ರೊಹಿಂಗ್ಯಾ ಮುಸ್ಲಿಮ್ ನೀತಿ: ಮ್ಯಾನ್ಮಾರ್‌ಗೆ ಚೀನಾ ಬೆಂಬಲ

Update: 2018-11-16 16:43 GMT

ಬೀಜಿಂಗ್, ನ. 16: ಆಂತರಿಕ ಸ್ಥಿರತೆಯನ್ನು ಕಾಪಾಡುವ ಹಾಗೂ ರೊಹಿಂಗ್ಯಾ ಸಮಸ್ಯೆಯನ್ನು ಬಗೆಹರಿಸುವ ಮ್ಯಾನ್ಮಾರ್ ಸರಕಾರದ ಪ್ರಯತ್ನಗಳನ್ನು ಚೀನಾ ಬೆಂಬಲಿಸುತ್ತದೆ ಎಂಬ ಭರವಸೆಯನ್ನು ಚೀನಾ ಪ್ರಧಾನಿ ಲಿ ಕೆಕಿಯಾಂಗ್ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿಗೆ ಗುರುವಾರ ನೀಡಿದ್ದಾರೆ.

ರೊಹಿಂಗ್ಯಾ ಸಮಸ್ಯೆಯನ್ನು ನಿಭಾಯಿಸಿದ ರೀತಿಗಾಗಿ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಮ್ಯಾನ್ಮಾರ್ ನಾಯಕಿಯನ್ನು ತರಾಟೆಗೆ ತೆಗೆದುಕೊಂಡ ಬಳಿಕ, ಚೀನಾ ಉಪಚರಿಸಿತು.

ರೊಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್ ನಡೆಸಿಕೊಳ್ಳುತ್ತಿರುವ ರೀತಿಗೆ ಅಮೆರಿಕದ ತೀವ್ರ ಅಸಮಾಧಾನವನ್ನು ಪೆನ್ಸ್ ಗುರುವಾರ ವ್ಯಕ್ತಪಡಿಸಿದ್ದರು. ಮ್ಯಾನ್ಮಾರ್ ಸೇನೆಯು ಯಾವುದೇ ಕಾರಣವಿಲ್ಲದೆ ರೊಹಿಂಗ್ಯಾ ಮುಸ್ಲಿಮರನ್ನು ಹಿಂಸಿಸುತ್ತಿದೆ ಎಂದು ಅವರು ಸಿಂಗಾಪುರದಲ್ಲಿ ನಡೆದ ಆಗ್ನೇಯ ಏಶ್ಯ ಶೃಂಗಸಭೆಯ ನೇಪಥ್ಯದಲ್ಲಿ ಸೂ ಕಿಗೆ ಹೇಳಿದ್ದರು.

ಬಳಿಕ, ಸೂ ಕಿಯನ್ನು ಭೇಟಿಯಾದ ಲೀ, ಮ್ಯಾನ್ಮಾರ್ ಜೊತೆಗಿನ ಸ್ನೇಹಕ್ಕೆ ಚೀನಾ ಹೆಚ್ಚಿನ ಮಹತ್ವ ನೀಡುತ್ತದೆ ಹಾಗೂ ಈ ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗಲು ಉತ್ಸುಕವಾಗಿದೆ ಎಂದು ಹೇಳಿದರು.

ಈ ವಿಷಯವನ್ನು ಚೀನಾದ ವಿದೇಶ ಸಚಿವಾಲಯ ಗುರುವಾರ ರಾತ್ರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor