ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸದವರ ವೇತನ ತಡೆಹಿಡಿಯುವಂತಿಲ್ಲ: ಹೈಕೋರ್ಟ್

Update: 2018-11-19 15:57 GMT

ಮುಂಬೈ, ನ.19: ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಿಲ್ಲ ಎಂಬ ಕಾರಣ ನೀಡಿ ಬಂದರು ಮಂಡಳಿಯ ಉದ್ಯೋಗಿಯೋರ್ವನ ವೇತನವನ್ನು 2016ರಿಂದ ತಡೆಹಿಡಿದಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.

ಮುಂಬೈ ಬಂದರು ಮಂಡಳಿಯಲ್ಲಿ ಚಾರ್ಜ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಪುರಾಲೆ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸದಿದ್ದವರ ವೇತನ ತಡೆಹಿಡಿಯಬಾರದು ಎಂದು ಸೂಚಿಸಿದೆ. 2015ರಲ್ಲಿ ರಮೇಶ್‌ಗೆ ಪತ್ರ ಬರೆದಿದ್ದ ಕೇಂದ್ರ ಶಿಪ್ಪಿಂಗ್ ಇಲಾಖೆಯು, ಪ್ರತೀ ತಿಂಗಳೂ ವೇತನವನ್ನು ಜಮೆ ಮಾಡಲಾಗುವ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಜೋಡಿಸುವಂತೆ ಸೂಚಿಸಿತ್ತು.

ಆದರೆ ತನ್ನ ಖಾಸಗಿತನ ಸಂವಿಧಾನಬದ್ಧವಾದ ಹಕ್ಕಾಗಿದ್ದು ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಜೋಡಿಸಲು ತನಗೆ ಇಷ್ಟವಿಲ್ಲ ಎಂದು ರಮೇಶ್ ತಿಳಿಸಿದ್ದರು. ಈ ಕಾರಣದಿಂದ 2016ರಿಂದ ಆತನ ಬ್ಯಾಂಕ್ ಖಾತೆಗೆ ವೇತನ ಜಮೆಯಾಗಿಲ್ಲ. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಸೆಪ್ಟೆಂಬರ್ 26ರಂದು ಆಧಾರ್ ಕಾರ್ಡ್ ಬಗ್ಗೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲೇಖಿಸಿ ಈ ತಿಂಗಳ ಆರಂಭದಲ್ಲಿ ರಮೇಶ್ ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಭಾಗೀಯ ಪೀಠವು, ತಕ್ಷಣ ಅರ್ಜಿದಾರನಿಗೆ ಇದುವರೆಗೆ ಸಲ್ಲಬೇಕಿರುವ ಬಾಕಿ ವೇತನ ಸಹಿತ ಪಾವತಿಸುವಂತೆ ಸೂಚಿಸಿ ಅಂತಿಮ ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News