ನೆಹರೂ ಮತ್ತು ಪಟೇಲ್-ವಾಸ್ತವವೇನು?

Update: 2018-11-17 08:02 GMT

ದೇಶದ ಮಹಾ ನಾಯಕರಾದ ಪಂಡಿತ್ ನೆಹರೂ ಮತ್ತು ಸರ್ದಾರ್ ಪಟೇಲ್ ಅವರ ಸಂಬಂಧ, ಹೋಲಿಕೆಗಳು ನಮ್ಮಲ್ಲಿ ನಿರಂತರ ಚರ್ಚಾ ವಸ್ತುಗಳು. ರಾಜಕೀಯ ಸಿದ್ಧಾಂತವಾದಿಗಳಿಗೆ ಇವು ದ್ರವ್ಯಗಳು. ಜನರಿಗೆ ಗೊಂದಲಗಳು-ಎಲ್ಲ ಇದ್ದದ್ದೇ.

‘ವಾರ್ತಾ ಭಾರತಿ’ಯಲ್ಲಿ ಮೊನ್ನೆ ನೆಹರೂ ಜಯಂತಿ ದಿನದಂದು (ನವೆಂಬರ್ 14) ಪಟೇಲ್, ನೆಹರೂ ಕುರಿತು ಬಂದ ಲೇಖನಗಳನ್ನು ಓದಿ ವಿಚಿತ್ರವೆನಿಸಿತು. ನೆಹರೂ ಸಕಲ ಸದ್ಗುಣಗಳ ಖನಿ, ಪಟೇಲ್-ಹೆಚ್ಚು ಕಡಿಮೆ ‘ದೇಶ ವಿರೋಧಿ, ಆರೆಸ್ಸೆಸ್ ಪರ, ಅಂಬೇಡ್ಕರ್ ವಿರೋಧಿ, ದೇಶ ವಿಭಜನಕಾರ’ ಎಂಬ ತಾತ್ಪರ್ಯ ಅಲ್ಲಿತ್ತು. ಹಲವು ವರ್ಷಗಳಿಂದ ಈ ಬಗೆಯ ಕಥನಗಳು ನಡೆಯುತ್ತಿವೆ.

ಈ ಸಂದರ್ಭದಲ್ಲಿ ಗಮನಿಸಬೇಕಾದ ಕೆಲವು ವಾಸ್ತವಾಂಶಗಳು ಹೀಗಿವೆ.
1. ಭಾರತದ ಪ್ರಧಾನಿ ಸ್ಥಾನಕ್ಕೆ ದೇಶದ ಕಾಂಗ್ರೆಸ್‌ನ ಆಯ್ಕೆ ಪಟೇಲ್ ಆಗಿದ್ದರು. ಕಾಂಗ್ರೆಸ್‌ನ ಹದಿನಾರು ರಾಜ್ಯ ಸಮಿತಿಗಳಲ್ಲಿ ಹನ್ನೆರಡು ಸಭೆಗಳು ಪಟೇಲ್ ಪರ. ಕೇಂದ್ರ ಸಮಿತಿಯಲ್ಲಿ ಅವರಿಗೇ ದೊಡ್ಡ ಬಹುಮತವಿತ್ತು. ಅದನ್ನೆಲ್ಲ ಮೀರಿ ಮಹಾತ್ಮಾ ಗಾಂಧೀಜಿ ಮನವೊಲಿಕೆ ಮತ್ತು ಒತ್ತಡದ ಮೂಲಕ ನೆಹರೂರನ್ನು ನೇಮಿಸಿದರು. ಕಾರಣ ಎರಡು-ಅವರ ದೃಷ್ಟಿಯಲ್ಲಿ ನೆಹರೂ ಹೆಚ್ಚು ಯೋಗ್ಯರು, ಅರ್ಹರು ಮತ್ತು ಪಟೇಲರನ್ನು ಆರಿಸಿದರೆ ನೆಹರೂರ ಬಂಡಾಯ ಬಹುಶಃ ಖಂಡಿತವೇ ಆಗಿತ್ತು. ಪಟೇಲರು ಸದ್ದಿಲ್ಲದೆ ಗಾಂಧೀಜಿ ಅಪ್ಪಣೆ ಒಪ್ಪಿದರು. ದೇಶದ ಐಕ್ಯಕ್ಕಾಗಿ ದುಡಿದರು.

2. ಲೇಖನಗಳಲ್ಲಿ ಹೇಳಿದ್ದ ‘ದುರ್ಗುಣಗಳೆಲ್ಲ’ ಪಟೇಲ್‌ರಲ್ಲಿ ಇದ್ದುದಾದರೆ ಅವರನ್ನು ಉಪ ಪ್ರಧಾನಿ ಮಾಡಿದ್ದು, ಎಂಟು ವರ್ಷ ಉಳಿಸಿಕೊಂಡಿದ್ದು ಗಾಂಧಿ-ನೆಹರೂ ಅವರ ತಪ್ಪಲ್ಲವೇ?-ಅಲ್ಲ ಅಪರಾಧವೇ ಅಲ್ಲವೇ?

3. ಬಹುಮತಕ್ಕಾಗಿ ಮತ್ತು ತನ್ನಿಂದ ಹದಿನಾಲ್ಕು ವರ್ಷ ಹಿರಿಯ ಎಂಬುದಕ್ಕಾಗಿಯಾದರೂ ನೆಹರೂ ಪಟೇಲ್‌ರನ್ನು ಪ್ರಧಾನಿಯಾಗಿ ಒಪ್ಪಬಹುದಾಗಿತ್ತು. ಆಗ ಅವರು ಇನ್ನೂ ದೊಡ್ಡವರಾಗುತ್ತಿದ್ದರು.

4. ಆರೆಸ್ಸೆಸನ್ನು ಪಟೇಲ್ ಮತ್ತು ನೆಹರೂ ಇಬ್ಬರೂ ವಿಭಿನ್ನ ಸಂದರ್ಭಗಳಿಗೆ ಅನುಸರಿಸಿ ಟೀಕಿಸಿದ್ದಾರೆ, ಪ್ರಶಂಸಿಸಿದ್ದಾರೆ.

5. ಡಾ. ಅಂಬೇಡ್ಕರರು ರಾಜೀನಾಮೆ ಕೊಟ್ಟಿದ್ದು ನೆಹರೂ ನೀತಿಗಳ ವಿರುದ್ಧ ಹೊರತು ಪಟೇಲರ ವಿರುದ್ಧ ಅಲ್ಲ. ನೆಹರೂರವರು ಹೊಂದಾಣಿಕೆ ಮಾಡಿಕೊಂಡು ಅವರನ್ನು ಉಳಿಸಿಕೊಳ್ಳಲಿಲ್ಲ. ಇದರಿಂದಾಗಿ ನೆಹರೂರನ್ನು ‘ದಲಿತ ವಿರೋಧಿ’ ಎಂದರೆ ಸರಿಯಾದೀತೇ?

6. ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಅಂಬೇಡ್ಕರ್‌ರು, -ಆರೋಪಿ ವೀರ ಸಾವರ್ಕರರು ಅಪರಾಧಿಯಲ್ಲ ಎಂಬ ನಿಲುವು ಹೊಂದಿದವರು. ಮಾತ್ರವಲ್ಲ ‘‘ಓರ್ವ ವ್ಯಕ್ತಿಯ ಹಠದಿಂದ’’ ಅವರನ್ನು ಗುರಿ ಮಾಡಲಾಗುತ್ತಿದೆ ಎಂದದ್ದೂ ದಾಖಲಾಗಿದೆ. ಇದರಿಂದ ಅಂಬೇಡ್ಕರರು ಕೋಮುವಾದಿ ಹಿಂದೂ ಮಹಾಸಭಾ ಪರ ಎಂದೆಲ್ಲ ಹೇಳಲಾದೀತೇ?

7. ಚೀನಾ ಆಕ್ರಮಣ ನೆಹರೂ ಯುಗದ ದೊಡ್ಡ ದುರಂತ. ಇದು ಪ್ರಮಾದ ಮತ್ತು ಅಲಕ್ಷ್ಯದ ಫಲವೇ ಹೊರತು ನೆಹರೂ ‘ಮಾಡಿದ’ ಘಟನೆ ಹೇಗಲ್ಲವೋ, ಹಾಗೆಯೇ ಗಾಂಧೀಜಿ ಹತ್ಯೆ ‘ಪ್ರಮಾದ ವೈಫಲ್ಯ’, ಅದರಲ್ಲೂ ರಕ್ಷಣೆ ನಿರಾಕರಿಸಿದ, ಮುಕ್ತತೆಯಲ್ಲಿ ನಂಬಿಕೆ ಇರಿಸಿದ್ದ ಗಾಂಧೀಜಿ ವರ್ತನೆಯೂ ಇತ್ತು.

8. ದೇಶದಲ್ಲೆಲ್ಲಾ ನೆಹರೂ-ಗಾಂಧಿ ಪರಂಪರೆಗೆ ಬಹಳಷ್ಟು ಮತ್ತು ಅಳತೆ ಮೀರಿದ ಸ್ಮಾರಕ ಗೌರವಗಳು ಸಂದಿವೆ. ಹೀಗಿರುವಾಗ ಒಂದು ಪ್ರತಿಮೆಗೆ ಇಷ್ಟೊಂದು ಆಕ್ಷೇಪ, ಅಸಹನೆಗಳು ಸರಿಯಲ್ಲ. ‘‘ಪ್ರತಿಮೆಗಳೇ ಬೇಡ, ರಾಜಕಾರಣಿಗಳ ಸ್ಮಾರಕಗಳು ಅಪ್ರಸ್ತುತ’’ ಎಂದು ವಾದಿಸುವುದಾದರೆ ಅದು ಪ್ರತ್ಯೇಕ ವಿಚಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News