ರೈತರು ಬರುತ್ತಿದ್ದಾರೆ, ಎಚ್ಚರ!

Update: 2018-11-19 18:39 GMT

 ಬೃಹತ್ ಕಾವೇರಿ ಪ್ರತಿಮೆಯನ್ನು ಸ್ಥಾಪಿಸುವ ಕುರಿತಂತೆ ರಾಜ್ಯ ಸರಕಾರ ತನ್ನ ಇಂಗಿತ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ, ತಾವು ಬೆಳೆದ ಕಬ್ಬಿನ ಹಣ ಪಾವತಿಯಾಗದೇ ಹತಾಶೆಗೊಂಡ ರೈತರು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ದಾರೆ. ಸಣ್ಣ ಪುಟ್ಟ ತಿಕ್ಕಾಟಗಳೂ ಸಂಭವಿಸಿವೆ. ರೈತರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಯಿತು. ಕರ್ನಾಟಕಕ್ಕೆ ಇದು ಹೊಸತೇನೂ ಅಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಲದಲ್ಲಿ ಗೊಬ್ಬರ ಮತ್ತು ಬಿತ್ತನೆ ಬೀಜ ಕೇಳಿ ಬೀದಿಗಿಳಿದ ರೈತರ ಮೇಲೆ ಗುಂಡಿನ ದಾಳಿ ನಡೆಯಿತು. ಆ ಬಳಿಕ, ಯಡಿಯೂರಪ್ಪ ಅವರು ಹುತಾತ್ಮ ರೈತನ ಪ್ರತಿಮೆ ನಿರ್ಮಿಸುವ ಭರವಸೆ ನೀಡಿ ತನ್ನ ರೈತ ಪ್ರೇಮವನ್ನು ವ್ಯಕ್ತಪಡಿಸಿದ್ದರು. ಒಂದೆಡೆ ಬೆಳೆದ ಬೆಳೆಗೆ ಹಣ ಪಾವತಿ ಮಾಡಿ ಎಂದು ರೈತರು ಬೀದಿಗಿಳಿಯುವ ಸನ್ನಿವೇಶ ಇರುವಾಗ ಕಾವೇರಿ ಮಾತೆಯ ಬೃಹತ್ ಪ್ರತಿಮೆ ನಿರ್ಮಾಣ ಈ ನಾಡಿಗೆ ಹೇಗೆ ಗೌರವವನ್ನು ತಂದುಕೊಟ್ಟೀತು? ರೈತರ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ನೀಡದೇ ಅವರ ಹೆಸರಲ್ಲಿ ಭಾವನಾತ್ಮಕವಾಗಿ ರಾಜಕೀಯ ಮಾಡುವುದರಲ್ಲಿ ಕೇಂದ್ರ ಸರಕಾರವೂ ಹಿಂದೆ ಬಿದ್ದಿಲ್ಲ. ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಸಹಕರಿಸಿ ಎಂದು ಹಲವು ವರ್ಷಗಳಿಂದ ರಾಜ್ಯ ಕೇಂದ್ರಕ್ಕೆ ದುಂಬಾಲು ಬಿದ್ದಿದೆಯಾದರೂ, ಅದರಿಂದ ಖಜಾನೆಗಾಗುವ ನಷ್ಟವನ್ನು ಮುಂದಿಟ್ಟುಕೊಂಡು ರಾಜ್ಯದ ರೈತರ ಅಳಲನ್ನು ತಿರಸ್ಕರಿಸುತ್ತಾ ಬರಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ಯಾರಿಗೂ ಲಾಭವಿಲ್ಲದ, ಏನನ್ನೂ ಉತ್ಪಾದಿಸದ ಒಂದು ಪ್ರತಿಮೆಗಾಗಿ ಮೂರು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ.

ದೇಶಾದ್ಯಂತ 200 ರೈತ ಸಂಘಟನೆಗಳು ರೈತರ ಹಲವು ಬೇಡಿಕೆಗಳನ್ನು ಮುಂದಿಟ್ಟು ಒಂದಾಗಿವೆ. ಒಂದು ಬೃಹತ್ ರೈತ ರ್ಯಾಲಿ ಸಿದ್ಧವಾಗುತ್ತಿದ್ದು ಅದು ನವೆಂಬರ್ 29 ಮತ್ತು 30ರಂದು ದಿಲ್ಲಿ ತಲುಪಲಿದೆ. ಬಹುಶಃ ಈ ದೇಶದ ಶ್ರೀಸಾಮಾನ್ಯರ ಮತ್ತು ಕಾರ್ಪೊರೇಟ್ ಬೆಂಬಲಿತ ಸರಕಾರವೊಂದರ ನೇರ ಮುಖಾಮುಖಿ ಇದಾಗುವ ಎಲ್ಲ ಸಾಧ್ಯತೆಗಳಿವೆ. ಪಟೇಲರ ಏಕತಾ ಪ್ರತಿಮೆಗೂ ಈ ದೇಶದ ರೈತರಿಗೂ ಯಾವ ಸಂಬಂಧವಿಲ್ಲ ಎನ್ನುವುದು ಇದು ಸೂಚ್ಯವಾಗಿ ಪ್ರಧಾನಿ ಮೋದಿಯವರಿಗೆ ಹೇಳುತ್ತಿದೆ. ರೈತರು ಈ ದೇಶದ ಆಹಾರ ಭದ್ರತೆಯ ಕಾವಲುಗಾರರು. ಇಂದು ಈ ದೇಶ ಆತ್ಮಾಭಿಮಾನದಿಂದ ತಲೆಯೆತ್ತಿ ನಿಂತಿರುವುದು ಸೇನೆಯಿಂದಷ್ಟೇ ಅಲ್ಲ, ಭಾರತವನ್ನು ಆಹಾರದಲ್ಲಿ ಸ್ವಾವಲಂಬಿಯಾಗಿಸಿದ ರೈತರ ಪಾತ್ರವೂ ಇದರ ಹಿಂದಿದೆ. ರೈತರ ಹಿತಾಸಕ್ತಿ ಕಾಯ್ದುಕೊಳ್ಳುವುದೆಂದರೆ ದೇಶದ ಹಿತಾಸಕ್ತಿ ಕಾಯ್ದುಕೊಳ್ಳುವುದು. ಆದರೆ ರೈತರ ಬೇಡಿಕೆಗಳನ್ನು ಪೊಲೀಸರ ಲಾಠಿಗಳ ಮೂಲಕ ದಮನಿಸಲು ಕೇಂದ್ರ ಸರಕಾರ ಹೊರಟಿದೆ. ಇಷ್ಟಕ್ಕೂ ರೈತರು ಕೇಳುತ್ತಿರುವುದಾದರೂ ಏನು? ದೇಶದಲ್ಲಿನ ಕೃಷಿ ಬಿಕ್ಕಟ್ಟನ ಬಗ್ಗೆ ಚರ್ಚಿಸಲು ಒಂದು ವಿಶೇಷ ಸಂಸತ್ ಅಧಿವೇಶನವನ್ನು ಕರೆಯಬೇಕೆಂಬುದು ಈ ರೈತ ಹೋರಾಟ ಸಂಯೋಜನಾ ಸಮಿತಿಯ ಪ್ರಧಾನ ಆಗ್ರಹವಾಗಿದೆ.

ಆ ವಿಶೇಷ ಅಧಿವೇಶನವು ಸ್ವಾಮಿನಾಥನ್ ಅಯೋಗದ ಶಿಫಾರಸುಗಳ ಬಗ್ಗೆ , ಕನಿಷ್ಠ ಬೆಂಬಲ ಬೆಲೆ ನೀತಿಯ ಅನುಷ್ಠಾನ ಮತ್ತು ನಿಯಂತ್ರಣದ ಬಗ್ಗೆ, ಬೆಳೆ ವಿಮಾ ನೀತಿಯ ಸಮಸ್ಯಾತ್ಮಕ ಖಾಸಗೀಕರಣದ ಬಗ್ಗೆ, ಬರಪೀಡಿತ ಪ್ರದೇಶಗಳನ್ನು ವರ್ಗೀಕರಿಸುವಲ್ಲಿ ಸರಕಾರವು ಅನುಸರಿಸುತ್ತಿರುವ ದೋಷಪೂರಿತ ಪದ್ಧತಿಯ ಬಗ್ಗೆ, ವಿವಿಧ ಬ್ಯಾಂಕುಗಳಿಂದ ಸಾಲವನ್ನು ಪಡೆದಿರುವ ರೈತರ ಬಗ್ಗೆ ಬ್ಯಾಂಕುಗಳು ಅನುಸರಿಸುತ್ತಿರುವ ತಾರತಮ್ಯದ ನೀತಿಗಳ ಬಗ್ಗೆ ಚರ್ಚಿಸಲೆಂದೇ ನಿಗದಿಯಾಗಬೇಕೆಂಬುದು ರೈತರ ಬಯಕೆಯಾಗಿದೆ. ರೈತರ ಅನುಭವಗಳೇ ಹೇಳುವಂತೆ ಸಾಲವನ್ನು ವಸೂಲಿ ಮಾಡಲು ಹಲವಾರು ಬ್ಯಾಂಕುಗಳು ಕಠಿಣವಾದ ಮತ್ತು ಅವಮಾನಕಾರಿಯಾದ ಕ್ರಮಗಳನ್ನು ಅನುಸರಿಸುತ್ತಿವೆ. ಆದರೆ ಅದೇ ಸಮಯದಲ್ಲಿ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿಯನ್ನು ಸಾಲವಾಗಿ ಪಡೆದು ಮರುಪಾವತಿ ಮಾಡದ ಹಲವಾರು ವ್ಯಕ್ತಿಗಳ ಬಗ್ಗೆ ಇದೇ ಬ್ಯಾಂಕುಗಳು ಅತ್ಯಂತ ಉದಾರವಾಗಿ ವರ್ತಿಸುತ್ತಿವೆ. ದೇಶದ ದೊಡ್ಡ ಸಂಖ್ಯೆಯ ರೈತರು ಬ್ಯಾಂಕುಗಳ ಈ ಬಗೆಯ ತಾರತಮ್ಯ ನೀತಿಯ ಬಲಿಪಶುಗಳಾಗಿದ್ದಾರೆ. ಇಂದು ಬೃಹತ್ ಉದ್ಯಮಿಗಳು ಸಾವಿರಾರು ಕೋಟಿ ರೂಪಾಯಿ ಬಾಕಿಯಿರಿಸಿ ಬ್ಯಾಂಕುಗಳನ್ನು ಮುಳುಗಿಸುತ್ತಿದ್ದಾರೆ. ಇವರ ವಿರುದ್ಧ ಕಠಿಣವಾಗದ ಸರಕಾರ, ರೈತರ ಬೇಡಿಕೆ ಕುರಿತಂತೆ ಯಾಕೆ ನಿಷ್ಕರುಣಿಯಾಗಿದೆ?

ಅದೇರೀತಿ ವಾಣಿಜ್ಯ ಬೆಳೆಗಳ ಮೇಲೆ ಕಾರ್ಪೊರೇಟ್ ವಿಮಾ ಕಂಪೆನಿಗಳ ಕಬಂಧ ಹಿಡಿತವನ್ನು ಇನ್ನಷ್ಟು ವಿಸ್ತರಿಸುವ ನೀತಿಗಳು ರೈತರಿಗಿಂತ ಕಂಪೆನಿಗಳಿಗೇ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಕೃಷಿ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದು ದೇಶಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ರೈತರ ದುರಂತಮಯ ಆತ್ಮಹತ್ಯೆಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲೇ ರೈತರ ಈ ಬೃಹತ್ ರ್ಯಾಲಿಯು ಕೃಷಿ ಬಿಕ್ಕಟ್ಟಿನ ಸಮಸ್ಯೆಯನ್ನು ಸಾರ್ವಜನಿಕರ ಕೇಂದ್ರ ಗಮನಕ್ಕೆ ತರಲು ಉದ್ದೇಶಿಸಿದೆ. ಈ ಕೃಷಿ ಬಿಕ್ಕಟ್ಟನ್ನು ಬಗೆಹರಿಸುವ ಬಗ್ಗೆ ಕನಿಷ್ಠ ಕಾಳಜಿಯನ್ನು ತೋರದ ಸರಕಾರದ ಜೊತೆ ಒಂದು ಪ್ರಜಾತಾಂತ್ರಿಕ ಸಂವಾದ ಮಾಡುವುದು ಈ ರ್ಯಾಲಿಯ ಉದ್ದೇಶವಾಗಿದೆ.

ಈ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚೆ ಮಾಡಲು ಸರಕಾರವು ಏಕೆ ಸಿದ್ಧವಿಲ್ಲವೆಂಬುದಕ್ಕೆ ಕಾರಣಗಳನ್ನು ಹುಡುಕುವುದು ಕಷ್ಟವೇನಿಲ್ಲ. ಈ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ತನ್ನ ವೈಫಲ್ಯವನ್ನು ಅದು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ವಾಸ್ತವವಾಗಿ, ಕೃಷಿ ಬಿಕ್ಕಟ್ಟನ್ನು ನಿರ್ಲಕ್ಷಿಸುವುದರಲ್ಲಿ ಮಾತ್ರವಲ್ಲದೆ ಕಾರ್ಪೊರೇಟ್ ಹಿತಾಸಕ್ತಿಯ ಪರವಾಗಿ ನಿಂತು ಬಿಕ್ಕಟ್ಟನ್ನು ಉಲ್ಬಣಗೊಳಿಸಿದ್ದಕ್ಕೂ ತನ್ನನ್ನು ಹೊಣೆಗಾರನನ್ನಾಗಿಸಬಹುದೆಂಬ ಭಯ ಸರಕಾರಕ್ಕಿದೆ.
ರೈತರ ಈ ಬೃಹತ್ ರ್ಯಾಲಿಯು ಹಲವಾರು ಕಾರಣಗಳಿಗಿಂತ ಮಹತ್ವದ್ದಾಗಿದೆ. ಈ ರ್ಯಾಲಿಯು ಹಲವಾರು ವರ್ಗಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ವಿದ್ಯಾರ್ಥಿಗಳು, ಕಲಾವಿದರು, ಸಿನೆಮಾ ನಿರ್ಮಾಪಕರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರು ಮತ್ತು ಟೆಕ್ಕಿಗಳು ಹಾಗೂ ಬ್ಯಾಂಕ್ ಉದ್ಯೋಗಿಗಳು ಸಹ ಈ ರೈತ ರ್ಯಾಲಿಯನ್ನು ಬೆಂಬಲಿಸುತ್ತಿದ್ದಾರೆ.

ಈ ದೇಶವು ಸಾಂಕೇತಿಕವಾಗಿ ಮಾತ್ರ ತಮ್ಮದೆಂದು ತೋರಿದರೂ ವಾಸ್ತವದಲ್ಲಿ ಅದು ಕಾರ್ಪೊರೇಟ್ ಹಿತಾಸಕ್ತಿಗಳಿಗೇ ಸೇರಿದೆಯೆಂಬ ಇಂಗಿತವನ್ನು ರೈತರು ಈ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಇದು ಭೂಮಿ, ನೀರು, ಅರಣ್ಯ ಮತ್ತು ಖನಿಜಗಳಂಥ ಕೃಷಿ ಸಂಪನ್ಮೂಲಗಳ ಹೆಚ್ಚುತ್ತಿರುವ ಖಾಸಗೀಕರಣದಲ್ಲಿ ಸ್ಪಷ್ಟಗೊಳ್ಳುತ್ತಲೇ ಇದೆ. ಸರಕಾರದ ಸಹಕಾರದೊಂದಿಗೆ ಖಾಸಗಿ ಕಂಪೆನಿಗಳು ಹಣಕಾಸು, ಬೀಜ, ಗೊಬ್ಬರ ಮತ್ತು ಮಾರುಕಟ್ಟೆಯ ಮೇಲೆ ತಮ್ಮ ನಿಯಂತ್ರಣವನ್ನು ಹೆಚ್ಚಿಸಿಕೊಳ್ಳುತ್ತಾ ಕೃಷಿಯ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿವೆೆ. ಈ ರ್ಯಾಲಿಯು ರೈತರು ಮತ್ತಷ್ಟು ಭರವಸೆಯೊಂದಿಗೆ ತಮ್ಮ ಬದುಕನ್ನು ತಾವು ರೂಪಿಸಿಕೊಳ್ಳುವ ವಿಷಯದಲ್ಲಿ ಮಾತ್ರವಲ್ಲದೆ ರೈತರು ಹತಾಶವಾಗಿ ಆತ್ಮಹತ್ಯೆ ಮಾಡಿಕೊಳ್ಳದಂಥ ಪರಿಸ್ಥಿತಿಯನ್ನು ನಿರ್ಮಿಸುವ ಮೂಲಕ ದೇಶದ ಘನತೆಯನ್ನು ಹೆಚ್ಚಿಸುವ ಮಹತ್ವದ ವಿಷಯದಲ್ಲೂ ರೈತರನ್ನು ಪರಿಗಣಿಸಲೇ ಬೇಕೆಂಬ ವಾಸ್ತವವನ್ನು ಆಳುವವರ್ಗಗಳಿಗೆ ಮನವರಿಕೆ ಮಾಡಿಕೊಡುವ ಉದ್ದೇಶವನ್ನೂ ಹೊಂದಿದೆ.

ಈ ಎಲ್ಲ ಕಾರಣಗಳಿಂದ ರ್ಯಾಲಿಯ ಉದ್ದೇಶವನ್ನು ಅರ್ಥ ಮಾಡಿಕೊಂಡು ಅದಕ್ಕೆ ಸರಕಾರ ಸ್ಪಂದಿಸಬೇಕಾಗಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಕೇಂದ್ರ ಸರಕಾರದಿಂದ ಅಂತಹದೊಂದು ಸ್ಪಂದನ ಸಿಗುವುದರ ಕುರಿತಂತೆ ಅನುಮಾನವಿದೆ. ಬೀದಿಗಿಳಿದ ರೈತರಿಗೆ ನಕ್ಸಲ್ ಪಟ್ಟ ಕಟ್ಟಿ ಅವರನ್ನು ದಮನಿಸುವ ತಂತ್ರ ಅನುಸರಿಸಿದರೂ ಅನುಮಾನವಿಲ್ಲ. ಇದು ಭೀಕರ ಸಂಘರ್ಷಕ್ಕೂ ಕಾರಣವಾಗಿಬಿಡಬಹುದು. ರೈತರು ಈ ನೆಲದ ಬಹುಮುಖ್ಯ ಭಾಗ ಎನ್ನುವುದನ್ನು ಸರಕಾರ ಇನ್ನಾದರೂ ಒಪ್ಪದೆ ಇದ್ದರೆ, ಈ ರ್ಯಾಲಿ ಎರಡನೇ ಸ್ವಾತಂತ್ರ ಹೋರಾಟಕ್ಕೊಂದು ಪೀಠಿಕೆಯಾಗಿ ಬಿಡುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News