ಸಿಬಿಐಗೆ ಕಡಿವಾಣ ಹಾಕಿದವರಾರು?

Update: 2018-11-19 04:02 GMT

 ಸಿಬಿಐ ಮತ್ತು ಕೇಂದ್ರದ ನಡುವೆ ಸಂಘರ್ಷಗಳು ಮುಂದುವರಿಯುತ್ತಿದ್ದಂತೆಯೇ, ಅದೀಗ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷವಾಗಿ ಪರಿವರ್ತನೆಯಾಗಿದೆ. ಸಿಬಿಐ ಅಧಿಕಾರಿಗಳು ಅಧಿಕೃತ ಕರ್ತವ್ಯಕ್ಕಾಗಿ ರಾಜ್ಯವನ್ನು ಪ್ರವೇಶಿಸುವ ಮುನ್ನ ತನ್ನ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು ಎಂದು ಆಂಧ್ರ ಪ್ರದೇಶ ಮತ್ತು ಪ. ಬಂಗಾಳ ರಾಜ್ಯಗಳು ನಿರ್ಧರಿಸಿವೆ. ಸಿಬಿಐ ಯಾವುದೇ ರಾಜ್ಯದಲ್ಲಿ ಶೋಧ ಅಥವಾ ತನಿಖೆ ನಡೆಸುವಂತಾಗಬೇಕಾದರೆ ದಿಲ್ಲಿ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್‌ಗೆ ರಾಜ್ಯಗಳು ಅನುಮತಿ ನೀಡಬೇಕು. ಈ ಅನುಮತಿ ದೊರಕದೇ ಇದ್ದಲ್ಲಿ ಸಿಬಿಐ ರಾಜ್ಯವನ್ನು ಪ್ರವೇಶಿಸುವಂತಿಲ್ಲ. ಇದೀಗ ಎರಡೂ ರಾಜ್ಯಗಳು ಆ ಅನುಮತಿಯನ್ನು ಹಿಂದೆಗೆದುಕೊಂಡಿವೆ. ಇನ್ನಷ್ಟು ರಾಜ್ಯಗಳು ಮುಂದಿನ ದಿನಗಳಲ್ಲಿ ಈ ಕ್ರಮವನ್ನು ಅನುಸರಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಹಿಂದೆಗೆದುಕೊಂಡ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರವಿದೆ ಎನ್ನುವುದು ಗಮನಾರ್ಹ. ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರ ರಾಜ್ಯಗಳ ಕ್ರಮವನ್ನು ಟೀಕಿಸಿದೆ. ಸಿಬಿಐಗೆ ಕಡಿವಾಣ ಹಾಕುವ ಮೂಲಕ, ತಮ್ಮನ್ನು ತಾವು ಭ್ರಷ್ಟರು ಎಂದು ಸಾಬೀತು ಮಾಡಿದಂತಾಗಿದೆ ಎಂದೂ ವ್ಯಂಗ್ಯವಾಡಿದೆ. ಆದರೆ ಸಿಬಿಐ ತನಿಖಾ ಸಂಸ್ಥೆಗೆ ನಿಜಕ್ಕೂ ಇಂತಹದೊಂದು ದಯನೀಯ ಸ್ಥಿತಿಯನ್ನು ತಂದಿಟ್ಟವರು ಯಾರು? ಕೇಂದ್ರ ಸರಕಾರ ಆತ್ಮವಿಮರ್ಶೆ ಮಾಡಬೇಕಾಗಿದೆ.

ಸಾಧಾರಣವಾಗಿ ಸಿಬಿಐ ತನಿಖಾ ಸಂಸ್ಥೆಯನ್ನು ಕೇಂದ್ರ ಸರಕಾರದ ಪಂಜರದ ಗಿಳಿ ಎಂದು ಆರೋಪಿಸುವುದಿದೆ. ಯಾವುದೇ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಅದರ ಮೂಗಿನ ನೇರಕ್ಕೆ ಅದು ಕರ್ತವ್ಯ ನಿರ್ವಹಿಸುತ್ತದೆ. ಅಥವಾ ಯಾವುದೇ ಸರಕಾರ ಬಂದರೂ ಸಿಬಿಐ ಸಂಸ್ಥೆಯೊಳಗೆ ತನ್ನ ಪ್ರಭಾವ ಬೀರಿಯೇ ಬೀರುತ್ತದೆ. ಈ ಹಿಂದಿನ ಯುಪಿಎ ಸರಕಾರವೂ ಇದಕ್ಕೆ ಹೊರತಾಗಿಲ್ಲ. ಆದರೆ ಅದಕ್ಕೊಂದು ಮಿತಿ ಇದೆ. ಕೇಂದ್ರ ಸರಕಾರ ಯಾವತ್ತೂ ಬಹಿರಂಗವಾಗಿ ಅಥವಾ ನೇರವಾಗಿ ಸಿಬಿಐಯೊಂದಿಗೆ ಕಿತ್ತಾಟಕ್ಕಿಳಿದಿರಲಿಲ್ಲ. ಅದರ ವಿಶ್ವಾಸಾರ್ಹತೆಗೆ ಸಂಪೂರ್ಣ ಧಕ್ಕೆ ಉಂಟು ಮಾಡಿರಲಿಲ್ಲ. ಸಿಬಿಐಯೊಳಗಿನ ಅಧಿಕಾರಿಗಳು ಕೇಂದ್ರದ ವಿರುದ್ಧ ಯಾವತ್ತೂ ಬಹಿರಂಗವಾಗಿ ಬಂಡೆದ್ದಿರಲಿಲ್ಲ. ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಿಬಿಐಯ ವಿಶ್ವಾಸಾರ್ಹತೆ ಬೀದಿ ಪಾಲಾಗಿದೆ. ಕೇಂದ್ರ ಸರಕಾರ ಬಹಿರಂಗವಾಗಿಯೇ ಸಿಬಿಐಯೊಳಗೆ ಕೈಯಾಡಿಸುತ್ತಿದೆ. ಇದು ಯಾವ ಹಂತಕ್ಕೆ ತಲುಪಿದೆಯೆಂದರೆ, ಸಿಬಿಐನ ಮುಖ್ಯಸ್ಥರೇ ಸರಕಾರದ ವಿರುದ್ಧ ತಿರುಗಿ ಬೀಳುವಷ್ಟು. ಇಂದು ಸಿಬಿಐಯ ಭವಿಷ್ಯವೇ ಸುಪ್ರೀಂಕೋರ್ಟ್ ನ ಕೈಯಲ್ಲಿದೆ. ಇಂತಹ ಸಂದರ್ಭದಲ್ಲಿ ವಿಶ್ವಾಸಾರ್ಹತೆ ಕಳೆದುಕೊಂಡ ಸಿಬಿಐ ಅಧಿಕಾರಿಗಳನ್ನು ಸರಕಾರ ತನ್ನ ರಾಜಕೀಯ ಲಾಭಕ್ಕಾಗಿ ಬಳಸುವ ಸಾಧ್ಯತೆಗಳು ಇನ್ನೂ ಹೆಚ್ಚು. ಆದುದರಿಂದ ಬಿಜೆಪಿಯೇತರ ಸರಕಾರಗಳುಳ್ಳ ರಾಜ್ಯಗಳಲ್ಲಿ ಸಿಬಿಐ ಅಧಿಕಾರಿಗಳ ಪ್ರವೇಶಕ್ಕೆ ಅನುಮತಿಯನ್ನು ನಿರಾಕರಿಸಿದರೆ ಅದಕ್ಕಾಗಿ ರಾಜ್ಯಗಳನ್ನು ದೂರುವಂತಿಲ್ಲ.

ಈ ಹಿಂದೆಲ್ಲ ಸಿಬಿಐಯೊಳಗೆ ಕೇಂದ್ರ ಸರಕಾರದ ರಾಜಕೀಯ ಹಸ್ತಕ್ಷೇಪಗಳನ್ನು ವಿರೋಧ ಪಕ್ಷಗಳು ಟೀಕಿಸುತ್ತಿದ್ದವು. ಕೆಲವೊಮ್ಮೆ ಭ್ರಷ್ಟರಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅದೊಂದು ನೆಪವೂ ಆಗಿರುತ್ತಿತ್ತು. ಆದುದರಿಂದ ಸಿಬಿಐ ವಿರುದ್ಧ ಇರುವ ಎಲ್ಲ ಆರೋಪಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ. ಆದರೆ ಈ ಬಾರಿ ಸಿಬಿಐ ಒಳಗಿರುವ ಅಧಿಕಾರಿಗಳ ಕುರಿತಂತೆ ಆರೋಪ ಮಾಡಿರುವುದು ಸ್ವತಃ ಸಿಬಿಐ ನಿರ್ದೇಶಕರೇ ಆಗಿದ್ದಾರೆ. ಅವರ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿ, ಆ ಅಧಿಕಾರಿಯ ಕುರಿತಂತೆ ತನಿಖೆಗೆ ಆದೇಶ ನೀಡುವುದು ಸರಕಾರದ ಕರ್ತವ್ಯವಾಗಿತ್ತು. ಆದರೆ ಈ ಆರೋಪವನ್ನು ಇಬ್ಬರು ಅಧಿಕಾರಿಗಳ ನಡುವಿನ ಜಗಳ ಎಂದು ತೆಳುವಾಗಿಸಿ ಇಬ್ಬರನ್ನೂ ರಜೆಯಲ್ಲಿ ಕಳುಹಿಸಿತು. ಇದೇ ಸಂದರ್ಭದಲ್ಲಿ ರಾಕೇಶ್ ಅಸ್ತಾನಾ ಕೇಂದ್ರ ಸರಕಾರದ ಪರವಾಗಿ ಕೆಲಸ ಮಾಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಸಿಬಿಐಯೊಳಗಿನ ಚಟುವಟಿಕೆಗಳ ಬೇಹುಗಾರಿಕೆಗೆ ಮತ್ತು ತನಗೆ ಪೂರಕವಾಗಿ ಕೆಲಸ ನಿರ್ವಹಿಸುವುದಕ್ಕಾಗಿಯೇ ಕೇಂದ್ರ ಆಸ್ತಾನನನ್ನು ನೇಮಿಸಿತ್ತು ಎನ್ನುವ ಆರೋಪ ಮಾಡಿರುವುದು ಯಾವುದೇ ವಿರೋಧ ಪಕ್ಷದ ನಾಯಕರಲ್ಲ. ಬದಲಿಗೆ ಸಿಬಿಐ ಮುಖ್ಯಸ್ಥರೇ ಆಗಿದ್ದಾರೆ. ಆರೋಪದ ಸತ್ಯಾಸತ್ಯತೆ ಪರಿಶೀಲಿಸುವ ಬದಲು, ಆರೋಪಿಸಿದವರನ್ನೇ ರಜೆಯಲ್ಲಿ ಕಳುಹಿಸಿದ ಹೆಗ್ಗಳಿಕೆ ಕೇಂದ್ರ ಸರಕಾರದ್ದು. ವರ್ಮಾ ಅವರ ಮೇಲೆ ಸರಕಾರ ಕ್ರಮ ಕೈಗೊಳ್ಳುವುದಕ್ಕೆ ಇನ್ನೊಂದು ಪ್ರಮುಖ ಕಾರಣವಿತ್ತು. ರಫೇಲ್ ಹಗರಣವನ್ನು ಅವರು ಗಂಭೀರವಾಗಿ ಪರಿಗಣಿಸಿದ್ದರು ಮತ್ತು ಆ ಕುರಿತಂತೆ ಮಾಹಿತಿಗಳನ್ನು ಕಲೆಹಾಕುತ್ತಿದ್ದರು.

ಇದೇ ಸಂದರ್ಭದಲ್ಲಿ ಈ ತನಿಖೆಗೆ ಅಸ್ತಾನಾ ಅಡ್ಡಿಯಾಗಿದ್ದರು. ಇನ್ನು ಹೊಸದಾಗಿ ನೇಮಕವಾಗಿರುವ ಪ್ರಭಾರ ಅಧಿಕಾರಿಯಂತೂ ಬಿಜೆಪಿಯ ಕುರಿತು ನೇರ ಒಲವು ಉಳ್ಳವರು ಎಂಬ ಆರೋಪವಿದೆ. ಇವರ ಕುಟುಂಬದಿಂದ ಬಿಜೆಪಿಗೆ ಹಣ ವರ್ಗಾವಣೆಯಾಗಿರುವುದೂ ಈಗಾಗಲೇ ಬೆಳಕಿಗೆ ಬಂದಿದೆ. ಜೊತೆಗೆ, ಸುಪ್ರೀಂಕೋರ್ಟ್ ಕೂಡ ಇವರ ರೆಕ್ಕೆ ಪುಕ್ಕವನ್ನು ಕತ್ತರಿಸಿದೆ. ಆಯ್ಕೆಯಾದ ನೂತನ ಅಧಿಕಾರಿಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ಸೂಚಿಸಿದೆ. ಒಟ್ಟಿನಲ್ಲಿ ಕೇಂದ್ರದ ಅವಾಂತರಗಳಿಂದಾಗಿ ಇಡೀ ಸಿಬಿಐ ಸಂಸ್ಥೆಯೇ ಅಮಾನತಿನಲ್ಲಿದೆ. ಇಂತಹ ಹೊತ್ತಿನಲ್ಲಿ ತನ್ನ ರಾಜಕೀಯ ದುರುದ್ದೇಶಗಳಿಗಾಗಿ ಸಿಬಿಐಯೊಳಗಿನ ಅಧಿಕಾರಿಗಳನ್ನು ತನಗೆ ಬೇಕಾದಂತೆ ಕೇಂದ್ರ ಸರಕಾರ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಲೋಕಸಭಾ ಚುನಾವಣೆ ಎದುರಾಗುತ್ತಿದೆ. ಕೇಂದ್ರ ಸರಕಾರದ ಆರ್ಥಿಕ ನೀತಿಗಳು ದೇಶಾದ್ಯಂತ ಜನಸಾಮಾನ್ಯರಲ್ಲಿ ಅಸಹನೆಯನ್ನು ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ರಾಮಮಂದಿರವನ್ನು ಮುಂದಿಟ್ಟು ಚುನಾವಣೆಯನ್ನು ಎದುರಿಸುವ ತಂತ್ರವನ್ನು ಬಿಜೆಪಿ ಹೂಡಿದೆ. ಇದೇ ಸಂದರ್ಭದಲ್ಲಿ ತಂತ್ರಕ್ಕೆ ಪ್ರತಿಯಾಗಿ, ದೇಶದ ಜಾತ್ಯತೀತ ಶಕ್ತಿಗಳು ಒಂದಾಗುವ ಸಿದ್ಧತೆ ನಡೆಸುತ್ತಿವೆ.

ದಕ್ಷಿಣ ಭಾರತದಲ್ಲಿ ಚಂದ್ರಬಾಬು ನಾಯ್ಡು ಮುಂಚೂಣಿಯಲ್ಲಿದ್ದಾರೆ. ವಿವಿಧ ಪಕ್ಷಗಳ ನಾಯಕರನ್ನು ಸಂಪರ್ಕಿಸತೊಡಗಿದ್ದಾರೆ. ಈಗಾಗಲೇ ತನಿಖಾ ಸಂಸ್ಥೆಗಳನ್ನು ತನ್ನ ವಿರೋಧಿಗಳ ವಿರುದ್ಧ ಬಳಸಿ ಅವರನ್ನು ಹತ್ತಿಕ್ಕಲು ಕುಖ್ಯಾತವಾಗಿರುವ ಮೋದಿ ಸರಕಾರ, ಇದೀಗ ಅನಾಥ ಸಿಬಿಐಯನ್ನು ಬಳಸಿಕೊಂಡು ತನ್ನ ವಿರೋಧಿಗಳನ್ನು ಮಟ್ಟ ಹಾಕುವುದಿಲ್ಲ ಎನ್ನಲು ಸಾಧ್ಯವೇ? ಈ ಕುರಿತಂತೆ ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಿಗೆ ಆತಂಕವಿರುವುದು ಸಹಜ. ಸಂಪೂರ್ಣ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ, ಮುಂದೆ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಮೇಲೆ ಸಿಬಿಐ ಭವಿಷ್ಯ ನಿಂತಿರುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಶೋಧ, ದಾಳಿ ನಡೆಸಲು ಅನುಮತಿ ನೀಡುವುದು ಎಷ್ಟು ಸರಿ? ಸಿಬಿಐ ತನಿಖೆಗೆ ಅಡ್ಡಿ ಮಾಡುವುದು ಸರಿಯಲ್ಲ ಎನ್ನುವ ಕೇಂದ್ರ ಸರಕಾರ, ರಫೇಲ್ ಹಗರಣವನ್ನು ಸಿಬಿಐಗೆ ತನಿಖೆ ನಡೆಸಲು ಅವಕಾಶ ನೀಡಬಹುದಿತ್ತಲ್ಲ? ಅಥವಾ ಅಸ್ತಾನಾ ವಿರುದ್ಧದ ಆರೋಪಗಳನ್ನು ತನಿಖೆ ನಡೆಸುತ್ತಿರುವ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸಿದ್ದು ಸಿಬಿಐ ತನಿಖೆಗೆ ಅಡ್ಡಿ ಅಲ್ಲವೇ?

ಈ ಕಾರಣದಿಂದ ಸಿಬಿಐ ಸಂಸ್ಥೆಯೊಳಗಿರುವ ವಿವಾದ, ಆರೋಪ, ಪ್ರತ್ಯಾರೋಪಗಳು ಸುಪ್ರೀಂಕೋರ್ಟ್‌ನಲ್ಲಿ ಬಗೆ ಹರಿಯುವವರೆಗೆ, ಬಿಜೆಪಿಯೇತರ ಸರಕಾರವಿರುವ ರಾಜ್ಯಗಳು ಸಿಬಿಐಯಿಂದ ಅಂತರ ಕಾಯ್ದುಗೊಂಡರೆ ಅದು ನ್ಯಾಯಯುತವೇ ಆಗಿದೆ. ಸುಪ್ರೀಂಕೋರ್ಟ್ ಸಿಬಿಐಯ ಮೇಲಿರುವ ಕಳಂಕಗಳನ್ನು ಅಳಿಸಿ, ಒಂದು ಉನ್ನತ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆಯನ್ನು, ಘನತೆಯನ್ನು ಕಾಪಾಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News