್ ಅಕೋಸ್ಟಗೆ ಶ್ವೇತಭವನಕ್ಕೆ ಪ್ರವೇಶ ನಿರಾಕರಿಸಿರುವುದನ್ನು ಪ್ರಶ್ನಿಸಿ ಅಮೆರಿಕದ ಸುದ್ದಿವಾಹಿನಿ ಸಿಎನ್‌ಎನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಶ್ವೇತಭವನದ ಹಲವಾರು ಉನ್ನತ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಹೂಡಿರುವ ಮೊಕದ್ದಮೆಗೆ ಅಮೆರಿಕದ ಇತರ ಹಲವಾರು ಸುದ್ದಿ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

ಸಿಎನ್‌ಎನ್ ಮತ್ತು ಜಿಮ್ ಅಕೋಸ್ಟಗೆ ಬೆಂಬಲ ವ್ಯಕ್ತಪಡಿಸಿ ಅಸೋಸಿಯೇಟೆಡ್ ಪ್ರೆಸ್, ಯುಎಸ್‌ಎ ಟುಡೆ, ವಾಶಿಂಗ್ಟನ್ ಪೋಸ್ಟ್, ಫಾಕ್ಸ್ ನ್ಯೂಸ್ ಮತ್ತು ಪೊಲಿಟಿಕೊ ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳು ನ್ಯಾಯಾಲಯದಲ್ಲಿ ಹೇಳಿಕೆಗಳನ್ನು ನೀಡಲಿವೆ.

ಬೆಂಬಲಿಗರ ಪಟ್ಟಿಯಲ್ಲಿ ‘ಫಾಕ್ಸ್ ನ್ಯೂಸ್’ ಇರುವುದು ವಿಶೇಷವಾಗಿದೆ. ಯಾಕೆಂದರೆ, ಈ ಟಿವಿ ಚಾನೆಲ್‌ಗಳು ಎದುರಾಳಿಗಳಾಗಿವೆ.

‘ಫಾಕ್ಸ್ ನ್ಯೂಸ್’ ಬುಧವಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಶ್ವೇತಭವನದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ನೀಡುವ ‘ಸೀಕ್ರೆಟ್ ಸರ್ವಿಸ್’ ಪಾಸ್‌ಗಳನ್ನು ಆಯುಧವಾಗಿ ಎಂದಿಗೂ ಬಳಸಬಾರದು ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಿಯಾನ್ ಹ್ಯಾನಿಟಿ ಮುಂತಾದ ಫಾಕ್ಸ್ ನ್ಯೂಸ್‌ನ ಸುದ್ದಿ ವಿಶ್ಲೇಷಕರು ಅಕೋಸ್ಟ ಮತ್ತು ಸಿಎನ್‌ಎನ್‌ನ್ನು ಸಾರ್ವಜನಿಕವಾಗಿ ಟೀಕಿಸಿದ ಗಂಟೆಗಳ ಬಳಿಕ, ಸ್ವತಃ ಫಾಕ್ಸ್ ನ್ಯೂಸ್ ಅಧ್ಯಕ್ಷ ಜೇ ವ್ಯಾಲೇಸ್ ಈ ಹೇಳಿಕೆ ನೀಡಿದ್ದಾರೆ.

ಸಿಎನ್‌ಎನ್ ಮತ್ತು ಫಾಕ್ಸ್ ನ್ಯೂಸ್ ದಶಕಗಳಿಂದ ಎದುರಾಳಿಗಳಾಗಿದ್ದರೂ, ಈ ಪ್ರಕರಣ ಪತ್ರಿಕಾ ಸ್ವಾತಂತ್ರಕ್ಕೆ ಸಂಬಂಧಿಸಿದ್ದಾಗಿರುವುದರಿಂದ, ಸಿಎನ್‌ಎನ್‌ಗೆ ಬೆಂಬಲ ನೀಡಿರುವುದಾಗಿ ವ್ಯಾಲೇಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News