ಕಾಶ್ಮೀರ: ಯುವಕನನ್ನು ಅಪಹರಿಸಿ ಹತ್ಯೆಗೈದ ಉಗ್ರರು

Update: 2018-11-18 07:31 GMT

ಶ್ರೀನಗರ, ನ.18: ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಕಾಶ್ಮೀರದ ಯುವಕನನ್ನು ಅಪಹರಿಸಿದ್ದ ಭಯೋತ್ಪಾದಕರು ಬಳಿಕ ಆತನನ್ನು ಹತ್ಯೆಗೈದಿರುವ ಘಟನೆ ನಡೆದಿದೆ.

ಉಗ್ರರಿಂದ ಹತ್ಯೆಗೊಳಗಾದ ಯುವಕನನ್ನು ಸುಹೈಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಈತನನ್ನು ದಕ್ಷಿಣ ಕಾಶ್ಮೀರ ಜಿಲ್ಲೆಯ ಹಳ್ಳಿಯೊಂದರಿಂದ ಅಪಹರಿಸಲಾಗಿತ್ತು.

ಶೋಪಿಯಾನ್‌ನಲ್ಲಿ 19ರ ಹರೆಯದ ಯುವಕನ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾದ ಮರುದಿನವೇ ಈ ಅಪಹರಣ ನಡೆದಿತ್ತು. ಶನಿವಾರದಂದು ಜಿಲ್ಲೆಯ ವಿವಿಧ ಹಳ್ಳಿಯ ಐದು ಮಂದಿಯನ್ನು ಭಯೋತ್ಪಾದಕರು ಅಪಹರಿಸಿದ್ದರು. ಈ ಪೈಕಿ ಇಬ್ಬರನ್ನು ಬಿಡುಗಡೆಗೊಳಿಸಿದ್ದರು. ಉಳಿದವರು ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರದಂದು 17ರ ಹರೆಯದ ಶಾಲಾ ಬಾಲಕನನ್ನು ಭದ್ರತಾ ಸಿಬ್ಬಂದಿಗೆ ನೆರವು ನೀಡಿದ ಶಂಕೆಯ ಮೇರೆಗೆ ಉಗ್ರರು ಹತ್ಯೆಗೈದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಶಾಲಾ ಬಾಲಕನ ಹತ್ಯೆಗೈದ ವಿಡಿಯೋ ವೈರಲ್ ಆಗಿತ್ತು. ಈ ಘಟನೆಯನ್ನು ಜಾಲತಾಣಿಗರು ಹಾಗೂ ರಾಜಕೀಯ ಪಕ್ಷಗಳ ನಾಯಕರು ಖಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News