ರಾಜಕೀಯ ಬೆರೆತರೆ ಸಹಕಾರ ಕ್ಷೇತ್ರದ ಅಸ್ತಿತ್ವಕ್ಕೆ ಧಕ್ಕೆ: ಎಂಎಲ್‍ಸಿ ಸುನಿಲ್ ಸುಬ್ರಮಣಿ

Update: 2018-11-20 11:57 GMT

ಮಡಿಕೇರಿ, ನ.20 : ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬರೆಯಬಾರದು, ರಾಜಕೀಯ ಬೆರೆತರೆ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಹೋಟೆಲ್ ವ್ಯಾಲಿವ್ಯೂವ್ ಸಂಭಾಗಣದಲ್ಲಿ ನಡೆದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ಶಿಸ್ತು ಮತ್ತು ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಅಭ್ಯುದಯ ಸಾಧ್ಯ. ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಯ ನಿರ್ವಹಿಸಿದಾಗ ಮಾತ್ರ ಸಹಕಾರ ಸಂಘದ ಬೆಳವಣಿಗೆ ಸಾಧ್ಯ ಎಂದು ಸುನಿಲ್ ಸುಬ್ರಮಣಿ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರವೇ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೇವಲ ಪ್ರಶಸ್ತಿಗಾಗಿ ದುಡಿಯದೆ ಸಂಘದ ಏಳಿಗೆಗೂ ಶ್ರಮಿಸುವಂತೆ ಸಲಹೆ ನೀಡಿದರು. ಪ್ರತಿಯೊಂದು ಬೆಳವಣಿಗೆಗೂ ಅಧಿಕಾರಿಗಳ ಸಹಕಾರ ಅಗತ್ಯವೆಂದರು.

ಜಿಲ್ಲಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ.ಮಂಜುನಾಥ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಪ್ರಮಾಣಿಕತೆ ಮತ್ತು ನಿಸ್ವಾರ್ಥ ಸೇವೆ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು. ಇತ್ತೀಚಿನ ದಿನಗಳಲ್ಲಿ ಸ್ವಾರ್ಥಮಯ ವಾತಾವರಣದ ನಡುವೆಯೇ ಸಹಕಾರ ಸಂಘದ ಬೆಳವಣಿಗೆಗೆ ಶ್ರಮಿಸಬೇಕಾದ ಅನಿವಾರ್ಯತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಎನ್ನುವುದು ಒಂದು ವ್ಯವಸ್ಥೆಯಷ್ಟೇ ಎಂದು ಅಭಿಪ್ರಾಯಪಟ್ಟ ಮಂಜುನಾಥ್, ಮಹಿಳೆಯರು ಹಾಗೂ ಯುವ ಸಮೂಹ ಕೂಡ ಸಹಕಾರ ಕ್ಷೇತ್ರದ ಅವಿಭಾಜ್ಯ ಅಂಗವಾಗಬೇಕೆಂದರು. ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಹಕಾರಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಇತರರಲ್ಲಿ ಸ್ಫೂರ್ತಿಯನ್ನು ತುಂಬಬೇಕು ಎಂದು ಕರೆ ನೀಡಿದರು. 

ಡಿಸಿಸಿ ಬ್ಯಾಂಕ್‍ನ ನಿರ್ದೇಶಕರಾದ ಕೆ.ಪಿ.ಗಣಪತಿ ಮಾತನಾಡಿ, ಸಹಕಾರ ಸಂಘಗಳಿಂದಲೇ ಕೊಡಗಿನ ರೈತರು ಹಾಗೂ ಬೆಳೆಗಾರರು ಪ್ರಗತಿಯನ್ನು ಕಾಣುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಆನ್‍ಲೈನ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಹಕಾರ ಕ್ಷೇತ್ರದಲ್ಲೂ ಜಾರಿಗೆ ತರಬೇಕೆಂದು ಮನವಿ ಮಾಡಿದರು.

ಸಹಕಾರ ಪ್ರಶಸ್ತಿ ಪ್ರದಾನ
ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಮುದ್ದಂಡ ಬಿ. ದೇವಯ್ಯ, ಸೋಮವಾರಪೇಟೆಯ ಉಷಾ ತೇಜಸ್ವಿ, ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ನಾಪೋಕ್ಲುವಿನ ಬೊಪ್ಪೇರ ಕಾವೇರಪ್ಪ, ವೀರಾಜಪೇಟೆ ತಾಲೂಕಿನ ಕರ್ನಂಡ ಎಂ. ಸೋಮಯ್ಯ, ಸೋಮವಾರಪೇಟೆ ತಾಲೂಕಿನ ಪ್ರಶಸ್ತಿಯನ್ನು ಎಂ.ಎನ್. ಕೊಮಾರಪ್ಪ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇವರೊಂದಿಗೆ ಪಟ್ಟಣ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಜಗದೀಶ್ ಹಾಗೂ ಸಹಕಾರ ಬ್ಯಾಕಿಂಕ್ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಐ.ಬಿ. ಸ್ಮಿತಾ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಉಪಾಧ್ಯಕ್ಷ ಕೆ.ಎಸ್.ಪೂವಯ್ಯ, ಜಿಲ್ಲಾ ಸಹಕಾರ ಯೂನ್‍ಯನ್ ಉಪಾಧ್ಯಕ್ಷ ಪಿ.ಸಿ.ಅಚ್ಚಯ್ಯ, ಎಂ.ಪಿ.ಮುತ್ತಪ್ಪ, ಸಹಕಾರ ಸಂಘಗಳ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News