ಸಿಬಿಐ ಅಧಿಕಾರಿ ಸಿನ್ಹಾ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

Update: 2018-11-19 06:33 GMT

ಹೊಸದಿಲ್ಲಿ, ನ.18: ಸಿಬಿಐನ ವಿವಾದಿತ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧ ದೂರಿನ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. ತನ್ನನ್ನು ನಾಗ್ಪುರಕ್ಕೆ ವರ್ಗಾಯಿಸಿದ್ದನ್ನು ಪ್ರಶ್ನಿಸಿ ಮನೀಶ್ ಕುಮಾರ್ ಸಿನ್ಹಾ ಕೋರ್ಟ್ ಮೊರೆ ಹೋಗಿದ್ದರು. ಅಸ್ತಾನಾ ವಿರುದ್ಧ ಭ್ರಷ್ಟಾಚಾರ ಆರೋಪದ ತನಿಖೆ ನಡೆಸುತ್ತಿರುವ ತಂಡದಲ್ಲಿ ಸಿನ್ಹಾ ಅವರಿದ್ದಾರೆ.

ನ್ಯಾಯಾಲಯಕ್ಕೆ ಆಘಾತಕಾರಿ ಅಂಶ ಮುಂದಿಡಲು ಬಯಸುವೆ ಎಂದು ಸಿನ್ಹಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ‘‘ಇದು ನಮಗೇನೂ ಆಘಾತ ತಂದಿಲ್ಲ’’ ಎಂದು ಸಿನ್ಹಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿದ್ದ ಪೀಠ ತುರ್ತಾಗಿ ವಿಚಾರಣೆ ಕೈಗೆತ್ತಿಕೊಳ್ಳಲು ನಿರಾಕರಿಸಿತು.

ಕರ್ತವ್ಯದಿಂದ ವಿಮುಖಗೊಳಿಸಿ ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಸಲಿಸಿದ್ದ ಅರ್ಜಿಯ ವಿಚಾರಣೆಯ ಜೊತೆಗೆ ತನ್ನ ಅರ್ಜಿಯನ್ನು ವಿಚಾರಣೆ ನಡೆಸಬೇಕೆಂದು ಸಿಬಿಐ ಅಧಿಕಾರಿ ಸಿನ್ಹಾ ಬಯಸಿದ್ದರು.

‘‘ತನ್ನನ್ನು ನಾಗ್ಪುರಕ್ಕೆ ವರ್ಗಾಯಿಸಿರುವ ಕಾರಣ ಅಸ್ತಾನಾ ವಿರುದ್ಧ ಎಫ್‌ಐಆರ್ ತನಿಖಾ ತಂಡದಿಂದ ದೂರ ಉಳಿಯುವಂತಾಗಿದೆ’’ ಎಂದು ಸಿನ್ಹಾ ನೋವು ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News