ಆರ್‌ಬಿಐನ 9 ಲಕ್ಷ ಕೋಟಿ ರೂ. ಮೀಸಲು ನಿಧಿಯ ಮೇಲೆ ಕೇಂದ್ರ ಸರಕಾರದ ಕಣ್ಣು: ಪಿ.ಚಿದಂಬರಂ ಆರೋಪ

Update: 2018-11-18 14:12 GMT

ಹೊಸದಿಲ್ಲಿ, ನ.18: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ)ದಲ್ಲಿರುವ 9 ಲಕ್ಷ ಕೋಟಿ ರೂಪಾಯಿ ಮೀಸಲು ನಿಧಿಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರಕಾರ ಈ ಹಣದ ಮೇಲೆ ನಿಯಂತ್ರಣ ಪಡೆಯಲು ಬ್ಯಾಂಕನ್ನು ‘ವಶಕ್ಕೆ ’ ಪಡೆಯಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

 ಸೋಮವಾರ(ನ.19ರಂದು) ನಡೆಯಲಿರುವ ಆರ್‌ಬಿಐ ಆಡಳಿತ ಮಂಡಳಿ ಸಭೆಯಲ್ಲಿ ಸರಕಾರ ಮತ್ತು ಆರ್‌ಬಿಐ ಮಧ್ಯೆ ಘರ್ಷಣೆ ನಡೆಯುವ ಸಾಧ್ಯತೆಯಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ. ಆರ್‌ಬಿಐ ಮೀಸಲು ನಿಧಿಯ ಮೇಲೆ ಕಣ್ಣಿಟ್ಟಿರುವ ಸರಕಾರ ಅದನ್ನು ವಶಕ್ಕೆ ಪಡೆಯಲು ನಿರ್ಧರಿಸಿದೆ. ತಥಾಕಥಿತ ಭಿನ್ನಾಭಿಪ್ರಾಯಗಳು ಕೇವಲ ನಾಟಕವಷ್ಟೇ. ನವೆಂಬರ್ 19 ಆರ್‌ಬಿಐ ಸ್ವಾಯತ್ತತೆ ಹಾಗೂ ಭಾರತದ ಅರ್ಥವ್ಯವಸ್ಥೆಯ ಹಿನ್ನೆಲೆಯಲ್ಲಿ ಮಹತ್ವದ ದಿನವಾಗಿರಲಿದೆ ಎಂದವರು ಟ್ವೀಟ್ ಮಾಡಿದ್ದಾರೆ.

ಆರ್‌ಬಿಐ ಬಳಿ ಇರುವ 9.59 ಲಕ್ಷ ಕೋಟಿ ಮೀಸಲು ಬಂಡವಾಳದ ಮೂರನೇ ಒಂದು ಭಾಗವನ್ನು ತನಗೆ ವರ್ಗಾಯಿಸಬೇಕೆಂದು ಸರಕಾರ ಬಯಸುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದನ್ನು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಸುಭಾಷ್‌ಚಂದ್ರ ಗಾರ್ಗ್ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News