ತುರ್ತುಪರಿಸ್ಥಿತಿಗಿಂತಲೂ ಕೆಟ್ಟ ಪರಿಸ್ಥಿತಿ ಈಗಿದೆ : ಅರುಣ್ ಶೌರಿ

Update: 2018-11-19 09:24 GMT

ಹೊಸದಿಲ್ಲಿ,ನ.18 : ತುರ್ತುಪರಿಸ್ಥಿತಿ ಹೇರಿದ್ದಕ್ಕಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ  ಪಶ್ಚಾತ್ತಾಪವಾದರೂ ಇತ್ತು, ಆದರೆ ಇಂದಿನ ಸನ್ನಿವೇಶ 1975-77ಗಿಂತಲೂ ಬಹಳಷ್ಟು ಗಂಭೀರವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಹೇಳಿದ್ದಾರೆ.

ಎಲ್ಲಾ ವಿಪಕ್ಷಗಳು ಒಗ್ಗೂಡಿದರೆ ಹಾಗೂ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ವಿರುದ್ಧ ಒಬ್ಬನೇ ಅಭ್ಯರ್ಥಿಯನ್ನು ನಿಲ್ಲಿಸಿದರೆ ಪ್ರಧಾನಿ ನರೇಂದ್ರ ಮೋದಿಗೆ 2019 ಲೋಕಸಭಾ ಚುನಾವಣೆಯಲ್ಲಿ ತಡೆ ಹೇರಬಹುದು ಎಂದರು.

ಟಾಟಾ ಸಾಹಿತ್ಯ ಉತ್ಸವದ ಅಂಗವಾಗಿ 'ನ್ಯಾಯಾಂಗ ವ್ಯವಸ್ಥೆಯೊಳಗಿನ ಅಪಾಯ' ಎಂಬ ವಿಚಾರದಲ್ಲಿ ಶೌರಿ  ಮಾತನಾಡುತ್ತಿದ್ದರು. "1975ರಲ್ಲಿ (ತುರ್ತುಪರಿಸ್ಥಿತಿ ಸಂದರ್ಭ) ನಿರ್ದಿಷ್ಟ ವಿರೋಧಿ ಬಣವಿತ್ತು. ಇಂದು ವಿರೋಧಿ ಬಣ ಹಂಚಿ ಹೋಗಿದೆ. ಇಂದಿರಾ ಗಾಂಧಿ ಹಾಗೂ ನರೇಂದ್ರ ಮೋದಿಯ ನಡುವಣ ವ್ಯತ್ಯಾಸವೆಂದರೆ ಇಂದಿರಾ ಗಾಂಧಿಗೆ ತಾನು ಮಾಡಿದ್ದಕ್ಕೆ ಬಹಳಷ್ಟು ಪಶ್ಚಾತ್ತಾಪವಿತ್ತು,'' ಎಂದು ಶೌರಿ ಹೇಳಿದರು.

"ಆದರೆ ಇಂದು ಯಾವುದೇ ಪಶ್ಚಾತ್ತಾಪವಿಲ್ಲ. ಇಂದಿರಾ ಗಾಂಧಿ 1.75 ಲಕ್ಷದಷ್ಟು ಜನರನ್ನು ಜೈಲಿಗೆ ತಳ್ಳಿದ್ದರೂ ಅಲ್ಲಿ ಒಂದು ಮಿತಿಯ ಅನುಭವವಿತ್ತು, 'ಇಸ್‍ಸೇ ಆಗೇ ನಹೀ ಜಾನಾ ಹೈ'. ಆದರೆ ಇಂದು ಅಂತಹ ಮಿತಿಯೇ ಇಲ್ಲ,'' ಎಂದು ಅವರು ಹೇಳಿದರು.

"ಆಗ ತುರ್ತುಪರಿಸ್ಥಿತಿ 19 ತಿಂಗಳುಗಳ ಕಾಲ ಇತ್ತು. ಆದರೆ ಇಂದು ಎಲ್ಲಾ ಸಂಸ್ಥೆಗಳ ಕತ್ತು ಹಿಚುಕಲಾಗುತ್ತಿದೆ. ಈಗಿನ ಪರಿಸ್ಥಿತಿ ಆಗಿನದ್ದಕ್ಕಿಂತಲೂ ಇನ್ನಷ್ಟು ಗಂಭೀರವಾಗಿದೆ.

"ವಿಪಕ್ಷಗಳ ಒಗ್ಗಟ್ಟು ಮೋದಿಯನ್ನು ಸೋಲಿಸಲು ಅಗತ್ಯ,'' ಎಂದರು. ``ಮೋದಿ ಅತ್ಯಂತ ಜನಪ್ರಿಯರಾಗಿದ್ದ ಸಮಯ (2014) ಅವರು ಪಡೆದ ಮತಗಳೆಷ್ಟು ? ಕೇವಲ 31%. ಆದುದರಿಂದ ವಿಪಕ್ಷಗಳು ಒಗ್ಗೂಡಿದರೆ ಅವರಿಗೆ ಶೇ 69ರಷ್ಟು ಮತಗಳಿಂದ ಆರಂಭಿಸಬಹುದು'' ಎಂದು ಶೌರಿ ಹೇಳಿದರು.

ಕಳೆದ ನಾಲು ವರ್ಷಗಳಲ್ಲಿ ಎಲ್ಲಾ ಸಂಸ್ಥೆಗಳೂ ಅವುಗಳ ಒಳಗಿರುವ ಗೆದ್ದಲಿನಿಂದ ನಾಶವಾಗಿವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News