ಕೇಂದ್ರ ಸಚಿವ ಕೆಲವು ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ ಸಿಬಿಐ ಡಿಐಜಿ ಸಿನ್ಹಾ !

Update: 2018-11-19 13:02 GMT

ದೋವಲ್ , ಸಿವಿಸಿ ಹಾಗು ಕಾನೂನು ಕಾರ್ಯದರ್ಶಿ ವಿರುದ್ಧವೂ ಗಂಭೀರ ಆರೋಪ 

ಹೊಸದಿಲ್ಲಿ,ನ.19: ಹೈದರಾಬಾದ್‌ನ ಉದ್ಯಮಿ ಸತೀಶ್ ಸನಾನಿಂದ ಲಂಚ ಪಡೆದಿದ್ದಾರೆ ಎಂಬ ಆರೋಪದಲ್ಲಿ ಸಿಬಿಐನ ನಂ.2 ಅಧಿಕಾರಿ ರಾಕೇಶ್ ಅಸ್ತಾನಾರ ವಿರುದ್ಧ ತನಿಖೆಯ ನೇತೃತ್ವ ವಹಿಸಿದ್ದ ಡಿಐಜಿ ಎಂ.ಕೆ. ಸಿನ್ಹಾ ಅವರು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿ ಕುರೇಶಿ ಪ್ರಕರಣದಲ್ಲಿ ಉದ್ಯಮಿಯ ಪರವಾಗಿ ಹಸ್ತಕ್ಷೇಪ ನಡೆಸಲು ಸಹಾಯಕ ಕಲ್ಲಿದ್ದಲು ಮತ್ತು ಗಣಿ ಸಚಿವ ಹರಿಭಾಯಿ ಚೌಧರಿ ಅವರು ಲಂಚದ ರೂಪದಲ್ಲಿ ಕೆಲವು ಕೋಟಿ ರೂ.ಗಳನ್ನು ಪಡೆದುಕೊಂಡಿದ್ದರು ಎಂದು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಕಳೆದ ತಿಂಗಳು ತನ್ನನ್ನು ದಿಢೀರ್ ಆಗಿ ನಾಗ್ಪುರಕ್ಕೆ ವರ್ಗಾಯಿದ್ದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಸಿನ್ಹಾ, ತನಿಖೆಯ ಹಾದಿ ತಪ್ಪಿಸುವುದು ಮತ್ತು ಅಸ್ತಾನಾರಿಗೆ ನೆರವಾಗುವುದು ತನ್ನ ವರ್ಗಾವಣೆಯ ಹಿಂದಿನ ಉದ್ದೇಶವಾಗಿತ್ತು ಎಂದು ಹೇಳಿದರು. ತನಿಖಾ ಸಂಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಕ್ಕಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮತ್ತು ಕೇಂದ್ರೀಯ ಜಾಗ್ರತ ಆಯಕ್ತ ಕೆ.ವಿ.ಚೌಧರಿ ಸೇರಿದಂತೆ ನರೇಂದ್ರ ಮೋದಿ ಸರಕಾರದ ಹಲವಾರು ಹಿರಿಯ ಅಧಿಕಾರಿಗಳ ವಿರುದ್ಧವೂ ಅವರು ದೂರಿಕೊಂಡಿದ್ದು,ಸಿಬಿಐ ಬಿಕ್ಕಟ್ಟು ಈಗ ಇನ್ನಷ್ಟು ತೀವ್ರಗೊಂಡಿದೆ ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.

ತನ್ನ ಅರ್ಜಿಯಲ್ಲಿ ‘ವಿಸಲ್ ಬ್ಲೋವರ್’ಪಾತ್ರವನ್ನು ನಿರ್ವಹಿಸಿರುವ ಸಿನ್ಹಾ ಅವರು,ಧೋವಲ್,ಹರಿಭಾಯಿ ಚೌಧರಿ ಮತ್ತು ಕೇಂದ್ರ ಕಾನೂನು ಕಾರ್ಯದರ್ಶಿ ಸುರೇಶಚಂದ್ರ ಅವರು ಹಸ್ತಕ್ಷೇಪ ಮಾಡಿರುವ ನಿದರ್ಶನಗಳನ್ನು ವಿವರಿಸಿದ್ದಾರೆ.

ಪ್ರಕರಣವನ್ನು ತುರ್ತು ವಿಚಾರಣೆಗೆ ಉಲ್ಲೇಖಿಸುವಾಗ ಸಿನ್ಹಾ ಪರ ವಕೀಲರು,ಅರ್ಜಿಯಲ್ಲ್ಲಿ ಆಘಾತಕಾರಿ ವಿವರಗಳಿವೆ ಎಂದು ತಿಳಿಸಿದಾಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ‘ಯಾವುದೂ ನಮಗೆ ಆಘಾತವನ್ನುಂಟು ಮಾಡುವುದಿಲ್ಲ’ಎಂದು ಪ್ರತಿಕ್ರಿಯಿಸಿ ತುರ್ತು ವಿಚಾರಣೆಗೆ ನಿರಾಕರಿಸಿದರು.

ಮೊಯಿನ್ ಕುರೇಶಿ ಪ್ರಕರಣದಲ್ಲಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾರ ವಿರುದ್ಧ ಸನಾ ಮಾಡಿರುವ ಭ್ರಷ್ಟಾಚಾರದ ಆರೋಪಗಳು ನಿಜವಾಗಿದ್ದರೆ ಅದು ಸಾರ್ವತ್ರಿಕವಾಗಿ ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಮೇಲೆ ಮತ್ತು ನಿರ್ದಿಷ್ಟವಾಗಿ ಸಿಬಿಐ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ ಎಂದು ಸಿನ್ಹಾ ಅರ್ಜಿಯಲ್ಲಿ ಹೇಳಿದ್ದಾರೆ.

ಅ.23ರಂದು ಮಧ್ಯರಾತ್ರಿ ಸಿನ್ಹಾ ಅವರನ್ನು ನಾಗ್ಪುರಕ್ಕೆ ವರ್ಗಾಯಿಸಲಾಗಿತ್ತು.

 ಯಾವುದೇ ಕಾರಣ ನೀಡದೇ ರಾತ್ರೋರಾತ್ರಿ ತನಿಖಾ ತಂಡವನ್ನು ಬರ್ಕಾಸ್ತುಗೊಳಿಸಿದ್ದ ಮತ್ತು ತಂಡದ ಪ್ರಮುಖ ಅಧಿಕಾರಿಗಳನ್ನು ದಂಡನೆಯ ಮತ್ತು ಕಳಂಕಿತ ರೀತಿಯಲ್ಲಿ ದೂರದ ಸ್ಥಳಗಳಿಗೆ ವರ್ಗಾವಣೆಗೊಳಿಸಿರುವುದು ತನಿಖಾಧಿಕಾರಿಗಳ ವೃತ್ತಿಜೀವನಕ್ಕೆ ಅಪಶಕುನದ ಚಿಹ್ನೆಗಳಾಗಿರುವುದು ಮಾತ್ರವಲ್ಲ,ಅದು ಇಡೀ ಪ್ರಕರಣದ ತನಿಖೆಗೂ ಅಪಶಕುನಕಾರಿಯಾಗಿದೆ. ಪ್ರಕರಣದ ಸತ್ಯಾಸತ್ಯತೆ ಏನೇ ಇದ್ದರೂ ಕೆಲವು ವ್ಯಕ್ತಿಗಳನ್ನು ಆರೋಪಮುಕ್ತಗೊಳಿಸುವ ಅಥವಾ ಸಿಲುಕಿಸುವ ತಮ್ಮ ವೈಯಕ್ತಿಕ ಗುರಿಸಾಧನೆಗಾಗಿ ಪ್ರಬಲ ವ್ಯಕ್ತಿಗಳು ಸಿಬಿಐನ್ನು ಹೇಗೆ ನಿಯಂತ್ರಿಸುತ್ತಿದ್ದಾರೆ ಎನ್ನುವುದನ್ನೂ ಇದು ಪ್ರತಿಬಿಂಬಿಸುತ್ತಿದೆ ಎಂದು ಸಿನ್ಹಾ ಬೆಟ್ಟುಮಾಡಿದರು.

ನ್ಯಾಯಾಲಯವು ರಕ್ಷಣೆ ನೀಡಿದ ಹೊರತು ಪ್ರಸಕ್ತ ಸನ್ನಿವೇಶದಲ್ಲಿ ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಸುವುದು ಯಾವುದೇ ಏಜೆನ್ಸಿಯ ಸಾಮರ್ಥ್ಯಕ್ಕೆ ಮೀರಿದ್ದಾಗಿದೆ. ತನಿಖೆಯು ತನ್ನದೇ ಮಾರ್ಗದಲ್ಲಿ ಸಾಗಲು ಅವಕಾಶ ನೀಡಲಾಗುತ್ತಿಲ್ಲ. ರಹಸ್ಯ ಕಾರ್ಯಾಚರಣೆಗಳ ಮೂಲಕ ಸಾಕ್ಷಾಧಾರಗಳನ್ನು ಸಂಗ್ರಹಿಸುವ ಸಿಬಿಐನ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಮೊದಲೇ ಜಾಗ್ರತರನ್ನಾಗಿಸಲಾಗಿದೆ. ನಿರ್ಣಾಯಕ ಸಾಕ್ಷಾಧಾರಗಳನ್ನು ದೊರಕಿಸಲು ಸಾಧ್ಯವಾಗುತ್ತಿಲ್ಲ. ತನಿಖೆಯು ನಿಜಕ್ಕೂ ಕಠಿಣವಾಗಲಿದೆ. ಸರ್ವೋಚ್ಚ ನ್ಯಾಯಾಲಯವು ಹಸ್ತಕ್ಷೇಪ ಮಾಡದಿದ್ದರೆ ವಾಸ್ತವದಲ್ಲಿ ಈ ಪ್ರಕರಣದಲ್ಲಿ ತನಿಖೆಯು ಹಳಿ ತಪ್ಪುವಂತೆ ಕಾಣುತ್ತಿದೆ ಎಂದು ಸಿನ್ಹಾ ಹೇಳಿದರು.

ಆರೋಪಗಳ ಪಟ್ಟಿ

ಅಜಿತ್ ಧೋವಲ್ ಕುರಿತು

ಮಧ್ಯವರ್ತಿ ಮನೋಜ್ ಪ್ರಸಾದ್ ಅ.16ರಂದು ಬೆಳಿಗ್ಗೆ ದುಬೈನಿಂದ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಸಿಬಿಐ ಕೇಂದ್ರ ಕಚೇರಿಗೆ ಕರೆತರಲಾಗಿತ್ತು. ಆರಂಭದಲ್ಲಿ ಧಿಮಾಕು ಪ್ರದರ್ಶಿಸಿದ್ದ ಆತ ಉನ್ನತ ವ್ಯಕ್ತಿಗಳ ಹೆಸರುಗಳನ್ನು ಬಾಯಿಬಿಡದೆ ತನಿಖೆಯನ್ನು ವಿಫಲಗೊಳಿಸಲು ಮತ್ತು ತನ್ನ ಉನ್ನತ ಸಂಪರ್ಕಗಳನ್ನು ಉಲ್ಲೇಖಿಸಿ ತನಿಖಾ ತಂಡವನ್ನು ಹೆದರಿಸಲು ಪ್ರಯತ್ನಿಸಿದ್ದ. ಮನೋಜ್ ಮತ್ತು ಸೋಮೇಶ ಅವರೆ ತಂದೆ ದಿನೇಶ್ವರ ಪ್ರಸಾದ ಅವರು ‘ರಾ’ದ ನಿವೃತ್ತ ಜಂಟಿ ಕಾರ್ಯದರ್ಶಿಯಾಗಿದ್ದು,ಧೋವಲ್ ಅವರೊಂದಿಗೆ ನಿಕಟ ನಂಟು ಹೊಂದಿದ್ದಾರೆ. ಮನೋಜ್ ಪ್ರಸಾದನನ್ನು ಸಿಬಿಐ ಕಚೇರಿಗೆ ಕರೆತಂದಾಗ ಆತ ಮೊದಲು ಹೇಳಿಕೊಂಡಿದ್ದೇ ಈ ವಿಷಯವನ್ನು ಮತ್ತು ತಾನು ಧೋವಲ್‌ಗೆ ಆಪ್ತನಾಗಿದ್ದರೂ ಸಿಬಿಐ ತನ್ನನ್ನು ವಶಕ್ಕೆ ತೆಗೆದುಕೊಂಡಿದ್ದಕ್ಕೆ ಅಚ್ಚರಿ ಮತ್ತು ಸಿಟ್ಟನ್ನು ಪ್ರದರ್ಶಿಸಿದ್ದ.

ತನ್ನ ಸೋದರ ಸೋಮೇಶ ದುಬೈನಲ್ಲಿರುವ ಅಧಿಕಾರಿಯೋರ್ವರು ಮತ್ತು ಹಾಲಿ ‘ರಾ’ದ ವಿಶೇಷ ಕಾರ್ಯದರ್ಶಿ ಸಮಂತ ಗೋಯೆಲ್ ಅವರಿಗೆ ತುಂಬ ಆಪ್ತನಾಗಿದ್ದಾನೆ ಮತ್ತು ಆತ ನಿಮ್ಮನ್ನೆಲ್ಲ ಮುಗಿಸುತ್ತಾನೆ ಎಂದು ಬೆದರಿಕೆಯನ್ನೂ ಮನೋಜ್ ಪ್ರಸಾದ್ ತನಿಖಾ ತಂಡಕ್ಕೆ ಒಡಿದ್ದ.

ಆತನ ವಿರುದ್ಧ ಶೋಧ ಕಾರ್ಯಾಚರಣೆಯ ಪ್ರಸ್ತಾವಕ್ಕೆ ನಿರ್ದೇಶಕರು ಅವಕಾಶ ನೀಡಿರಲಿಲ್ಲ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸುವುದು ಏಕೆ ಎಂದು ಪ್ರಶ್ನಿಸಿದ್ದರು. ವಿಚಾರಿಸಿದಾಗ ಧೋವಲ್ ಅನುಮತಿ ನೀಡುತ್ತಿಲ್ಲ ಎನ್ನುವುದು ಬೆಳಕಿಗೆ ಬಂದಿತ್ತು. ಇದಾದ ಬಳಿಕ ಮುಖವುಳಿಸಿಕೊಳ್ಳ್ಳುವ ಕ್ರಮವಾಗಿ ಅಸ್ತಾನಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ರದ್ದತಿಗೆ ಕೋರಿಕೊಳ್ಳಲು ನಿರ್ಧರಿಸಲಾಗಿತ್ತು ಮತ್ತು ಇದೇ ಕಾರಣದಿಂದ ಅಸ್ತಾನಾರ ಅರ್ಜಿಯು ವಿಚಾರಣೆಗೆ ಬಂದಾಗ ಸೆಲ್‌ಫೋನ್‌ಗಳಂತಹ ಇಲೆಕ್ಟ್ರಾನಿಕ್ ಸಾಧನಗಳನ್ನು ಸಂರಕ್ಷಿಸುವಂತೆ ಸಿಬಿಐ ಒತ್ತಾಯಿಸಿತ್ತು.

ಶೋಧ ಕಾರ್ಯಾಚರಣೆ ನಡೆಯುತ್ತಿದ್ದಾಗ ಅದನ್ನು ನಿಲ್ಲಿಸುವಂತೆ ದೂರವಾಣಿ ಕರೆಯೊಂದು ನಿರ್ದೇಶಕರಿಗೆ ಬಂದಿತ್ತು ಮತ್ತು ಅದು ಧೋವಲ್ ಅವರದಾಗಿತ್ತು.

ಸಚಿವ ಚೌಧರಿ ಕುರಿತು

ದೂರುದಾರ ಸನಾನನ್ನು ವಿಚಾರಣೆಗೊಳಪಡಿಸಿದಾಗ ಆತ ತನ್ನ ದೂರಿನಲ್ಲಿಯ ಅಂಶಗಳಿಗೆ ಅಂಟಿಕೊಂಡಿದ್ದ. ಅಲ್ಲದೆ ಜೂನ್‌ನಲ್ಲಿ ಕೆಲವು ಕೋಟಿ ರೂ.ಗಳನ್ನು ಸಚಿವ ಚೌಧರಿಯವರಿಗೆ ಪಾವತಿಸಿದ್ದಾಗಿಯೂ ತಿಳಿಸಿದ್ದ. ಸಿನ್ಹಾ ಈ ವಿಷಯವನ್ನು ತಕ್ಷಣ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರಿಗೆ ತಿಳಿಸಿದ್ದರು.

ಕೆ.ವಿ.ಚೌಧರಿ ಕುರಿತು

ಸಿವಿಸಿ ಕೆ.ವಿ.ಚೌಧರಿಯವರ ನಿಕಟ ಸಂಬಂಧಿಕ ಮತ್ತು ಹೈದರಾಬಾದ್‌ನ ದಿಲ್ಲಿ ಪಬ್ಲಿಕ್ ಸ್ಕೂಲ್‌ನ ಮಾಲಿಕ ಗೋರಂಟ್ಲ ರಮೇಶ ಜೊತೆ ತಾನು ಅವರನ್ನು ಭೇಟಿಯಾಗಿದ್ದೆ ಎಂದೂ ಸನಾ ವಿಚಾರಣೆ ವೇಳೆ ಬಹಿರಂಗಗೊಳಿಸಿದ್ದ. ಆ ವೇಳೆ ಅವರು ಕುರೇಶಿ ಪ್ರಕರಣವನ್ನು ಚರ್ಚಿಸಿದ್ದರು. ಬಳಿಕ ಚೌಧರಿ ಅಸ್ತಾನಾರನ್ನು ತನ್ನ ನಿವಾಸಕ್ಕೆ ಕರೆಸಿ ಪ್ರಶ್ನಿಸಿದ್ದರು. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳಿಲ್ಲ, ಪ್ರಕರಣದಲ್ಲಿ ಅಕ್ರಮವಾದುದು ಏನೂ ಇಲ್ಲ. ಸುಮ್ಮನೆ ಶಾಸ್ತ್ರಕ್ಕಾಗಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಸ್ತಾನಾ ತಿಳಿಸಿದ್ದರು ಎಂದು ಸನಾ ವಿಚಾರಣೆ ವೇಳೆ ಹೇಳಿದ್ದ.

ಸುರೇಶಚಂದ್ರ ಕುರಿತು

ಸಿವಿಸಿಯಲ್ಲಿ ಸಿಬಿಐ ನಿರ್ದೇಶಕ ವರ್ಮಾ ವಿರುದ್ಧ ಕಲಾಪಗಳು ನಡೆಯುತ್ತಿದ್ದಾಗ ಸುರೇಶಚಂದ್ರ ಮಧ್ಯೆ ಪ್ರವೇಶಿಸಿದ್ದರು. ನ.8ರಂದು ಹೈದರಾಬಾದ್ ಕೇಡರ್‌ನ ಐಎಎಸ್ ಅಧಿಕಾರಿ ರೇಖಾ ರಾಣಿ ಎನ್ನುವವರು ಸನಾ ಕಚೇರಿಗೆ ಪದೇಪದೇ ಕರೆಗಳನ್ನು ಮಾಡಿ ಲಂಡನ್ ಪ್ರವಾಸದಲ್ಲಿರುವ ಸುರೇಶಚಂದ್ರ ಆತನೊಡನೆ ಮಾತನಾಡಲು ಬಯಸುತ್ತಿದ್ದಾರೆ ಎಂದು ತಿಳಿಸಿ ಅವರ ಸಂಪರ್ಕ ದೂರವಾಣಿ ಸಂಖ್ಯೆಯನ್ನು ನೀಡಿದ್ದರು. ಅಂದೇ ರಾತ್ರಿ ಸನಾ ಸುರೇಶಚಂದ್ರರನ್ನು ಸಂಪರ್ಕಿಸಿದಾಗ,ಕೇಂದ್ರ ಸರಕಾರವು ನಿಮಗೆ ಸಂಪೂರ್ಣ ರಕ್ಷಣೆಯನ್ನು ನೀಡುತ್ತದೆ ಎಂಬ ಸಂಪುಟ ಕಾರ್ಯದರ್ಶಿ ಪಿ.ಕೆ.ಸಿನ್ಹಾ ಅವರ ಭರವಸೆಯನ್ನು ತಿಳಿಸಲು ನಾಲ್ಕೈದು ದಿನಗಳಿಂದಲೂ ಪ್ರಯತ್ನಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದರು. ನ.13ರಂದು ಮಹತ್ವದ ಬದಲಾವಣೆಯಾಗಲಿದೆ ಮತ್ತು ನ.14ರಂದು ತನ್ನನ್ನು ಅಗತ್ಯವಾಗಿ ಭೇಟಿಯಾಗುವಂತೆಯೂ ಅವರು ಹೇಳಿದ್ದರು. ಇದೆಲ್ಲವನ್ನೂ ಸನಾ ವಿಚಾರಣೆ ವೇಳೆ ತನಿಖಾ ತಂಡಕ್ಕೆ ತಿಳಿಸಿದ್ದ.

ನ.13ರಂದು ಮತ್ತೆ ರೇಖಾರಾಣಿಗೆ ಕರೆ ಮಾಡಿದ್ದ ಸುರೇಶಚಂದ್ರ ಸನಾ ಇರುವಿಕೆಯ ಬಗ್ಗೆ ಪ್ರಶ್ನಿಸಿದ್ದರು. ಸನಾಗೆ ನೆರವಾಗುವಂತೆ ಮತ್ತು ಆತನ ಭವಿಷ್ಯದ ಎಲ್ಲ ಸಮಸ್ಯೆಗನ್ನು ಬಗೆಹರಿಸಲಾಗುವುದು ಎಂದಿದ್ದ ಅವರು,ನ.15ರಂದು ಆತನನ್ನು ದಿಲ್ಲಿಗೆ ಕರೆತರಲು ತಿಳಿಸಿದ್ದರು. ರೇಖಾ ರಾಣಿ ತನಗೆ ಈ ವಿಷಯ ತಿಳಿಸಿದ್ದಾಗಿ ಸನಾ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News