ರಾಜಿ ಸಂಧಾನಕ್ಕೆ ಮುಂದಾಗಿರುವ ಎನ್‌ಸಿಎಂ ಅಧ್ಯಕ್ಷ: ವಿಶಾಲ ಹೃದಯಿಗಳಾಗಲು ಮುಸ್ಲಿಮರಿಗೆ ಮನವಿ

Update: 2018-11-18 14:33 GMT

ಹೊಸದಿಲ್ಲಿ,ನ.18: ಅಯೋಧ್ಯೆ ವಿವಾದ ಬಗೆಹರಿಸಲು ಸಂಧಾನ ಪ್ರಯತ್ನಗಳಿಗೆ ಒತ್ತು ನೀಡಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಗಯೂರುಲ್ ಹಸನ್ ರಿಝ್ವಿ ಅವರು,ನ್ಯಾಯಾಲಯದ ಹೊರಗೆ ಈ ವಿವಾದನ್ನು ಬಗೆಹರಿಸಲು ಎಲ್ಲ ಪಾಲುದಾರರೊಂದಿಗೆ ತಾನು ಮಾತುಕತೆಗಳನ್ನು ನಡೆಸುವುದಾಗಿ ಹೇಳಿದ್ದಾರೆ.

ಆಯೋಧ್ಯೆಯು ಹಿಂದುಗಳ ಶ್ರದ್ಧೆಯ ವಿಷಯವಾಗಿರುವುದರಿಂದ ವಿಶಾಲ ಹೃದಯಿಗಳಾಗುವಂತೆ ಅವರು ಮುಸ್ಲಿಮರಿಗೆ ಮನವಿಯನ್ನೂ ಮಾಡಿಕೊಂಡಿದ್ದಾರೆ.

ಮುಸ್ಲಿಮರು ಅಯೋಧ್ಯೆ ವಿವಾದವನ್ನು ಬಗೆಹರಿಸಲು ಒಪ್ಪಿಕೊಂಡರೆ ಕಾಶಿ ಮತ್ತು ಮಥುರಾದಂತಹ ಸ್ಥಳಗಳಲ್ಲಿಯ ಮಸೀದಿಗಳ ಕುರಿತು ವಿವಾದಗಳು ಇರುವುದಿಲ್ಲವೆಂಬ ಭರವಸೆಯನ್ನು ಅವರಿಗಾಗಿ ಪಡೆದುಕೊಳ್ಳಲು ತಾನು ಪ್ರಯತ್ನಿಸುವುದಾಗಿ ರಿಝ್ವಿ ಹೇಳಿದ್ದಾರೆ.

ರವಿವಾರ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು,ಶಾಂತಿಯುತ ಸಂಧಾನಕ್ಕಾಗಿ ಯತ್ನಿಸಲು ನ.14ರಂದು ನಡೆದಿದ್ದ ಆಯೋಗ ಮಾಸಿಕ ಸಭೆಯು ತನಗೆ ಅಧಿಕಾರ ನೀಡಿದೆ ಎಂದು ತಿಳಿಸಿದರು.

 ನ್ಯಾಯಾಲಯದ ತೀರ್ಪು ಒಂದು ಪಕ್ಷದ ಪರವಾಗಿದ್ದರೆ ಇನ್ನೊಂದು ಪಕ್ಷದ ವಿರುದ್ಧವಾಗಿರುತ್ತದೆ ಎಂದು ತಾನು ಭಾವಿಸಿದ್ದೇನೆ. ಹೀಗಾಗಿ ನ್ಯಾಯಾಲಯದ ಹೊರಗೆ ವಿವಾದವನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂದ ಅವರು, ನ್ಯಾಯಾಲಯದ ಹೊರಗೆ ಗೌರವಯುತವಾಗಿ ಪರಿಹಾರವನ್ನು ಕಂಡುಕೊಳ್ಳುವುದು ಸಾಧ್ಯವಾದರೆ ಎರಡೂ ಸಮುದಾಯಗಳಿಗೆ ಸಮಾಧಾನವಾಗುತ್ತದೆ ಮತ್ತು ಈಗಾಗಲೇ ಸೃಷ್ಟಿಯಾಗಿರುವ ಒಡಕನ್ನು ಮುಚ್ಚಬಹುದಾಗಿದೆ ಎಂದರು.

ತಾನು ಶೀಘ್ರವೇ ವಿಹಿಂಪ ಕಾರ್ಯಾಧ್ಯಕ್ಷ ಅಲೋಕ ಕುಮಾರ್ ಮತ್ತು ಲಕ್ನೋದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರು,ಸುನ್ನಿ ವಕ್ಫ್ ಮಂಡಳಿಯ ಪದಾಧಿಕಾರಿಗಳು ಮತ್ತು ಇಸ್ಲಾಮಿಕ್ ವಿದ್ವಾಂಸರನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಚರ್ಚಿಸುವುದಾಗಿ ರಿಝ್ವಿ ತಿಳಿಸಿದರು.

ರಾಮ ಮಂದಿರವು ಹಿಂದುಗಳಿಗೆ ಶ್ರದ್ಧೆಯ ವಿಷಯವಾಗಿರುವುದರಿಂದ ಅದನ್ನು ಹಿಂದುಗಳಿಗೆ ಒಪ್ಪಿಸುವ ಮತ್ತು ಭವಿಷ್ಯದಲ್ಲಿ ಕಾಶಿ,ಮಥುರಾ ಮತ್ತು ಇತರ ಸ್ಥಳಗಳಲ್ಲಿಯ ಮಸೀದಿಗಳ ಕುರಿತು ವಿವಾದಗಳು ಸೃಷ್ಟಿಯಾಗದಂತಾಗಲು ಸಾಧ್ಯಾಸಾಧ್ಯತೆಗಳನ್ನು ಮಾತುಕತೆಗಳಲ್ಲಿ ಕಂಡುಕೊಳ್ಳಬಹುದಾಗಿದೆ ಎಂದ ಅವರು,ಇಂತಹ ಭರವಸೆಯು ದೊರೆತರೆ ಅದೊಂದು ಮಹತ್ವದ ಮೈಲಿಗಲ್ಲಾಗಲಿದೆ ಮತ್ತು ಉಭಯ ಸಮುದಾಯಗಳ ನಡುವೆ ಒಪ್ಪಂದಕ್ಕೆ ಬೃಹತ್ ಆಧಾರ ಸ್ತಂಭವಾಗಲಿದೆ ಎನ್ನುವುದು ತನ್ನ ನಂಬಿಕೆಯಾಗಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಈ ವಿಷಯದಲ್ಲಿ ಮುಸ್ಲಿಮರು ವಿಶಾಲ ಹೃದಯಿಗಳಾಗುವಂತೆ ಮನವಿ ಮಾಡಿಕೊಳ್ಳಲು ತಾನು ಬಯಸುತ್ತೇನೆ. ಯಾರಾದರೊಬ್ಬರು ಒಂದು ಹೆಜ್ಜೆಯನ್ನು ಮುಂದಿರಿಸಬೇಕಿದೆ. ಮಕ್ಕಾ ಮತ್ತು ಮದೀನಾಗಳು ಮುಸ್ಲಿಮರಿಗೆ ಮಹತ್ವದ್ದಾಗಿರುವಂತೆ ಆಯೋಧ್ಯೆಯು ಹಿಂದುಗಳಿಗೆ ಮಹತ್ವದ್ದಾಗಿದೆ. ಈ ಅರ್ಥದಲ್ಲಿ ವಿವಾದವನ್ನು ನೋಡಬೇಕಾಗಿದೆ ಎಂದ ಅವರು, ಹಿಂದು-ಮುಸ್ಲಿಂ ಏಕತೆಯ ಆಧಾರದಲ್ಲಿ ರಾಮ ಮಂದಿರವು ನಿರ್ಮಾಣಗೊಂಡರೆ ಅದು ದೇಶದ ರಾಜಕೀಯಕ್ಕೆ ಮಾತ್ರವಲ್ಲ, ಅಭಿವೃದ್ಧಿಗೂ ಒಳ್ಳೆಯದು ಎಂದರು. ಸಂಧಾನ ಪ್ರಯತ್ನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ನೆರವನ್ನು ಕೋರುತ್ತೀರಾ ಎಂಬ ಪ್ರಶ್ನೆಗೆ,ಮಾತುಕತೆಗಳು ಧನಾತ್ಮಕ ನಿಟ್ಟಿನಲ್ಲಿ ಮತ್ತು ದೃಢವಾದ ಪರಿಹಾರದ ನಿಟ್ಟಿನಲ್ಲಿ ಮುಂದುವರಿದರೆ ಆಯೋಗವು ಯಾರೊಂದಿಗೆ ಮಾತನಾಡಬೇಕೋ ಅವರೊಂದಿಗೆ ಮಾತನಾಡುತ್ತದೆ ಎಂದು ರಿಝ್ವಿ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News