ಸೌಹಾರ್ದ ಸಹಕಾರಿ ಸಂಘಗಳ ಲಾಭಾಂಶ ತೆರಿಗೆ ಕಡಿತಕ್ಕೆ ಆಗ್ರಹಿಸಿ ಕೇಂದ್ರಕ್ಕೆ ನಿಯೋಗ: ಸಚಿವ ಬಂಡೆಪ್ಪ ಕಾಶೆಂಪುರ್

Update: 2018-11-20 12:34 GMT

ಶಿವಮೊಗ್ಗ, ನ. 20: ಸೌಹಾರ್ದ ಸಹಕಾರಿ ಸಂಘಗಳ ಲಾಭಾಂಶಕ್ಕೆ ತೆರಿಗೆ ವಿಧಿಸುವುದನ್ನು ತಡೆಯಲು ಕೇಂದ್ರ ಸರ್ಕಾರಕ್ಕೆ ಉನ್ನತಮಟ್ಟದ ನಿಯೋಗ ಕೊಂಡೊಯ್ಯಲಾಗುವುದು ಎಂದು ಸಹಕಾರ ಇಲಾಖೆ ಸಚಿವ ಬಂಡೆಪ್ಪ ಕಾಶೆಂಪುರ್ ತಿಳಿಸಿದ್ದಾರೆ.

ನಗರದ ಎನ್.ಇ.ಎಸ್. ಮೈದಾನ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 65 ನೇ ಅಖಿಲ ಭಾರತ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದ ನಂತರ ಸಭಿಕರನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದ ಸಹಕಾರಿ ರಂಗಕ್ಕೆ ತನ್ನದೆ ಆದ ಇತಿಹಾಸವಿದೆ. ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದೆ. ಹಾಗೆಯೇ ಸೌಹಾರ್ದ ಸಹಕಾರಿ ಸಂಸ್ಥೆಗಳು ಕೂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯ ಬಂಡವಾಳ ಕ್ರೋಢೀಕರಿಸಿಕೊಂಡು ಸಾಧನೆ ಮಾಡುತ್ತಿವೆ. ಲಾಭಾಂಶ ಕೂಡ ತರುತ್ತಿವೆ. ಆದರೆ ಕೇಂದ್ರ ಸರ್ಕಾರದ ಸಂಬಂಧಿಸಿದ ಕಾಯ್ದೆಯನುಸಾರ, ಸೌಹಾರ್ದ ಸಹಕಾರಿ ಸಂಸ್ಥೆಗಳ ಲಾಭಾಂಶಕ್ಕೆ ತೆರಿಗೆ ವಿಧಿಸಲಾಗುತ್ತಿದೆ. ಇದು ಸಹಕಾರಿಗಳಿಗೆ ಹೊರೆಯಾಗಿ ಪರಿಣಮಿಸುತ್ತಿದೆ ಎಂದು ಹೇಳಿದರು.

ಈ ತೆರಿಗೆಯನ್ನು ಸ್ಥಗಿತಗೊಳಿಸಬೇಕು ಎಂಬುವುದು ಸಹಕಾರಿಗಳ ಬಹುದಿನದ ಬೇಡಿಕೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಶೀಘ್ರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೈಟ್ಲಿ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು. ಲಾಭಾಂಶದ ಮೇಲೆ ತೆರಿಗೆ ವಿಧಿಸುವ ನಿಯಮಕ್ಕೆ ತಿದ್ದುಪಡಿ ತರುವಂತೆ ಒತ್ತಾಯಿಸಲಾಗುವುದು ಎಂದರು.

ರಾಜ್ಯ ಸರ್ಕಾರವು ಸಹಕಾರ ಕ್ಷೇತ್ರದ ಪ್ರಗತಿಗೆ ಹಲವು ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಕಾಯಕ ಯೋಜನೆ ಕಾರ್ಯಗತಗೊಳಿಸಲಿದೆ. ಈ ಯೋಜನೆಯಡಿ 10 ಲಕ್ಷ ರೂ.ಗಳವರೆಗೆ ಸಾಲ ನೀಡಲಾಗುವುದು. 5 ಲಕ್ಷ ರೂ.ಗಳವರೆಗೆ ಶೇ. 4 ರಷ್ಟು ಹಾಗೂ ಉಳಿದ 5 ಲಕ್ಷ ರೂ.ಗಳಿಗೆ ಬಡ್ಡಿ ರಹಿತವಾಗಿ ಸಾಲ ಕೊಡಲಾಗುತ್ತದೆ. ಸ್ವ ಸಹಾಯ ಗುಂಪುಗಳು ಇದರ ಲಾಭ ಪಡೆದು ಆರ್ಥಿಕ ಪ್ರಗತಿ ಸಾಧಿಸಬಹುದಾಗಿದೆ. ಡಿಸೆಂಬರ್‍= ನಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದರು.

ನಗರ-ಪಟ್ಟಣ ಪ್ರದೇಶಗಳ ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಯಾವ ಭದ್ರತೆಯೂ ಇಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ 2 ಸಾವಿರದಿಂದ 10 ಸಾವಿರ ರೂ.ಗಳವರೆಗೆ ಸಾಲ ನೀಡಲಾಗುವುದು. ಈ ಯೋಜನೆ ನ. 22 ರಂದು ಬೆಂಗಳೂರಿನ ಎಪಿಎಂಸಿಯಲ್ಲಿ ಚಾಲನೆಗೊಳ್ಳಲಿದೆ. ನಂತರ ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು. ಶಿವಮೊಗ್ಗದ 3 ಸಾವಿರ ಸೇರಿದಂತೆ ರಾಜ್ಯದ ಸುಮಾರು 53 ಸಾವಿರ ಬೀದಿ ಬದಿ ವ್ಯಾಪಾರಿಗಳು ಈ ಸಾಲಸೌಲಭ್ಯದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಟಿ.ಹೆಚ್.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮುಖಂಡ ಎಸ್.ಪಿ.ದಿನೇಶ್ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News