ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿ ಬಂಧನ

Update: 2018-11-18 15:47 GMT

ಕಲಬುರಗಿ, ನ.18: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ ರೌಡಿ ಶೀಟರ್ ಪ್ರದೀಪ್ ಯಾನೆ ಸೆವೆನ್ ಸ್ಟಾರ್ ಪ್ರದೀಪ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಕಲಬುರಗಿ ಹೊರವಲಯದ ಗ್ರೀನ್ ಸಿಟಿ ಬಳಿ ರೌಡಿ ಶೀಟರ್ ಪ್ರದೀಪ್ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ್ ಎಸ್ಸೈ ರಮೇಶ್ ನೇತೃತ್ವದ ತಂಡ ಆತನನ್ನು ಬಂಧಿಸಲು ಅಲ್ಲಿಗೆ ತೆರಳಿದೆ. ಆದರೆ, ಪೊಲೀಸರನ್ನು ಕಂಡ ಕೂಡಲೇ ಪರಾರಿಯಾಗಲು ಯತ್ನಿಸಿದ ಆತನನ್ನು ಪೊಲೀಸರು ಬೆನ್ನಟ್ಟಿದ್ದಾರೆ ಎನ್ನಲಾಗಿದೆ.

ಆಗ ಪ್ರದೀಪ್, ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದು, ಆತ್ಮರಕ್ಷಣೆಗಾಗಿ ಪೊಲೀಸ್ ಎಸ್ಸೈ ರಮೇಶ್ ಹಾರಿಸಿದ ಗುಂಡು ಆತನ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಸುತ್ತುವರಿದ ಪೊಲೀಸರು ವಶಕ್ಕೆ ಪಡದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಹೇಳಿದ್ದಾರೆ.

ಇತ್ತೀಚೆಗೆ ಆರ್.ಜಿ.ನಗರ ಠಾಣೆ ಪಿಎಸ್ಸೈ ಮತ್ತು ಪೇದೆಗಳ ಮೇಲೆ ಹಲ್ಲೆ ಮಾಡಿ ಪ್ರದೀಪ್ ಪರಾರಿಯಾಗಿದ್ದ. ಈತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು ಎನ್ನಲಾಗಿದೆ. ಗಾಯಾಳು ಪ್ರದೀಪ್‌ನನ್ನು ಜಿಲ್ಲಾಸ್ಪತ್ರೆಗೆ ಹಾಗೂ ಪೇದೆಗಳಾದ ತೌಸಿಫ್, ವೆಂಕಟೇಶ್, ಬಸವರಾಜು ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅಪಹರಣ, ದೊಂಬಿ, ಗಲಭೆ, ಕೊಲೆ ಯತ್ನ ಸೇರಿದಂತೆ ಪ್ರದೀಪ್ ಮೇಲೆ 23ಕ್ಕೂ ಅಧಿಕ ಪ್ರಕರಣಗಳು ಪ್ರದೀಪ್ ವಿರುದ್ಧ ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News