ಪ್ರತಿಭಟನೆ ಆರಂಭವಾಗಿದೆ

Update: 2018-11-19 18:36 GMT

ಪರಿಸರ ರಕ್ಷಣೆಯ ವಿಷಯದಲ್ಲಿ ಬ್ರಿಟಿಷ್ ಸರಕಾರದ ಅನಾಸಕ್ತಿಯನ್ನು ಪ್ರಶ್ನಿಸುತ್ತಾ ‘ಎಕ್ಸ್‌ಟಿಂಕ್ಷನ್ ರೆಬೆಲಿಯನ್’ ಎಂಬ ಚಳವಳಿಕಾರರ ತಂಡ ಕಳೆದ ತಿಂಗಳು ಲಂಡನ್‌ನಲ್ಲಿನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಪ್ರತಿಭಟನಾ ಪ್ರದರ್ಶನ ನಿರ್ವಹಿಸಿತು. ಈ ಸಂದರ್ಭದಲ್ಲಿ 15 ವರ್ಷಗಳ ಸ್ವೀಡಿಷ್ ಹುಡುಗಿ ಗ್ರೆಟಾ ಥನ್‌ಬರ್ಗ್‌ಳ ಉಪನ್ಯಾಸ ವಿಶ್ವಾದ್ಯಂತ ಸಂಚಲನ ಸೃಷ್ಟಿಸಿದೆ. ಇದು ಆ ಉಪನ್ಯಾಸದ ಭಾವಾನುವಾದ.


ಇಂದು ನಾವು ಪ್ರತಿ ದಿನವೂ 10 ಕೋಟಿ ಬ್ಯಾರೆಲ್ ತೈಲವನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಇದನ್ನು ಬದಲಿಸುವ ರಾಜಕೀಯಗಳಾವುವೂ ಇಲ್ಲ. ಆ ತೈಲವನ್ನು ಮತ್ತೆ ಭೂಗರ್ಭದಲ್ಲೇ ಇಡುವುದಕ್ಕೆ ನೆರವಾಗುವ ನಿಯಮಗಳೇನೂ ಇಲ್ಲ. ನಿಯಮಗಳನ್ನು ಪಾಲಿಸುವುದರ ಮೂಲಕ ನಾವು ಜಗತ್ತನ್ನು ಕಾಪಾಡಲಾರೆವು ಏಕೆ?. ಆ ನಿಯಮಗಳನ್ನು ಬದಲಾಯಿಸಬೇಕಾಗಿದೆ. ಪ್ರತಿಯೊಂದೂ ಬದಲಾಗಬೇಕಾದ, ಪ್ರತಿಯೊಂದನ್ನೂ ಬದಲಾಯಿಸಬೇಕಾದ ಅಗತ್ಯ ಇದೆ. ಆ ಬದಲಾವಣೆ ಇಂದೇ ಆರಂಭ ಆಗಬೇಕು. ಶಾಸನೋಲ್ಲಂಘನೆಗೆ ಸಮಯ ಹತ್ತಿರವಾಗಿದೆ. ಪ್ರತಿಭಟನೆ ಮಾಡಬೇಕಾದ ಸಮಯ ಇದು. ಪ್ರತಿಭಟನೆ ಮಾಡಿದರಷ್ಟೇ ನಾವು ಈ ಭೂಮಿಯನ್ನು ಕಾಪಾಡಿಕೊಳ್ಳಬಲ್ಲೆವು.


‘‘ನಾನು 8 ವರ್ಷ ವಯಸ್ಸಿನಲ್ಲಿದ್ದಾಗ ಹವಾಮಾನ ಬದಲಾವಣೆ (ಇ್ಝಜಿಞಠಿಛಿ ಇಚ್ಞಜಛಿ) ಅಥವಾ ಭೂಮಿತಾಪ (ಎ್ಝಟಚಿಚ್ಝ ಚ್ಟಞಜ್ಞಿಜ) ಕುರಿತು ಮೊತ್ತಮೊದಲು ಕೇಳಿದೆನು. ಆ ವೈಪರೀತ್ಯ ನಮ್ಮ ಜೀವನ ಶೈಲಿಯ ಮೂಲಕ ನಾವೇ (ಮಾನವರೇ) ಸೃಷ್ಟಿಸುತ್ತಿರುವುದು ಎಂದು, ಸ್ಪಷ್ಟವಾಗಿ ಅರ್ಥವಾಯಿತು. ವಿದ್ಯುತ್ತನ್ನು ಉಳಿತಾಯ ಮಾಡುವುದಕ್ಕೆ ಲೈಟ್ ಆರಿಸು ಎಂದು, ಪ್ರಕೃತಿ ಸಂಪನ್ಮೂಲವನ್ನು ಕಾಪಾಡಿಕೊಳ್ಳುವುದಕ್ಕೆ ಕಾಗದಗಳನ್ನು ಪುನರ್‌ಬಳಕೆ ಮಾಡಿಕೊಳ್ಳಬೇಕೆಂದು ನನಗೆ ಹೇಳಿದರು. ಮಾನವರು ಭೂಮಿಯ ಶೀತೋಷ್ಣತೆಗಳನ್ನು ಬದಲಾಯಿಸಬಲ್ಲ ಶಕ್ತಿಶಾಲಿಗಳು ಎಂಬ ವಿಷಯ ವಿಚಿತ್ರವಾಗಿ ತೋರುವುದನ್ನು ನಾನು ನೆನಪು ಮಾಡಿಕೊಳ್ಳುತ್ತಿರುವೆ. ನಾವು ಅಷ್ಟು ಶಕ್ತಿಶಾಲಿಗಳು ಆಗಿದ್ದರೆ ಆ ಪ್ರಾಕೃತಿಕ ವಿಕೋಪ ನಿಜವಾಗಿಯೂ ಸಂಭವಿಸುತ್ತಿರುವಾಗ, ಅದರ ಕುರಿತಾಗಿಯೇ ಮಾತನಾಡಿಕೊಳ್ಳುತ್ತಿದ್ದೇವೇ? ನೀವು ಟಿವಿಯನ್ನು ಆನ್ ಮಾಡುತ್ತಲೇ ನಿಮಗೆ ಕಾಣಿಸುವುದೆಲ್ಲಾ ಅದರ ಕುರಿತೇ ಅಲ್ವಾ? ಹೆಡ್ಡಿಂಗ್‌ಗಳು, ರೇಡಿಯೋ, ಸುದ್ದಿ ಪತ್ರಿಕೆಗಳು ಸಮಸ್ತವೂ ಅದರ ಕುರಿತೇ ಘೋಷಿಸುತ್ತಿವೆ. ನೀವು ಮತ್ಯಾವುದರ ಕುರಿತೂ ಓದಿರಲಾರಿರಿ. ಒಂದು ವಿಶ್ವಾಸಮತ ನಡೆಯುತ್ತಿರುವಾಗ ಅದರ ಬಗ್ಗೆ ಹೊರತು ಮತ್ಯಾವುದರ ಮೇಲೂ ದೃಷ್ಟಿ ಹೋಗದಂತೆ ಧರಿತ್ರೀ ವಿಲಾಪವೇ ನಿಮ್ಮ ಮನಸ್ಸನ್ನು ಆವರಿಸಿದೆ.

ಆದರೆ ಯಾರೂ ಭೂತಾಪ ಕುರಿತು ಮಾತನಾಡರು. ಶಿಲಾಜ ಇಂಧನಗಳು, ಮತ್ತೆ ಅಷ್ಟೊಂದು ಹಾನಿಕರವಾದವುಗಳಾದರೆ, ನಮ್ಮ ಅಸ್ತಿತ್ವಕ್ಕೆ ಅವು ಎಲ್ಲಿಲ್ಲದ ಅಪಾಯ ಉಂಟಾಗಿಸುತ್ತಿದ್ದರೆ ನಾವು ಏನು ಮಾಡುತ್ತಿದ್ದೇವೆ? ಮೊದಲಿನಂತೆಯೇ ನಮ್ಮ ಬದುಕುಗಳನ್ನು ಬದುಕುತ್ತಿದ್ದೇವೆ. ಶಿಲಾಜ ಇಂಧನಗಳ ಬಳಕೆ ಮೇಲೆ ನಿರ್ಬಂಧಗಳು ಯಾಕಿಲ್ಲ? ಅವುಗಳ ಬಳಕೆ ಕಾನೂನು ವಿರುದ್ಧ ಎಂದು ಯಾಕೆ ಪ್ರಕಟಿಸುತ್ತಿಲ್ಲ?

ನಾನು ಜೀವನಪರ್ಯಂತ ಹಿಂಸಿಸುವ ಒಂದು ವ್ಯಾಧಿ (ಯಾಸ್ಪೆರ್ಗರ್ ಸಿಂಡ್ರೋಮ್)ನಿಂದ ನರಳುತ್ತಿದ್ದೇನಾದ್ದರಿಂದಲೇ ನನಗೆ ಪ್ರತಿಯೊಂದೂ ಕಪ್ಪಗೋ ಅಥವಾ ಬೆಳ್ಳಗೋ ಕಾಣಿಸುತ್ತದೆ. ನನ್ನ ಹಾಗೆ ಆಟಿಸಂ ಕಾಯಿಲೆಯಿಂದ ನರಳುತ್ತಿರುವವರೆಲ್ಲರೂ ಹಲವು ವಿಧಗಳಲ್ಲಿ ಸಾಮಾನ್ಯ ವ್ಯಕ್ತಿಗಳೆಂದೂ ಉಳಿದವರೆಲ್ಲರೂ ವಿಚಿತ್ರ ತೆವಲುಗಳಿಂದ ವ್ಯವಹರಿಸುವವರು ಎಂದು ಅನಿಸುತ್ತದೆ. ಹವಾಮಾನ ಬದಲಾವಣೆ ಜೀವಸಂಕುಲದ ಅಸ್ತಿತ್ವಕ್ಕೇ ಅಪಾಯವಾಗಿ ಪರಿಣಮಿಸುತ್ತದೆ ಎಂದೂ, ಈಗ ನಾವು ಎದುರಿಸುತ್ತಿರುವ ಸಮಸ್ಯೆಗಳಲ್ಲೆಲ್ಲಾ ಪ್ರಧಾನವಾದುದು ಎಂದು ಹಲವರು ಹೇಳುತ್ತಿದ್ದಾರೆ. ಹಾಗಿದ್ದಾಗ್ಯೂ ಅಂತಹ ದೊಡ್ಡ ಅಪಾಯ ಮುನ್ನುಗ್ಗಿ ಬರುತ್ತಿರುವಾಗಲೂ, ಮೊದಲಿನಂತೆಯೇ ಜೀವನ ಮುಂದುವರಿಸುತ್ತಿದ್ದಾರೆ. ಹವಾಮಾನಕ್ಕೆ ಹಾನಿಕಾರಕ ವಾಯುಗಳ ಪ್ರಸಾರಗಳನ್ನು ನಿಲ್ಲಿಸಿಬಿಡಬೇಕಾಗಿ ಬಂದರೆ, ನಾವು ಹಾಗೇ ಮಾಡಿ ತೀರಬೇಕು. ನಿಲ್ಲಿಸಿ ಬಿಡುವುದೋ, ನಿಲ್ಲಿಸಿ ಬಿಡದೇ ಹೋಗುವುದೋ ನಡೆಯಬೇಕು. ಜೀವಸಂಕುಲದ ಉಳಿವು ಅಪಾಯದಲ್ಲಿ ಬಿದ್ದರೆ ಎಂಬ ವಿಷಯದಲ್ಲಿ ಎಂತಹ ಸಂಶಯವೂ ಇಲ್ಲ. ಒಂದು ನಾಗರಿಕತೆಯಂತೆ ಮುಂದೆ ಸಾಗಬೇಕು. ಸಾಗಲಾರದೇ ಹೋದೆವು ಎಂದರೆ ಇಷ್ಟೇ ಕಥೆ. ಹಾಗಾಗಿ ನಾವು ಬದಲಾಗಬೇಕು, ಬದಲಾಗಿಯೇ ತೀರಬೇಕು.

ಸ್ವೀಡನ್, ಬ್ರಿಟನ್‌ನಂತಹ ದೇಶಗಳು ತಮ್ಮ ಹಸಿರು ಮನೆ ವಾಯುಗಳ ಪ್ರಸಾರಗಳನ್ನು ಪ್ರತಿ ವಾರ್ಷಿಕ ಕನಿಷ್ಠ ಶೇ.15ರಷ್ಟು ತಗ್ಗಿಸಿಕೊಳ್ಳುವುದಕ್ಕೆ ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆ ತಗ್ಗಿಸಿದಾಗ ಮಾತ್ರವೇ ಭೂತಾಪದ ಹೆಚ್ಚಳವನ್ನು ನಿರ್ದೇಶಿತ ಗುರಿಯ ಮೇರೆಗೆ (2 ಡಿಗ್ರಿಗಳಿಗಿಂತ ಕಡಿಮೆ) ತಗ್ಗಿಸಿಕೊಳ್ಳಬಲ್ಲವರಾಗುತ್ತೇವೆ. ಸರಿ, ತಾಜಾ ಐಪಿಸಿಸಿ (ಇಂಟರ್ ಗವರ್ನ್‌ಮೆಂಟಲ್ ಪ್ಯಾನಲ್ ಆನ್ ಕ್ಲೈಮೆಟ್ ಚೇಂಜ್) ವರದಿ ಪ್ರಕಾರ ಭೂತಾಪ 1.5 ಡಿಗ್ರಿಗಳಿಗಿಂತ ಕಡಿಮೆ ಇರಬೇಕು. ಅಷ್ಟು ಕಡಿಮೆ ಮಟ್ಟಕ್ಕೆ ಭೂತಾಪ ತಗ್ಗಿ ಹೋಗುವುದು ಎಂದರೇನೋ ನಾವು ಊಹಿಸಬಲ್ಲೆವು. ನಮ್ಮ ನಾಯಕರಲ್ಲಿ ಪ್ರತಿಯೊಬ್ಬರು, ನಮ್ಮ ಮೀಡಿಯಾ ಸಹ ಸದಾ ಆ ಪ್ರಾಕೃತಿಕ ವೈಪರೀತ್ಯದ ಕುರಿತು ಮಾತನಾಡುತ್ತಿದ್ದಾರೆ. ಆದರೆ, ಅಸಲು ವಿಷಯದ ಕುರಿತು ಪ್ರಸ್ತಾಪಿಸುತ್ತಿಲ್ಲ. ನಮ್ಮ ಹವಾಮಾನ ವ್ಯವಸ್ಥೆಯಲ್ಲಿ ಈಗಾಗಲೇ ಹರಡಿರುವ ಹಸಿರುಮನೆ ವಾಯುಗಳ ಪ್ರಭಾವದ ಕುರಿತು ಸಹ ಯಾರೂ ಪ್ರಸ್ತಾಪಿಸುತ್ತಿಲ್ಲ. ವಾಯುಮಾಲಿನ್ಯ ಭೂತಾಪದ ನಿಗೂಢ ಪ್ರಭಾವವೇ ಎಂಬ ವಾಸ್ತವವನ್ನು ಕುರಿತು ಯಾರೂ ಹೇಳುವುದೇ ಇಲ್ಲ. ಶಿಲಾಜ ಇಂಧನಗಳ ಬಳಕೆಯನ್ನು ನಾವು ನಿಲ್ಲಿಸಿಬಿಟ್ಟಾಗ, ಅಷ್ಟರಲ್ಲಿ ಭೂತಾಪದ ತೀವ್ರತೆ ನಿರ್ದೇಶಿತ ಕನಿಷ್ಠ ಮಟ್ಟಕ್ಕೆ ಹೆಚ್ಚುವರಿಯಾಗಿ 0.5ರಿಂದ 1.1 ಡಿಗ್ರಿ ಸೆಲ್ಸಿಯಸ್ ಮಟ್ಟಿಗೆ ಇರುವುದು ಖಂಡಿತ.

ನೂರಾರು ಕೋಟಿ ವರ್ಷಗಳ ಚರಿತ್ರೆಯುಳ್ಳ ಧರಿತ್ರಿ ಮೇಲೆ ಜೀವ ಸಂಕುಲ ಗತದಲ್ಲಿ ಐದು ಪರ್ಯಾಯಗಳು ಸಾಮೂಹಿಕವಾಗಿ ಅಂತರ್ಧಾನವಾಗಿ ಹೋದವು. ಈಗ ನಾವು ಅಂತಹ ಮಹಾಪ್ರಮಾದಲ್ಲಿದ್ದೇವೆ. ಭೂ ಚರಿತ್ರೆಯಲ್ಲಿ ಇದು ಆರನೇ ವಿನಾಶ. ಈ ಮಹಾವಿನಾಶ ತುಂಬಾ ಕ್ಷಿಪ್ರಗತಿಯಲ್ಲಿ ಸಂಭವಿಸುತ್ತಿದೆ. ಪ್ರತಿ ದಿನವೂ ಸುಮಾರು 600 ಜೀವಜಾತಿಗಳ ಉಳಿವು ಪ್ರಶ್ನಾರ್ಥಕವಾಗುತ್ತಿರುವುದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು. ಮತ್ತೆ ಯಾರೂ ಈ ಮಹಾಪ್ರಮಾದವನ್ನು ಕುರಿತು ಕ್ಷೀಣವಾಗಿಯಾದರೂ ಪ್ರಸ್ತಾಪಿಸುತ್ತಿಲ್ಲ ಏಕೆ? ಅಷ್ಟೇ ಅಲ್ಲ, ಪ್ಯಾರಿಸ್ ಒಪ್ಪಂದ, ಕ್ಯೋಟೋ ಪ್ರೊಟೋಕಾಲ್‌ನಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾದ ಸಮಾನತೆ, ಹವಾಮಾನ ನ್ಯಾಯ ಅಂಶಗಳ ಕುರಿತು ಯಾರೂ ಮಾತಾಡುವುದೇ ಇಲ್ಲ. ಪ್ಯಾರಿಸ್ ಒಪ್ಪಂದ ಜಗತ್ತಿನಾದ್ಯಂತ ಸತ್ಫಲಿತಗಳನ್ನು ಸಾಧಿಸಬೇಕೆಂದರೆ ಆ ಅಂಶಗಳ ಕುರಿತು ತಪ್ಪದೇ ಲಕ್ಷವಹಿಸಬೇಕು. ಲಕ್ಷಿಸುವುದು ಎಂದರೆ ಶ್ರೀಮಂತ ದೇಶಗಳು ತಮ್ಮ ಹಸಿರುಮನೆ ವಾಯುಗಳ ಪ್ರಸಾರವನ್ನು ಪೂರ್ತಿಯಾಗಿ (ಝೀರೋ ಮಟ್ಟಕ್ಕೆ) ತಗ್ಗಿಸಿ ಬಿಡಬೇಕು. ಅದೂ 6ರಿಂದ 12 ವರ್ಷಗಳಲ್ಲಿ. ಇದು ನಡೆದಾಗ ಮಾತ್ರವೇ ಬಡ ದೇಶಗಳಲ್ಲಿನ ಪ್ರಜೆಗಳು ತಮ್ಮ ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳ ಬಲ್ಲವರಾಗುತ್ತಾರೆ. ನಾವು ಈಗಾಗಲೇ ಅಭಿವೃದ್ಧಿಪಡಿಸಿಕೊಂಡಿರುವ ಮೂಲಸೌಕರ್ಯಗಳನ್ನು ರಸ್ತೆ, ಆಸ್ಪತ್ರೆಗಳು, ವಿದ್ಯುತ್, ಪಾಠಶಾಲೆಗಳು, ಒಳ್ಳೆ ಕುಡಿಯುವ ನೀರು ಮೊದಲಾದವು ಅವರೂ ಹೊಂದಬಲ್ಲವರಾಗುತ್ತಾರೆ.

ಆ ಮೂಲಸೌಕರ್ಯಗಳಲ್ಲಿ ಪ್ರತಿಯೊಂದನ್ನು ಈಗಾಗಲೇ ಸಮೃದ್ಧಿ ಹೊಂದಿರುವ ನಾವು ಪ್ಯಾರಿಸ್ ಒಪ್ಪಂದ ವಿಷಯದಲ್ಲಿ ನಮ್ಮ ವಿಧಿಯುಕ್ತ ಧರ್ಮದ ಕುರಿತು ಕನಿಷ್ಠ ಒಂದು ನಿಮಿಷವಾದರೂ ಆಲೋಚಿಸದೇ ಹೋದರೆ, ಆ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ಶ್ರದ್ಧೆ ತೋರಿಸದೇ ಹೋದರೆ ಭಾರತ, ನೈಜೀರಿಯಾದಂತಹ ದೇಶಗಳು ಹವಾಮಾನ ಭದ್ರತೆಯ ಕುರಿತು ಏತಕ್ಕೆ ಆಸಕ್ತಿ ವಹಿಸುತ್ತವೆ? ನಮ್ಮ ಕಲುಷಿತಕಾರಕ ವಾಯುಗಳ ಪ್ರಸಾರಗಳನ್ನು ಏಕೆ ತಗ್ಗಿಸುತ್ತಿಲ್ಲ? ಅವು, ನಿಜಕ್ಕೂ ಏಕೆ ಹೆಚ್ಚಾಗುತ್ತಿವೆ? ನಾವು ತಿಳಿದು ಸಹ ಜೀವಕೋಟಿ ವಿನಾಶಕ್ಕೆ ನೆರವಾಗುತ್ತಿದ್ದೇವಾ? ನಾವು ಅಷ್ಟು ದುಷ್ಟ ಸ್ವಭಾವದವರೇ? ಅಲ್ಲ, ಅಲ್ಲವೇ ಅಲ್ಲ.

ಪ್ರಜೆಗಳಲ್ಲಿ ಬಹಳ ಮಂದಿಗೆ ನಮ್ಮ ದೈನಂದಿನ ಕಾರ್ಯ ಚಟುವಟಿಕೆಗಳ ಪರಿಣಾಮಗಳು ಹೇಗಿರುತ್ತವೋ ಎಂದು ತಿಳಿದೇ ಇಲ್ಲ. ನಮ್ಮ ಪರಿಸರದಲ್ಲಿ ಕ್ಷಿಪ್ರಗತಿಯಲ್ಲಿ ಸಂಭವಿಸುತ್ತಿರುವ ಬದಲಾವಣೆಗಳ ಕುರಿತು ಸಹ ಅವರಿಗೆ ತಿಳಿಯದು. ನಾನು ಮೊದಲೇ ಹೇಳಿದಂತೆ ಈ ವಿಷಯದ ಕುರಿತು ಯಾರೂ ಮಾತನಾಡುವುದಿಲ್ಲ. ಭೀಕರ ಪರಿಣಾಮಗಳ ಮೇಲೆ ಪ್ರಮುಖ ಶೀರ್ಷಿಕೆಗಳು ಕಾಣಿಸುವುದೇ ಇಲ್ಲ. ತುರ್ತು ಸಭೆಗಳು ನಡೆಯವು. ಬ್ರೇಕಿಂಗ್ ನ್ಯೂಸ್ ಮೊದಲೇ ಇಲ್ಲ. ನಾವೊಂದು ಮಹಾಕಲ್ಲೋಲದಲ್ಲಿ ಇದ್ದೇವೆ ಎಂಬ ಅರಿವಿನೊಂದಿಗೆ ಯಾರೂ ವ್ಯವಹರಿಸುತ್ತಿಲ್ಲ. ಪರಿಸರ ರಕ್ಷಣೆಯೇ ಪ್ರಮುಖ ಅಜೆಂಡಾ ಎನ್ನುವ ರಾಜಕೀಯ ಮುಖಂಡರು, ಹವಾಮಾನ ತಜ್ಞರು ಸಹ ನಿತ್ಯ ವಿಮಾನ ಪ್ರಯಾಣ ಮಾಡುತ್ತಿದ್ದಾರೆ. ಹೈನು ಉತ್ಪತ್ತಿಗಳನ್ನು ಸವಿಯುತ್ತಿದ್ದಾರೆ.

ನಾನು 100 ವರ್ಷಗಳ ಕಾಲ ಬದುಕಿರಬಲ್ಲೆನಾದರೆ 2103ರಲ್ಲಿ ಜೀವಂತವಾಗಿ ನಡೆದಾಡುತ್ತಿರುತ್ತೇನೆ. ನೀವು ಈಗ ‘ಭವಿಷ್ಯತ್ತು’ ಕುರಿತು ಆಲೋಚಿಸುತ್ತಿದ್ದೀರಿ ಎಂದರೆ, 2050ರ ಬಳಿಕ ಏನು ನಡೆಯುತ್ತದೆ ಎಂಬ ವಿಷಯವನ್ನು ಆಲೋಚಿಸಲಾರಿರಿ. ಈ ವರ್ಷದವರೆಗೆ ನಿಮ್ಮ ಬದುಕು ಸುಖ ಸಂತಸಗಳಿಂದ ಮುಂದುವರಿಯುವ ವಿಷಯವಾಗಿ ಮಾತ್ರವೇ ಆಲೋಚಿಸುತ್ತೀರಿ. ಆದರೆ ಆಗ, ಅಂದರೆ 2050ರ ಕಾಲಕ್ಕೆ ನಾನು ನನ್ನ ಬದುಕನ್ನು ಅರ್ಧ ಸಹ ಜೀವಿಸಿರುವುದಿಲ್ಲ. ಆನಂತರ ಏನಾಗುತ್ತದೆ? 2078ರಲ್ಲಿ ನಾನು ನನ್ನ 75ನೇ ಜನ್ಮದಿನವನ್ನು ಆಚರಿಸಿಕೊಳ್ಳುವೆ. ಈಗಿಂದೀಗ ನಾವೇನು ಮಾಡುತ್ತಿದ್ದೇವೆ? ಏನೂ ಮಾಡುತ್ತಿಲ್ಲ ಎನ್ನುವುದು ನನ್ನ ಯಾವತ್‌ಜೀವಿತವನ್ನು, ನನ್ನ ಮಕ್ಕಳ, ಅವರ ಮಕ್ಕಳ ಬದುಕುಗಳನ್ನು ಎಷ್ಟೋ ಪ್ರಭಾವಿತಗೊಳಿಸುತ್ತವೆ.

ಈ ವರ್ಷ ಆಗಸ್ಟ್‌ನಲ್ಲಿ ಬೇಸಿಗೆ ರಜೆಗಳ ಬಳಿಕ ಪಾಠಶಾಲೆ ಪುನರ್‌ಪ್ರಾರಂಭ ವಾದಾಗ ಈ ಓದು ಇನ್ನು ಸಾಕು ಎಂದು ನಾನು ತೀರ್ಮಾನಿಸಿಕೊಂಡೆನು. ಸ್ವೀಡಿಷ್ ಪಾರ್ಲಿಮೆಂಟ್ ಹೊರಗಡೆ ಪ್ರತಿಭಟನೆಗೆ ಕುಳಿತೆನು. ಹವಾಮಾನ ರಕ್ಷಣೆಗೆ ಪಾಠಶಾಲೆಗೆ ಹೋಗದಂತೆ ಈ ಪ್ರತಿಭಟನೆಯಲ್ಲಿ ತೊಡಗಿದೆನು. ನಾನು ಪಾರ್ಲಿಮೆಂಟ್ ಹೊರಗಡೆ ಅಲ್ಲಾ, ಪಾಠಶಾಲೆಯಲ್ಲಿರಬೇಕು ಎಂದು ಕೆಲ ಮಂದಿ ಅಂದರು. ಹವಾಮಾನ ತಜ್ಞಳಾಗುವುದಕ್ಕೆ ಪಾಠಶಾಲೆ ಸೇರಿ ಓದಬೇಕೆಂದು, ಆಗ ಹವಾಮಾನ ಸಂಕ್ಷೋಭೆಗೆ ಪರಿಹಾರ ಕಂಡುಕೊಳ್ಳಬಲ್ಲ ಮೇಧೋನೈಪುಣ್ಯ ಒದಗುತ್ತದೆ ಎಂದು, ಮತ್ತೆ ಕೆಲ ಮಂದಿ ಅಂದರು. ಆದರೆ ಹವಾಮಾನ ಸಂಕ್ಷೋಭೆಗೆ ಸಂಬಂಧಿಸಿದ ಸಮಸ್ತ ವಾಸ್ತವಗಳೂ ನಮಗೆ ಗೊತ್ತು. ಪ್ರತಿ ಸಮಸ್ಯೆಯನ್ನೂ ತೊಲಗಿಸುವುದಕ್ಕೆ ಅಗತ್ಯವಾದ ಪರಿಹಾರಗಳೂ ನಮಗೆ ಗೊತ್ತು. ನಾವು ಮಾಡಬೇಕಾದದ್ದು ಪ್ರಕ್ಷುಬ್ದತೆಯ ತೀವ್ರತೆಯತ್ತ ಜಾಗರೂಕರಾಗಿ ಬದಲಾಗಿ, ಪರಿಸ್ಥಿತಿಗಳನ್ನು ಬದಲಿಸುವುದಾಗಿದೆ.

ಕ್ಷಿಪ್ರದಲ್ಲಿ ಇನ್ನಿಲ್ಲವಾಗಲಿರುವ ಭವಿಷ್ಯಕ್ಕೋಸ್ಕರ ನಾನು ಪಾಠಶಾಲೆಯಲ್ಲಿ ಸೇರಿ ಏತಕ್ಕೆ ಓದಬೇಕು? ಆ ಭವಿಷ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯಾರೂ ಏನನ್ನೂ ಮಾಡದಿರುವಾಗ ಇನ್ನೂ ಓದಿಕೊಳ್ಳುವುದೇಕೆ? ಹವಾಮಾನ ಬದಲಾ ವಣೆಗೆ ಸಂಬಂಧಿಸಿದ ವಾಸ್ತವಗಳನ್ನು ನಾನು ಪಾಠಶಾಲೆಯಲ್ಲಿ ಸೇರಿ ಏತಕ್ಕೆ ಕಲಿತುಕೊಳ್ಳಬೇಕು? ಅದೇ ಪಾಠಶಾಲೆ ವ್ಯವಸ್ಥೆ ನೆರವಿನಿಂದ ಪ್ರಸ್ತುತ ಹವಾಮಾನ ವಿಜ್ಞಾನ ಮುನ್ನುಗ್ಗಿ ಬರುತ್ತಿರುವ ವಿನಾಶದ ಕುರಿತು ವರದಿ ಮಾಡಿದ ಸಮಸ್ತ ವಾಸ್ತವಗಳ ಕುರಿತು ರಾಜಕಾರಣಿಗಳಾಗಲೀ, ಸಮಾಜವಾಗಲೀ ಎಳ್ಳಷ್ಟೂ ಲಕ್ಷಿಸದಿರುವಾಗ ನಾನು ಶಾಲೆ ಸೇರಿ ಏಕೆ ಓದಬೇಕು?

ಸ್ವೀಡನ್ ತುಂಬಾ ಚಿಕ್ಕ ದೇಶ ಎಂದು, ಇಲ್ಲಿ ಏನು ಮಾಡಿದರೂ ಪ್ರಪಂಚದ ಮೇಲೆ ಅದರ ಪ್ರಭಾವ ಅಷ್ಟಾಗಿ ಇರದು ಎಂದು ಕೆಲ ಮಂದಿ ಅನ್ನುತ್ತಾರೆ. ಆದರೆ ಕೆಲ ಮಂದಿ ಮಕ್ಕಳು ಕೆಲ ವಾರಗಳ ಕಾಲ ಪಾಠ ಶಾಲೆಗೆ ಹೋಗದೇ ವಿಶ್ವಾದ್ಯಂತ ಪ್ರಮುಖ ವಿಷಯಗಳಿಗೆ ನಾವು ಸಾಮೂಹಿಕ ಕಾರ್ಯಾಚರಣೆಗೆ ಇಳಿದರೆ ಏನನ್ನು ಸಾಧಿಸಬಲ್ಲೆವೋ ಊಹಿಸಿರಿ. ಇಂದು ನಾವು ಪ್ರತಿ ದಿನವೂ 10 ಕೋಟಿ ಬ್ಯಾರೆಲ್ ತೈಲವನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಇದನ್ನು ಬದಲಿಸುವ ರಾಜಕೀಯಗಳಾವುವೂ ಇಲ್ಲ. ಆ ತೈಲವನ್ನು ಮತ್ತೆ ಭೂಗರ್ಭದಲ್ಲೇ ಇಡುವುದಕ್ಕೆ ನೆರವಾಗುವ ನಿಯಮಗಳೇನೂ ಇಲ್ಲ. ನಿಯಮಗಳನ್ನು ಪಾಲಿಸುವುದರ ಮೂಲಕ ನಾವು ಜಗತ್ತನ್ನು ಕಾಪಾಡಲಾರೆವು ಏಕೆ?. ಆ ನಿಯಮಗಳನ್ನು ಬದಲಾಯಿಸಬೇಕಾಗಿದೆ. ಪ್ರತಿಯೊಂದೂ ಬದಲಾಗಬೇಕಾದ, ಪ್ರತಿಯೊಂದನ್ನೂ ಬದಲಾಯಿಸಬೇಕಾದ ಅಗತ್ಯ ಇದೆ. ಆ ಬದಲಾವಣೆ ಇಂದೇ ಆರಂಭ ಆಗಬೇಕು. ಶಾಸನೋಲ್ಲಂಘನೆಗೆ ಸಮಯ ಹತ್ತಿರವಾಗಿದೆ. ಪ್ರತಿಭಟನೆ ಮಾಡಬೇಕಾದ ಸಮಯ ಇದು. ಪ್ರತಿಭಟನೆ ಮಾಡಿದರಷ್ಟೇ ನಾವು ಈ ಭೂಮಿಯನ್ನು ಕಾಪಾಡಿಕೊಳ್ಳಬಲ್ಲೆವು.

Writer - ಸಂಗ್ರಹ: ಕಸ್ತೂರಿ

contributor

Editor - ಸಂಗ್ರಹ: ಕಸ್ತೂರಿ

contributor

Similar News